ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಕಲ್ಕಾಜಿ ಕ್ಷೇತ್ರದಿಂದ ಸಿಎಂ ಅತಿಶಿ ಗೆಲುವಿನ ನಗೆ ಬೀರಿದ್ದಾರೆ.
ಕಲ್ಕಾಜಿ ಕ್ಷೇತ್ರವು ಯಾರ ಪಾಲಾಗಲಿದೆ ಎಂಬುದು ಕೊನೆ ವರೆಗಿನ ಕುತೂಹಲವಾಗಿತ್ತು. ಮತ ಎಣಿಕೆಯಲ್ಲಿ ಬಿಜೆಪಿ ಮತ್ತು ಎಎಪಿ ನಡುವೆ ತೀವ್ರ ಪೈಪೋಟಿ ಇತ್ತು. ಆರಂಭದಲ್ಲಿ ದೆಹಲಿ ಸಿಎಂ ಅತಿಶಿ ಹಿನ್ನಡೆ ಅನುಭವಿಸಿದ್ದರು.
2020ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅತಿಶಿ ಗೆದ್ದಿದ್ದರು. ಈ ಬಾರಿ ಬಿಜೆಪಿಯ ರಮೇಶ್ ಬಿಧುರಿ ಹಾಗೂ ಕಾಂಗ್ರೆಸ್‌ನ ಅಲ್ಕಾ ಲಂಬಾ ವಿರುದ್ಧ ಕಣಕ್ಕಿಳಿದಿದ್ದರು. ಬಿಜೆಪಿ ಅಭ್ಯರ್ಥಿ ಚುನಾವಣೆಯಲ್ಲಿ ಪ್ರಬಲ ಪೈಪೋಟಿ ನೀಡಿದ್ದರು.
ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿಯ ಭರ್ಜರಿ ಗೆಲುವು ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಉನ್ನತ ನಾಯಕರ ಆಘಾತಕಾರಿ ಸೋಲುಗಳ ಹೊರತಾಗಿಯೂ ಮುಖ್ಯಮಂತ್ರಿ ಅತಿಶಿ ದಕ್ಷಿಣ ದೆಹಲಿಯ ಕಲ್ಕಾಜಿ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಎಎಪಿ ನಾಯಕರಾದ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಜೈಲು ಸೇರಿದಾಗ, ಸರ್ಕಾರವನ್ನು ಅತಿಶಿ ಮುನ್ನಡೆಸಿದ್ದರು. ಕೇಜ್ರಿವಾಲ್ ಜೈಲಿಂದ ಹೊರಬಂದಾಗ, ನಾಯಕಿ ಅತಿಶಿ ಅವರು ದೆಹಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.