ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ಗೆ ಜಾಮೀನು ಮಂಜೂರು

Public TV
3 Min Read
Arvind Kejriwal

ನವದೆಹಲಿ: ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿದ್ದ  ಸಿಎಂ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಕಳೆದ ತಿಂಗಳು ಬಂಧನಕ್ಕೊಳಗಾದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ಸಾಮಾನ್ಯ ಜಾಮೀನು (Bail) ಅರ್ಜಿ ವಿಚಾರಣೆ ನಡೆಸಿದ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಗುರುವಾರ ತೀರ್ಪನ್ನು ಕಾಯ್ದಿರಿಸಿತ್ತು. ನ್ಯಾಯಾಧೀಶರಾದ ನಿಯಯ್ ಬಿಂದು ಎರಡು ದಿನಗಳ ಕಾಲ ಈ ಪ್ರಕರಣದ ಸುದೀರ್ಘ ವಿಚಾರಣೆ ಆಲಿಸಿ ಇಂದು ಜಾಮೀನು ಮಂಜೂರು ಮಾಡಿದರು.

ಮೇಲ್ಮನವಿ ಸಲ್ಲಿಸುವ ಉದ್ದೇಶದಿಂದ ಜಾಮೀನು ಬಾಂಡ್‌ಗೆ ಸಹಿ ಹಾಕಲು 48 ಗಂಟೆಗಳ ಕಾಲಾವಕಾಶ ನೀಡುವಂತೆ ಇಡಿ ಮನವಿ ಮಾಡಿತ್ತು. ಈ ಮನವಿಯನ್ನು ತಿರಸ್ಕರಿಸಿದ ಕೋರ್ಟ್‌ ಶುಕ್ರವಾರ 1 ಲಕ್ಷ ರೂ. ಬಾಂಡ್ ಸಲ್ಲಿಕೆಗೆ ಕೇಜ್ರಿವಾಲ್ ಪರ ವಕೀಲರಿಗೆ ಸೂಚನೆ ನೀಡಿತು. ಎಲ್ಲಾ ಪ್ರಕ್ರಿಯೆಗಳು ಸರಿಯಾಗಿ ಮುಗಿದರೆ ಕೇಜ್ರಿವಾಲ್‌ ನಾಳೆ ಜೈಲಿನಿಂದ ಹೊರ ಬರುವ ಸಾಧ್ಯತೆಯಿದೆ.

ವಿಚಾರಣೆ ವೇಳೆ ವಾದ ಮಂಡಿಸಿದ ಇಡಿ ಪರ ವಕೀಲ ಎಎಸ್‌ಜಿ ಎಸ್‌ವಿ ರಾಜು, 2021-22ರ ದೆಹಲಿ ಮದ್ಯ ನೀತಿಯಲ್ಲಿ ಉದ್ದೇಶಪೂರ್ವಕವಾಗಿ ಲೋಪದೋಷಗಳನ್ನು ಮಾಡಲು ಕಿಕ್‌ಬ್ಯಾಕ್ ಪಡೆಯಲಾಗಿದೆ. ಈ ಹಣವನ್ನು ಗೋವಾ ಚುನಾವಣೆಗೆ ಬಳಸಿದೆ. ಇದಕ್ಕೆ ಪೂರಕವಾದ ಎಲ್ಲಾ ಸಾಕ್ಷಿಗಳು ಇಡಿ ಬಳಿ ಇದೆ. ಗೋವಾದಲ್ಲಿ ಅರವಿಂದ್ ಕೇಜ್ರಿವಾಲ್ ತಂಗಿದ್ದ ಹೋಟೆಲ್ ಬಾಡಿಗೆ ಒಂದು ಲಕ್ಷ ರೂಪಾಯಿಯನ್ನು ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಬ್ಬರು ಪಾವತಿಸಿದ್ದಾರೆ. ಅವರು ಕಿಕ್‌ಬ್ಯಾಕ್ ರೂಪದಲ್ಲಿ ಬಂದ ಸುಮಾರು 40 ಕೋಟಿ ರೂ. ಪಡೆದುಕೊಂಡಿದ್ದಾರೆ. ಇದನ್ನು ಹೊರತುಪಡಿಸಿ ಇನ್ನಷ್ಟು ಸಾಕ್ಷಿಗಳಿದೆ ಎಂದು ತಿಳಿಸಿದರು.

AAP Rally arvind kejriwal

 

ಇಡಿ ಗಾಳಿಯಲ್ಲಿ ಗುಂಡು ಹಾರಿಸುತ್ತಿಲ್ಲ. ತಮ್ಮ ತನಿಖೆಯಲ್ಲಿ ಅಸಮರ್ಪಕ ದಾಖಲೆಗಳನ್ನು ಇಟ್ಟುಕೊಂಡಿದೆ. ಕಿಕ್‌ಬ್ಯಾಕ್ ರೂಪದಲ್ಲಿ ಪಡೆದ ಹಣ ಫೋಟೋಗಳು ಲಭ್ಯವಿದೆ. ಇದೇ ಹಣವನ್ನು ಗೋವಾ ಚುನಾವಣಾ ಪ್ರಚಾರಕ್ಕೆ ಬಳಸಿದೆ. ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಮೊಬೈಲ್ ಪಾಸ್‌ವರ್ಡ್ ನೀಡಲು ನಿರಾಕರಿಸುತ್ತಿದ್ದಾರೆ. ಹೀಗಾಗಿ ಪ್ರತಿಕೂಲವಾದ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅವರು ತಮ್ಮ ಫೋನ್ ಪಾಸ್‌ವರ್ಡ್ ಹೇಳಿದರೆ ಇನ್ನಷ್ಟು ಮಾಹಿತಿ ಸಿಗಲಿದೆ ಎಂದು ಹೇಳಿದರು.

ಕೇಜ್ರಿವಾಲ್ ಅವರು ವೈಯಕ್ತಿಕವಾಗಿ ಯಾವುದೇ ಅಪರಾಧದಲ್ಲಿ ಭಾಗಿಯಾಗದಿದ್ದರೂ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಬಹುದು. ಅವರು ನೇರವಾಗಿ ಅಪರಾಧ ಮಾಡದೇ ಇರಬಹುದು. ಆದರೆ ಎಎಪಿ ಪಕ್ಷದ ವ್ಯವಹಾರಗಳಿಗೆ ಜವಾಬ್ದಾರರಾಗಿರುತ್ತಾರೆ. ಒಂದು ವೇಳೆ ಎಎಪಿ ಅಪರಾಧದಲ್ಲಿ ತಪ್ಪಿತಸ್ಥರಾಗಿದ್ದರೆ ಸೆಕ್ಷನ್ 70 ಪಿಎಂಎಲ್‌ಎ ಪ್ರಕಾರ ಅವರು ತಪ್ಪಿತಸ್ಥರಾಗುತ್ತಾರೆ ಎಂದು ಎಸ್‌ವಿ ರಾಜು ವಾದಿಸಿದರು.

ಇಡಿ ಆರೋಪಕ್ಕೆ ಅರವಿಂದ್ ಕೇಜ್ರಿವಾಲ್ ಪರ ವಕೀಲ ವಿಕ್ರಮ್ ಚೌಧರಿ ಆಕ್ಷೇಪ ವ್ಯಕ್ತಪಡಿಸಿದರು. ಇಡಿ ಒಂದು ಸ್ವತಂತ್ರ ಸಂಸ್ಥೆಯೇ ಅಥವಾ ಕೆಲವು ರಾಜಕೀಯ ಯಜಮಾನರ ಕೈಯಲ್ಲಿ ಆಟವಾಡುತ್ತಿದೆಯೇ? ಇಡಿ ಊಹೆಯ ಆಧಾರದ ಮೇಲೆ ತನ್ನ ಎಲ್ಲಾ ತೀರ್ಮಾನಗಳನ್ನು ತೆಗೆದುಕೊಳ್ಳುತ್ತದೆ. ಅವರು ಇನ್ನೂ ವಸ್ತುಗಳನ್ನು ಸಂಗ್ರಹಿಸುತ್ತಿದ್ದರೆ ಅದು ಅಂತ್ಯವಿಲ್ಲದ ತನಿಖೆಯಾಗುತ್ತದೆ. ಆಪ್‌ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ಅದಕ್ಕಾಗಿಯೇ ಪಕ್ಷವು ಮಾಡಿದ ಪ್ರತಿಯೊಂದಕ್ಕೂ ಜವಾಬ್ದಾರಾಗುತ್ತಾರೆ ಎಂದು ಅವರು ಹೇಳುತ್ತಾರೆ. ಇದು ಊಹಾಪೋಹಗಳು, ಪೂರ್ವಾಗ್ರಹ. ಸಾಕ್ಷಿ ಇಲ್ಲದೇ 100 ಕೋಟಿ ಲಂಚ ಸ್ವೀಕರಿಸಲಾಗಿದೆ ಎಂದು ಹೇಳಿಕೆ ನೀಡುತ್ತಲೇ ಇದ್ದಾರೆ ಎಂದು ಚೌಧರಿ ವಾದಿಸಿದರು. ಕೇಜ್ರಿವಾಲ್ ಅವರನ್ನು ವಿಶೇಷ ವ್ಯಕ್ತಿ ಎಂದು ಪರಿಗಣಿಸಬೇಡಿ. ಅವರು ವಿಶೇಷ ವ್ಯಕ್ತಿ ಎಂದು ಪರಿಗಣಿಸಲು ಬಯಸುವುದಿಲ್ಲ. ಆದರೆ ದಯವಿಟ್ಟು ಸಾಮಾನ್ಯ ವ್ಯಕ್ತಿಯಂತೆ ಪರಿಗಣಿಸಿ ಎಂದು ಮನವಿ ಮಾಡಿದರು.

ಲೋಕಸಭಾ ಚುನಾವಣೆಯ ಸಮಯದಲ್ಲಿ ಸುಪ್ರೀಂ ಕೋರ್ಟ್‌ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.  ಜೂನ್‌ 2 ರಂದು ಕೇಜ್ರಿವಾಲ್‌ ಮರಳಿ ದೆಹಲಿಯ  ತಿಹಾರ್‌ ಜೈಲಿಗೆ ಹೋಗಿದ್ದರು.

Share This Article