ನವದೆಹಲಿ: ಕೆಂಪುಕೋಟೆ ಬಳಿ ಸಂಭವಿಸಿದ್ದ ಸ್ಫೋಟಕ್ಕೆ (Delhi Blast) ಸಂಬಂಧಿಸಿದಂತೆ ದಿನೇ ದಿನೇ ಒಂದೊಂದೇ ಮಾಹಿತಿಗಳು ಬಹಿರಂಗವಾಗುತ್ತಿವೆ. ಇದೀಗ ಉಗ್ರ ಉಮರ್ (Umar Nabi) ತನ್ನ ಕಾರನ್ನು ಪಾರ್ಕ್ ಮಾಡಿದ್ದ ಸ್ಥಳದಲ್ಲಿ, ಕಾರಿನಲ್ಲೇ ಕುಳಿತು ಬಾಂಬ್ ಜೋಡಣೆ ಮಾಡಿದ್ದ ಎಂದು ತನಿಖಾ ತಂಡಗಳು ಮಾಹಿತಿ ನೀಡಿವೆ.
ಸ್ಫೋಟಕ್ಕೂ ಮುನ್ನ ಪ್ರಕರಣ ಪ್ರಮುಖ ರೂವಾರಿ ಉಮರ್‌ನ ಚಲನವಲನಗಳನ್ನು ಪತ್ತೆ ಹಚ್ಚುವಾಗ ಈ ಅಂಶ ಹೊರಬಿದ್ದಿದೆ. ಸ್ಫೋಟಗೊಂಡ ಕಾರು ಮೂರು ಗಂಟೆಗಳ ಕಾಲ ಪಾರ್ಕಿಂಗ್‌ನಲ್ಲಿಯೇ ನಿಂತಿತ್ತು. ಈ ವೇಳೆ ಮೂರು ಗಂಟೆಗಳ ಕಾಲ ಕಾರಿನಲ್ಲೇ ಕುಳಿತಿದ್ದ ಉಮರ್ ಅಲ್ಲೇ ಬಾಂಬ್ ತಯಾರು ಮಾಡಿದ್ದ. ಬಾಂಬ್ ಸ್ಫೋಟಿಸಲು ಮನೆಯಲ್ಲಿ ಬಳಸುವಂತೆ ಆನ್-ಆಫ್ ಸ್ವಿಚ್ ವ್ಯವಸ್ಥೆ ಕೂಡ ಮಾಡಿಕೊಂಡಿದ್ದ ಅನ್ನೋದು ತನಿಖಾ ತಂಡದ ಮೂಲಗಳಿಂದ ತಿಳಿದುಬಂದಿದೆ.ಇದನ್ನೂ ಓದಿ: ಡಾ.ಉಮರ್ ಬಾಂಬ್ ಎಕ್ಸ್‌ಪರ್ಟ್ – 10 ನಿಮಿಷದಲ್ಲಿ ಬಾಂಬ್ ತಯಾರಿಸಿದ್ನಾ ಉಗ್ರ? ಕಾರಿನೊಳಗೆ ಹೇಗಿತ್ತು ಸೆಟಪ್?
ಮೂಲಗಳ ಪ್ರಕಾರ, ಘಟನೆ ನಡೆದ ದಿನ ಬೆಳಿಗ್ಗೆ ಉಮರ್ ದೆಹಲಿಗೆ ಬಂದಿದ್ದ. ಈ ವೇಳೆ ಡೀಲರ್‌ಗಳೊಂದಿಗೆ ಸಂಪರ್ಕದಲ್ಲಿದ್ದ. ಉಮರ್ ಮಯೂರ್ ವಿಹಾರ್ ಮತ್ತು ಕನ್ನಾಟ್ ಪ್ಲೇಸ್ ಮೂಲಕ ಹಾದು ಹೋಗಿ ಕೆಂಪುಕೋಟೆ ಬಳಿಕ ಪಾರ್ಕಿಂಗ್ ಏರಿಯಾಗೆ ಬಂದಿದ್ದ. ಆದರೆ ಆ ದಿನ ಕೆಂಪುಕೋಟೆ ಪ್ರವಾಸಿಗರಿಗೆ ಮುಚ್ಚಲಾಗಿರುತ್ತದೆ ಎಂಬುವುದು ಉಮರ್ ಗಮನಕ್ಕೆ ಬಂದಿರಲಿಲ್ಲ. ಜೊತೆಗೆ ಪಾರ್ಕಿಂಗ್ ಏರಿಯಾ ಕೂಡ ಖಾಲಿಯಾಗಿತ್ತು. ಹೀಗಾಗಿ ಉಮರ್ ಹೆಚ್ಚು ಜನರಿಂದ ಕೂಡಿರುತ್ತಿದ್ದ ನೇತಾಜಿ ಸುಭಾಷ್ ಮಾರ್ಗದಲ್ಲಿ ಸ್ಫೋಟಿಸಲು ಪ್ಲ್ಯಾನ್ ಹಾಕಿಕೊಂಡ ಎಂದು ತಿಳಿದುಬಂದಿದೆ.
ಸ್ಥಳೀಯ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಘಟನೆ ನಡೆದ ದಿನ ಮಧ್ಯಾಹ್ನ 3:19ಕ್ಕೆ ಸ್ಫೋಟಗೊಂಡ ಕಾರು ಪಾರ್ಕಿಂಗ್ ಏರಿಯಾಗೆ ಬಂದಿದೆ. ಪಾರ್ಕಿಂಗ್‌ನಲ್ಲೇ ಮೂರು ಗಂಟೆಗಳ ಕಾಲ ಬಾಂಬ್‌ನ್ನು ಜೋಡಣೆ ಮಾಡಿ, ಬಳಿಕ ಅದೇ ದಿನ ಸಂಜೆ 6:28ಕ್ಕೆ ಅಲ್ಲಿಂದ ಹೊರಹೋಗಿರುವುದು ಕಂಡುಬಂದಿದೆ. ಆನಂತರ 6:52ಕ್ಕೆ ಕಾರು ಸ್ಫೋಟಗೊಂಡಿದೆ. ಪರಿಣಾಮ 15 ಜನರು ಸಾವನ್ನಪ್ಪಿ, 20ಕ್ಕೂ ಅಧಿಕ ಜನರು ಗಾಯಗೊಂಡಿದ್ದರು.ಇದನ್ನೂ ಓದಿ: ದೇಶದಲ್ಲಿ ʻವೈಟ್ ಕಾಲರ್ʼ ರಕ್ಕಸರು – ಹೇಗೆ ಹುಟ್ಟಿಕೊಳ್ತಾರೆ? ಭಾರತಕ್ಕೆ ಏಕೆ ಸವಾಲು?

