ನವದೆಹಲಿ: ಜಾರ್ಖಂಡ್ ಚುನಾವಣೆ ಸೋಲಿನ ಬಳಿಕ ಹೊಸದೊಂದು ಪ್ರಯೋಗಕ್ಕೆ ಬಿಜೆಪಿ ಮುಂದಾಗಿದೆ. ದೆಹಲಿಯಲ್ಲಿ ಈ ಬಾರಿ ಸಿಎಂ ಅಭ್ಯರ್ಥಿ ಇಲ್ಲದೆ ವಿಧಾನಸಭೆ ಚುನಾವಣೆ ಎದುರಿಸಲು ಪ್ಲಾನ್ ಮಾಡಿಕೊಂಡಿರುವ ಬಿಜೆಪಿ ಸಿಎಎ ಮತ್ತು ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆಯನ್ನೆ ಬಳಸಿಕೊಂಡು ಜನರ ಮುಂದೆ ಹೋಗಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ.
ಸಿಎಎ ಜಾರಿಯಾದ ಬಳಿಕ ದೇಶದಾದ್ಯಂತ ಬೃಹತ್ ಪ್ರತಿಭಟನೆಗಳು ನಡೆಯುತ್ತಿದೆ. ಮತ್ತೊಂದು ಕಡೆ ಜಾರ್ಖಂಡ್ ನ ಮೊದಲ ಚುನಾವಣೆಯಲ್ಲಿ ಬಿಜೆಪಿ ಮುಗ್ಗರಿಸಿತ್ತು. ರಾಷ್ಟ್ರೀಯ ಮಟ್ಟದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಗೆ ಆದ ಹಿನ್ನಡೆ ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಸೋಲು ಎಂದು ವಿಶ್ಲೇಷಣೆ ಮಾಡಲಾಗಿತ್ತು.
Advertisement
Advertisement
ಈ ಹಿನ್ನೆಲೆ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಬಿಜೆಪಿ ಈ ಬಾರಿ ಕೇವಲ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸರ್ಕಾರದ ಯೋಜನೆಗೆಗಳು ಹಾಗೂ ಪೌರತ್ವ ತಿದ್ದು ಪಡಿ ಕಾಯ್ದೆಯನ್ನು ದೆಹಲಿ ಜನರ ಮುಂದಿಡಲು ಬಿಜೆಪಿ ಸಿದ್ದವಾಗಿದೆ ಎನ್ನಲಾಗಿದೆ. ಈಗಾಗಲೇ ಎಎಪಿ (ಕಾಮ್ ಕಾ ಚುನಾವ್) ಕೆಲಸದ ಮೇಲೆ ಚುನಾವಣೆ ಎಂದು ಘೋಷಿಸಿದ್ದು, ತಮ್ಮ ಐದು ವರ್ಷದ ಸಾಧನೆಗಳನ್ನು ಜನರ ಮುಂದಿಡಲು ನಿರ್ಧರಿಸಿದ್ದು ಅರವಿಂದ್ ಕೇಜ್ರಿವಾಲ್ ಹೆಸರಿನಲ್ಲಿ ಚುನಾವಣೆ ಎದುರಿಸಲಿದೆ.
Advertisement
Advertisement
ದೆಹಲಿಯಲ್ಲೇ ಕೇಂದ್ರ ಸರ್ಕಾರ ಹೆಚ್ಚು ಕೇಂದ್ರಿಕೃತವಾಗಿರುವ ಹಿನ್ನೆಲೆ ಮೋದಿ ಮುಖ ಚುನಾವಣೆಗೆ ಸೂಕ್ತ ಅಲ್ಲದೇ ಅಕ್ರಮ ವಲಸಿಗರ ಸಂಖ್ಯೆ ದೆಹಲಿಯ ಹೊರ ಭಾಗದಲ್ಲಿದ್ದು ಹೆಚ್ಚಿದ್ದು ಸಿಎಎ ಯನ್ನು ಹೆಚ್ಚು ಪ್ರಚಾರ ಮಾಡುವ ಮೂಲಕ ಹೆಚ್ಚು ಮತಗಳನ್ನು ಪಡೆಯಬಹುದು ಎನ್ನುವುದು ಲೆಕ್ಕಚಾರ. ಜೊತೆಗೆ ಬಿಜೆಪಿಯಲ್ಲಿ ಸಿಎಂ ಅಭ್ಯರ್ಥಿ ಆಗಲು ಸಾಕಷ್ಟು ಪೈಪೋಟಿ ಇದೆ. ಮನೋಜ್ ತಿವಾರಿ, ಸಂಸದ ಗೌತಮ್ ಗಂಭೀರ್, ಕೇಂದ್ರ ಸಚಿವ ಹರ್ಷವರ್ಧನ್ ಸೇರಿ ದೊಡ್ಡ ಪಟ್ಟಿಯೇ ಇದ್ದು ಸಿಎಂ ಅಭ್ಯರ್ಥಿ ಘೋಷಣೆ ಮಾಡಿದಲ್ಲಿ ಅಸಮಾಧಾನ ವ್ಯಕ್ತವಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಸಿಎಂ ಅಭ್ಯರ್ಥಿಯನ್ನು ಘೋಷಣೆ ಮಾಡದಿರಲು ಬಿಜೆಪಿ ಚಿಂತಿಸಿದೆ ಎಂದು ಹೇಳಲಾಗಿದೆ.
ಈ ನಿಟ್ಟಿನಲ್ಲಿ ಸಿಎಎ ಅನ್ನು ದೆಹಲಿಯಲ್ಲಿ ಚುನಾವಣೆವರೆಗೂ ಹೆಚ್ಚು ಜೀವಂತವಾಗಿಡುವ ಪ್ರಯತ್ನ ಮಾಡುತ್ತಿದ್ದು, ಚುನಾವಣೆ ಪ್ರಚಾರಕ್ಕೆ ಹೆಚ್ಚು ಈ ವಿಷಯವನ್ನೆ ಬಳಸಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.