ನವದೆಹಲಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು ಕರೆ ಕೊಟ್ಟಿರುವ ದೆಹಲಿ ಚಲೋ (Delhi Chalo) ಹೋರಾಟಕ್ಕೆ ದೆಹಲಿಯ ಆಮ್ ಆದ್ಮಿ ಸರ್ಕಾರ ಬೆಂಬಲ ನೀಡಿದೆ. ಬವಾನಾ ಸ್ಟೇಡಿಯಂನ್ನು ಜೈಲಾಗಿ ಪರಿವರ್ತಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸಿರುವ ಕೇಜ್ರಿವಾಲ್ ಸರ್ಕಾರ ಅನ್ನದಾತರನ್ನು ಜೈಲಿಗೆ ಹಾಕುವುದು ತಪ್ಪು ಎಂದು ಹೇಳಿದೆ.
Advertisement
ರೈತರ ಪ್ರತಿಭಟನೆಯಲ್ಲಿ (Farmers Protest) ಬಂಧಿತರಾದ ಪ್ರತಿಭಟನಾಕಾರರಿಗೆ ಬವಾನಾ ಕ್ರೀಡಾಂಗಣವನ್ನು ತಾತ್ಕಾಲಿಕ ಜೈಲಾಗಿ ಪರಿವರ್ತಿಸಿ, ವ್ಯವಸ್ಥೆ ಮಾಡಿಕೊಡುವಂತೆ ಸೋಮವಾರ ಕೇಂದ್ರ ಸರ್ಕಾರ ದೆಹಲಿ (Delhi) ಸರ್ಕಾರಕ್ಕೆ ಪತ್ರ ಬರೆದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೆಹಲಿ ಸರ್ಕಾರ ರೈತರ ಬೇಡಿಕೆಗಳು ನ್ಯಾಯಸಮ್ಮತವಾಗಿದೆ. ಶಾಂತಿಯುತ ಪ್ರತಿಭಟನೆಯು ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನ ಹಕ್ಕು ಎಂದು ಹೇಳಿದೆ.
Advertisement
Advertisement
ಇಂದು (ಮಂಗಳವಾರ) ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸದಂತೆ ರೈತರ `ದೆಹಲಿ ಚಲೋ’ ಮೆರವಣಿಗೆಯನ್ನು ತಡೆಯಲು ದೆಹಲಿ ಗಡಿಗಳಲ್ಲಿ ಹಲವು ಹಂತದಲ್ಲಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಬ್ಯಾರಿಕೇಡ್‍ಗಳು, ಕಾಂಕ್ರೀಟ್ ಬ್ಲಾಕ್‍ಗಳು, ಕಬ್ಬಿಣದ ಮೊಳೆಗಳು ಮತ್ತು ಕಂಟೈನರ್‍ಗಳನ್ನು ಬಳಸಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರೈತ ಮುಖಂಡರು ಮತ್ತು ಕೇಂದ್ರದ ನಡುವಿನ ಮಾತುಕತೆ ವಿಫಲವಾದ ಬಳಿಕ ರೈತರನ್ನು ಗಡಿಯಲ್ಲಿ ತಡೆಯುವ ಪ್ರಯತ್ನ ಆರಂಭವಾಗಿದೆ.
Advertisement
ಸಿಂಘು, ಟಿಕ್ರಿ ಮತ್ತು ಘಾಜಿಪುರ ಗಡಿಗಳಲ್ಲಿ ಗಲಭೆ ನಿಗ್ರಹ ಪಡೆಗಳಲ್ಲಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ರೈತರ ಪ್ರತಿಭಟನಾ ಮೆರವಣಿಗೆ ಸಲುವಾಗಿ ನಿರ್ದಿಷ್ಟ ಸ್ಥಳಗಳಲ್ಲಿ ತಾತ್ಕಾಲಿಕ ಜೈಲುಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.