– ತರಾತುರಿಯಲ್ಲಿ ಸ್ಫೋಟ ನಡೆಸಿದ್ರಾ ಉಗ್ರರು?
– 2,900 ಕೆಜಿ ಸ್ಫೋಟಕ ಮತ್ತು ದೆಹಲಿ ಸ್ಫೋಟ!
ನವದೆಹಲಿ: ಕೆಂಪು ಕೋಟೆ ಬಳಿ ಸಂಭವಿಸಿದ ಭೀಕರ ಕಾರು ಸ್ಫೋಟದ (Delhi Car Explosion) ಪ್ರಾಥಮಿಕ ತನಿಖೆಯಲ್ಲಿ ಇದು ಭಯೋತ್ಪಾದಕ ದಾಳಿಯಾಗಿರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ ಎಂದು ವರದಿಗಳು ತಿಳಿಸಿವೆ.
ಸೋಮವಾರ ಸಂಜೆ 6:55ರ ವೇಳೆ ಸಂಭವಿಸಿದ ಸ್ಫೋಟವು ಸುಮಾರು 10 ಮಂದಿಯನ್ನು ಬಲಿ ಪಡೆದುಕೊಂಡಿದೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಲೋಕ ನಾಯಕ್ ಜೈಪ್ರಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 6 ಮಂದಿ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ. ಈ ನಡುವೆ ತನಿಖೆಗೆ ಇಳಿದಿರುವ ದೆಹಲಿ ಪೊಲೀಸರ ತಂಡ ಇದು ಭಯೋತ್ಪಾದಕ ದಾಳಿಯಾಗಿರಬಹುದು ಎಂದು ಶಂಕಿಸಿದೆ ಎಂದು ಹೇಳಲಾಗ್ತಿದೆ.
ಸ್ಫೋಟದ ತೀವ್ರತೆಗೆ ಇ-ರಿಕ್ಷಾಗಳು, ಕಾರುಗಳು ಸೇರಿ 22 ವಾಹನಗಳು ಅಗ್ನಿಗೆ ಆಹುತಿಯಾಗಿದೆ. ಇದರ ತೀವ್ರತೆ ಗಮನಿಸಿದ್ರೆ ಫರಿದಾಬಾದ್‌ನಲ್ಲಿ ವಶಪಡಿಸಿಕೊಂಡ 2,900 Kg ಸ್ಫೋಟಕಗಳ ಮಾಡ್ಯೂಲ್‌ಗೆ ಸಂಬಂಧಿಸಿದ್ದಾಗಿದೆ. ಜೊತೆಗೆ ಸ್ಫೋಟವು ರಾಸಾಯನಿಕ ಮಿಶ್ರಣದಿಂದ ಕೂಡಿರಬಹುದು. ಭದ್ರತಾ ಪಡೆಗಳು ಶಂಕಿತ ಉಗ್ರ ಡಾ. ಮುಝಾಮಿಲ್ ಮತ್ತು ಡಾ. ಆದಿಲ್ ಇಬ್ಬರನ್ನೂ ಬಂಧಿಸಿದ ಬಳಿಕ ತರಾತುರಿಯಲ್ಲಿ ಸ್ಫೋಟ ನಡೆಸಿರುವ ಶಂಕೆಯಿದೆ ಎಂದು ದೆಹಲಿ ಪೋಲೀಸ್ ಮಾಧ್ಯಮಗಳಿಗೆ ತಿಳಿಸಿರುವುದಾಗಿ ವರದಿಯಾಗಿದೆ. ಆದಾಗ್ಯೂ, ಈವರೆಗೆ ಯಾವುದೇ ಉಗ್ರ ಸಂಘಟನೆಗಳಾಗಲಿ, ಪ್ರತ್ಯೇಕತಾವಾದಿಗಳ ಗುಂಪಾಗಲಿ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಜೈಶ್ ಸಂಘಟನೆಯೊಂದಿಗೆ ನಂಟಿದೆಯೇ?
ದೆಹಲಿಯಲ್ಲಿ ಸ್ಫೋಟ ಸಂಭವಿಸೋದಕ್ಕೆ ಕೆಲ ಗಂಟೆಗಳಿಗೆ ಮುನ್ನ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜೈಶ್ ಎ ಮೊಹಮ್ಮದ್ (JeM) ಹಾಗೂ ಅನ್ಸರ್ ಘಜ್ವತ್-ಉಲ್-ಹಿಂದ್ (AGUH) ಉಗ್ರ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಅಂತಾರಾಷ್ಟ್ರೀಯ ಭಯೋತ್ಪಾದನಾ ಮಾಡ್ಯೂಲ್ ಭೇದಿಸಿದ್ದರು. ಮೂವರು ವೈದ್ಯರು ಸೇರಿ 8 ಮಂದಿಯನ್ನ ಬಂಧಿಸಿದ್ದರು. ಬಂಧಿತರಲ್ಲಿ ಓರ್ವ ಮಹಿಳಾ ವೈದ್ಯೆ ಕೂಡ ಇದ್ದಳು. ಆ ಬಳಿಕ ಫರಿದಾಬಾದ್‌ನಲ್ಲಿ ತೀವ್ರ ಶೋಧ ನಡೆಸಿದ್ದ ಜೆ&ಕೆ ಪೊಲೀಸರ ತಂಡ 2,900 ಕೆಜಿ ಐಇಡಿ ತಯಾರಿಸುವ ಸ್ಫೋಟಕ ವಸ್ತುಗಳು, ಎಲೆಕ್ಟ್ರಾನಿಕ್ ಸಾಧನಗಳು, ಜೀವಂತ ಮದ್ದುಗುಂಡುಗಳನ್ನ ವಶಪಡಿಸಿಕೊಂಡಿತ್ತು. ಇದಾದ ಕೆಲವೇ ಗಂಟೆಗಳಲ್ಲಿ ದೆಹಲಿಯಲ್ಲಿ ಕಾರು ಸ್ಫೋಟ ಸಂಭವಿಸಿದೆ.
ಸದ್ಯ ಸ್ಥಳದಲ್ಲೇ ಬೀಡುಬಿಟ್ಟಿರುವ ಎನ್‌ಐಎ, ಎನ್‌ಎಸ್‌ಜಿ, ದೆಹಲಿ ಪೊಲೀಸ್ ವಿಶೇಷ ಘಟಕ ಹಾಗೂ ದೆಹಲಿ ಸಿಟಿ ಪೊಲೀಸರ ತಂಡಗಳು ಪ್ರತಿಯೊಂದು ದೃಷ್ಟಿಕೋನದಲ್ಲೂ ತನಿಖೆ ನಡೆಸುತ್ತಿವೆ. ಈ ಮಧ್ಯೆ ಪ್ರಾಥಮಿಕ ತನಿಖೆಯಲ್ಲಿ ಇದು ಭಯೋತ್ಪಾದಕ ದಾಳಿ ಇರಬಹುದು ಅನ್ನೋ ಶಂಕೆ ವ್ಯಕ್ತವಾಗಿದೆ. ಮಾಡ್ಯೂಲ್‌ನ ಪ್ರಮುಖ ಉಗ್ರರನ್ನು ಬಂಧಿಸಿದ ಬಳಿಕ ಜನಸಂದಣಿ ಪ್ರದೇಶವನ್ನು ಗುರಿಯಾಗಿಸಿ ದಾಳಿ ನಡೆಸಿರಬಹುದು. ಹೆಚ್ಚಿನ ತನಿಖೆ ಬಳಿಕ ನಿಖರ ಮಾಹಿತಿ ತಿಳಿಯಲಿದೆ ಎನ್ನಲಾಗುತ್ತಿದೆ.




