ನವದೆಹಲಿ: ದೆಹಲಿ ಕೆಂಪು ಕೋಟೆ ಬಳಿ ಸ್ಫೋಟ (Delhi Blast) ಸುದ್ದಿಯಾದ ಬೆನ್ನಲ್ಲೇ ಯಾವ ಕಾರಣಕ್ಕೆ ಸ್ಫೋಟ ಸಂಭವಿಸಿತು? ಕಾರಿನ ಹಿಂದುಗಡೆ ಅಳವಡಿಸಿದ್ದ ಸಿಎನ್‌ಜಿಯಿಂದ ಸ್ಫೋಟ ಸಂಭವಿಸಿತ್ತಾ? ಹೀಗೆ ನಾನಾ ರೀತಿಯ ವರದಿಗಳು ಆರಂಭದಲ್ಲಿ ಪ್ರಕಟವಾಗಿದ್ದವು. ಆದರೆ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಯಾವ ಕಾರಿನಿಂದ ಈ ಕೃತ್ಯ ಸಂಭವಿಸಿದೆ ಎನ್ನುವುದನ್ನು ಪೊಲೀಸರು ನಿಖರವಾಗಿ ಪತ್ತೆ ಹೆಚ್ಚಿದ್ದಾರೆ.
ಸ್ಫೋಟ ನಡೆದ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು (Delhi Police) ಮೊದಲು ರಸ್ತೆಯಲ್ಲಿರುವ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಐ20 (i20)ನಿಂದ ಈ ಕೃತ್ಯ ನಡೆದಿದೆ ಎನ್ನುವುದು ಗೊತ್ತಾಗಿದೆ.
ಐ20 ಕಾರಿನಿಂದ ಸ್ಫೋಟ ಸಂಭವಿಸಿದ ವಿಚಾರ ತಿಳಿಯುತ್ತಿದ್ದಂತೆ ಇಡೀ ದಿನ ಈ ಕಾರು ಎಲ್ಲೆಲ್ಲಿ ಓಡಾಡಿದೆ. ದೆಹಲಿಗೆ ಎಲ್ಲಿಂದ ಪ್ರವೇಶಿಸಿದೆ ಎಂಬ ಮಾಹಿತಿಯನ್ನು ಕಲೆಹಾಕಲು ಮತ್ತಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಜಾಲಾಡಿದ್ದಾರೆ. ಆಗ ಮತ್ತಷ್ಟು ಸ್ಫೋಟಕ ವಿಚಾರಗಳು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಬಾಂಗ್ಲಾದಿಂದ ಭಾರತದ ಮೇಲೆ ದಾಳಿ ಮಾಡುತ್ತೇವೆ: 10 ದಿನದ ಹಿಂದೆ ಬೆದರಿಕೆ ಹಾಕಿದ್ದ ಪಾಕ್ ಉಗ್ರ
ದೆಹಲಿ ಪೊಲೀಸರ ವಿಶೇಷ ಘಟಕಗಳು ಈ ಕಾರಿನ ಮತ್ತಷ್ಟು ಮಾಹಿತಿಯನ್ನು ಕೆದಕಲು ಈಗ ಆರಂಭಿಸಿದೆ. ಒಂದು ತಂಡ ದೆಹಲಿಯನ್ನು ಪ್ರವೇಶ ಮಾಡುವ ಮೊದಲಿನ ಚಲನವಲನಗಳನ್ನು ಪತ್ತೆಹಚ್ಚುವ ಕೆಲಸ ಮಾಡುತ್ತಿದ್ದರೆ ಇನ್ನೊಂದು ತಂಡ ದೆಹಲಿ ಪ್ರವೇಶದ ಬಳಿಕ ಎಲ್ಲಿ ಸಂಚರಿಸಿದೆ ಎಂಬ ವಿವರವನ್ನು ಕಲೆ ಹಾಕುತ್ತಿದೆ.
ಸಿಸಿಟಿವಿ ದೃಶ್ಯಾವಳಿಯ ಪ್ರಕಾರ ಕಾರು ಮಧ್ಯಾಹ್ನ 3:19 ಕ್ಕೆ ಕೆಂಪು ಕೋಟೆಯ ಪಕ್ಕದಲ್ಲಿರುವ ಪಾರ್ಕಿಂಗ್ ಪ್ರದೇಶವನ್ನು ಪ್ರವೇಶಿಸಿ ಸಂಜೆ 6.48 ಕ್ಕೆ ನಿರ್ಗಮಿಸಿದೆ. ಕಾರು ಪಾರ್ಕಿಂಗ್ ಸ್ಥಳದಿಂದ ಹೊರಬಂದಾಗ ಭಾರೀ ದಟ್ಟಣೆ ಇರುವ ದೃಶ್ಯ ಸೆರೆಯಾಗಿದೆ.
ಮೂರು ಗಂಟೆಗಳ ಕಾಲ ಸುನೆಹ್ರಿ ಮಸೀದಿ ಪಾರ್ಕಿಂಗ್ ಜಾಗದಲ್ಲಿ ಆತ ಕಾರನ್ನು ಪಾರ್ಕ್ ಮಾಡಿದ್ದು ಯಾಕೆ ಎನ್ನುವುದೇ ದೊಡ್ಡ ಪ್ರಶ್ನೆ. ಉದ್ದೇಶಪೂರ್ವಕವಾಗಿಯೇ ಕಾರನ್ನು ಪಾರ್ಕ್ ಮಾಡಿದ್ದಾನೋ ಅಥವಾ ಬೇರೆ ಕಡೆ ಸ್ಫೋಟ ಮಾಡಲುಆ ಜಾಗದಲ್ಲಿ ಕಾರು ನಿಲ್ಲಿಸಿದ್ದಾನೋ? ಅಥವಾ ಸ್ನೇಹಿತರು ಸಿಕ್ಕಿಬಿದ್ದಿದ್ದಕ್ಕೆ ಸಿಟ್ಟಾಗಿ ಈಗಲೇ ಸ್ಪೋಟ ಮಾಡಲು ನಿರ್ಧಾರ ತೆಗೆದುಕೊಂಡನೇ ಎನ್ನುವುದು ತನಿಖೆಯಿಂದ ಬೆಳಕಿಗೆ ಬರಬೇಕಿದೆ.


