– ಕೇಜ್ರಿವಾಲ್ ವಿರುದ್ಧ ಸ್ಪರ್ಧೆಗೆ ಅಭ್ಯರ್ಥಿಗಳ ಹುಡುಕಾಟ
ನವದೆಹಲಿ: ದೆಹಲಿಯ ವಿಧಾನಸಭೆಗೆ ಫೆಬ್ರವರಿ 8 ರಂದು ಚುನಾವಣೆ ನಡೆಯಲಿದೆ. ಆಮ್ ಆದ್ಮಿ 70, ಕಾಂಗ್ರೆಸ್ 54, ಬಿಜೆಪಿ 57 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿವೆ. ಆದರೆ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿಯನ್ನೇ ಕಾಂಗ್ರೆಸ್, ಬಿಜೆಪಿ ಇನ್ನೂ ಅಂತಿಮಗೊಳಿಸಿಲ್ಲ.
ನವದೆಹಲಿ ಕ್ಷೇತ್ರದಿಂದ ಸಿಎಂ ಅರವಿಂದ ಕೇಜ್ರಿವಾಲ್ ಸ್ಪರ್ಧಿಸುತ್ತಿದ್ದು, ಅವರಿಗೆ ಪೈಪೋಟಿ ನೀಡುವ ಅಭ್ಯರ್ಥಿ ಹುಡುಕಾಟದಲ್ಲಿ ಕಾಂಗ್ರೆಸ್, ಬಿಜೆಪಿ ಮಗ್ನವಾಗಿವೆ. ಮೂರು ಬಾರಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ವಿರುದ್ಧ 2013ರಲ್ಲಿ ಇದೇ ಕ್ಷೇತ್ರದಿಂದ ಸ್ಪರ್ಧಿಸಿ ಅರವಿಂದ ಕೇಜ್ರಿವಾಲ್ ಐತಿಹಾಸಿಕ ಗೆಲವು ಸಾಧಿಸಿದ್ದರು. 2015 ರಲ್ಲಿ ಬಿಜೆಪಿಯ ನೂಪುರ್ ಶರ್ಮಾ, ಕಾಂಗ್ರೆಸ್ ನ ಮಾಜಿ ಸಿಎಂ ಕಿರಣ್ ವಾಲಿಯಾ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ ಸೋಲನ್ನಪಿದ್ದರು.
Advertisement
Advertisement
ಸಿಎಂಗಿಲ್ಲ ಎದುರಾಳಿ:
ಈ ಬಾರಿ ಕೇಜ್ರಿವಾಲ್ ವಿರುದ್ಧ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಲೆಕ್ಕಚಾರದಲ್ಲಿರುವ ಬಿಜೆಪಿ, ದೆಹಲಿ ಘಟಕದ ಅಧ್ಯಕ್ಷ, ಮನೋಜ್ ತಿವಾರಿ ಅಥವಾ ಮಾಜಿ ಸಿಎಂ, ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್‍ಗೆ ಟಿಕೆಟ್ ನೀಡಬಹುದು ಎನ್ನಲಾಗಿದೆ. ಇತ್ತ ಕಾಂಗ್ರೆಸ್ ಜಾತಿ ಲೆಕ್ಕಾಚಾರದಲ್ಲಿ ಪ್ರಬಲ ಅಭ್ಯರ್ಥಿ ಹುಡುಕಾಟ ನಡೆಸಿದೆ. ಅಲ್ಲದೆ ಮಾಜಿ ಸಿಎಂ ಶೀಲಾ ದೀಕ್ಷಿತ್ ಪುತ್ರಿ ಲತಿಕಾ ದೀಕ್ಷಿತ್ ಗೆ ಟಿಕೆಟ್ ನೀಡಲು ಯೋಚಿಸಿದೆ.
Advertisement
Advertisement
ಕಾಂಗ್ರೆಸ್, ಬಿಜೆಪಿಗಿಲ್ಲ ಸಿಎಂ ಅಭ್ಯರ್ಥಿ
ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಚುನಾವಣೆ ಎದುರಿಸುತ್ತಿದ್ದು, ಅವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ಘೋಷಿಸಿಕೊಂಡಿದೆ. ಇತ್ತ ಬಿಜೆಪಿ ಮಾತ್ರ ಪ್ರಧಾನಿ ನರೇಂದ್ರ ಮೋದಿ ಚಹರೆ ಮೇಲೆ ಚುನಾವಣಾ ಕಣಕ್ಕೆ ಇಳಿಯಲಿದ್ದು, ಸಿಎಂ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ ಎಂದಿದೆ. ಕಾಂಗ್ರೆಸ್ ಕೂಡಾ ನಾಯಕರಿಲ್ಲದೆ ಸೊರಗಿದಂತೆ ಕಾಣುತ್ತಿದೆ. ಕಳೆದ ಬಾರಿ ಖಾತೆಯನ್ನೇ ತೆರೆಯದ ಕಾಂಗ್ರೆಸ್, ಈ ಬಾರಿ ಅಕೌಂಟ್ ಒಪನ್ ಮಾಡುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದು, ಸಿಎಂ ಅಭ್ಯರ್ಥಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಅಲ್ಲದೆ ಅಜೇಯ ಮಕೇನ್, ಸುಭಾಷ್ ಚೋಪ್ರಾರಂತಹ ಹಿರಿಯ ನಾಯಕರು ಚುನಾವಣಾ ಕಣಕ್ಕಿಳಿಯದಿರುವುದು ಕಾಂಗ್ರೆಸ್‍ಗೆ ಸಂಕಷ್ಟಕ್ಕೀಡು ಮಾಡಿದೆ.