ನವದೆಹಲಿ: ಬಿಜೆಪಿ ನಾಯಕ ರಮೇಶ್ ಬಿಧೂರಿ ಅವರು ತಮ್ಮ ತಂದೆ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ದೆಹಲಿ ಮುಖ್ಯಮಂತ್ರಿ ಅತಿಶಿ ಅವರು ಕಣ್ಣೀರು ಹಾಕಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಿಜೆಪಿಯ ಕಲ್ಕಾಜಿ ಕ್ಷೇತ್ರದ ಅಭ್ಯರ್ಥಿ ಬಿಧೂರಿ ಅವರ ಆಕ್ಷೇಪಾರ್ಹ ಹೇಳಿಕೆಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ತೀವ್ರ ಭಾವುಕರಾಗಿ ಮಾತನಾಡಿದ ಅವರು, ನನ್ನ ತಂದೆ ಅವರು ಜೀವನದುದ್ದಕ್ಕೂ ಬಡ ಮತ್ತು ಕೆಳ ಮಧ್ಯಮ ವರ್ಗದ ಸಾವಿರಾರು ಮಕ್ಕಳಿಗೆ ಪಾಠ ಮಾಡಿದ್ದಾರೆ. ಅವರಿಗೆ ಈಗ 80 ವರ್ಷ ವಯಸ್ಸಾಗಿದೆ. ಈಗ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಅವರಿಗೆ ಬೇರೊಬ್ಬರ ಸಹಾಯವಿಲ್ಲದೆ ನಡೆಯಲು ಸಹ ಸಾಧ್ಯವಿಲ್ಲ. ಚುನಾವಣೆ ಅಥವಾ ರಾಜಕೀಯದ ಕಾರಣಕ್ಕೆ ಅಂತಹ ವೃದ್ಧರನ್ನು ಗುರಿಯಾಗಿಸಿಕೊಂಡು ಮಾತನಾಡುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
‘ನಮ್ಮ ರಾಜಕಾರಣ ಇಷ್ಟೊಂದು ಕೆಳಮಟ್ಟಕ್ಕೆ ಇಳಿದಿದ್ದು ಹೇಗೆ? 10 ವರ್ಷ ಸಂಸದರಾಗಿದ್ದಾಗ ಕಲ್ಕಾಜಿ ಕ್ಷೇತ್ರಕ್ಕೆ ಏನು ಕೆಲಸ ಮಾಡಿದ್ದಾರೆ ಎಂಬುದನ್ನು ಬಿಧೂರಿ ತೋರಿಸಬೇಕು. ಅವರು ನನ್ನ ತಂದೆಯನ್ನು ನಿಂದಿಸದೆ ತಮ್ಮ ಕೆಲಸದ ಆಧಾರದ ಮೇಲೆ ಮತ ಕೇಳಬೇಕು ಎಂದು ಸವಾಲು ಹಾಕಿದ್ದಾರೆ.
ಭಾನುವಾರ ರೋಹಿಣಿಯಲ್ಲಿ ನಡೆದ ಬಿಜೆಪಿಯ ರ‍್ಯಾಲಿಯಲ್ಲಿ ಮಾತನಾಡಿದ ರಮೇಶ್ ಬಿಧೂರಿ, ದೆಹಲಿ ಮುಖ್ಯಮಂತ್ರಿ ಅತಿಶಿ ತಮ್ಮ ತಂದೆಯನ್ನೇ ಬದಲಾಯಿಸಿಕೊಂಡಿದ್ದಾರೆ. ಅತಿಶಿ ತಮ್ಮ ಸರ್ನೇಮ್ ಅನ್ನು ಮರ್ಲೆನಾನಿಂದ ಸಿಂಗ್ ಎಂದು ಬದಲಾಯಿಸಿಕೊಂಡಿದ್ದಾರೆ. ಕೇಜ್ರಿವಾಲ್ ಭ್ರಷ್ಟ ಕಾಂಗ್ರೆಸ್ ಜೊತೆ ಹೋಗಲ್ಲ ಎಂದು ಮಕ್ಕಳ ಮೇಲೆ ಆಣೆ ಮಾಡಿದ್ದರು ಎಂದು ವಾಗ್ದಾಳಿ ನಡೆಸಿದ್ದರು.