ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಾಲಿನ್ಯ ಪ್ರಮಾಣವನ್ನು ನಿಯಂತ್ರಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ನೇಮಿಸಿರುವ ಪರಿಸರ ಮಾಲಿನ್ಯ ಹಾಗೂ ನಿಯಂತ್ರಣ ಮಂಡಳಿ(EPCA) ಪಾರ್ಕಿಂಗ್ ಶುಲ್ಕವನ್ನು 4 ಪಟ್ಟು ಹೆಚ್ಚಿಸಬೇಕೆಂದು ಮಂಗಳವಾರದಂದು ಆದೇಶ ಹೊರಡಿಸಿದೆ. ಇದರ ಜೊತೆಗೆ ಮೆಟ್ರೋ ಪ್ರಯಾಣ ದರದಲ್ಲಿ ಇಳಿಕೆ ಮಾಡಬೇಕೆಂದು ಹೇಳಿದೆ.
ಮಾಲಿನ್ಯ ಪ್ರಮಾಣ ತುರ್ತು ಮಿತಿ ತಲುಪಿದರೆ ಸಮ-ಬೆಸ (ಆಡ್- ಈವನ್) ಯೋಜನೆಗೆ ತಯಾರಾಗಿರುವಂತೆ ದೆಹಲಿ ಹಾಗೂ ಅಕ್ಕಪಕ್ಕದ ರಾಜ್ಯಗಳ ಸರ್ಕಾರಕ್ಕೆ ಮಂಡಳಿ ಹೇಳಿದೆ. ಪಾರ್ಕಿಂಗ್ ಶುಲ್ಕ ಹೆಚ್ಚಳ ಎನ್‍ಸಿಆರ್(ನ್ಯಾಷನಲ್ ಕ್ಯಾಪಿಟಲ್ ರೀಜಿಯನ್)ನ ಎಲ್ಲಾ ನಗರಗಳಲ್ಲಿ ಅನ್ವಯಿಸಲಿದೆ.
Advertisement
Advertisement
ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿರುವ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಯೋಜನೆಯಡಿ ವಾಯು ಮಾಲಿನ್ಯವನ್ನ ನಿಭಾಯಿಸಲು ವಾಯು ಗುಣಮಟ್ಟ ಸೂಚ್ಯಂಕ(ಎಕ್ಯೂಈ) 500ಕ್ಕಿಂತ ಹೆಚ್ಚಾದಾಗ ತುರ್ತು ಸಂದರ್ಭವನ್ನ ಘೋಷಿಸಲಾಗುತ್ತದೆ. ಮಂಗಳವಾರ ಸಂಜೆ 4.30ರ ವೇಳೆಗೆ ಎಕ್ಯೂಈ 436 ಇತ್ತು ಎಂದು ವರದಿಯಾಗಿದೆ.
Advertisement
Advertisement
ದೆಹಲಿ ಹಾಗೂ ಎನ್‍ಸಿಆರ್ ನ ಎಲ್ಲಾ ರಾಜ್ಯ ಸರ್ಕಾರಗಳು ಕೂಡಲೇ ಸಾರ್ವಜನಿಕ ಸಾರಿಗೆ ಸೇವೆಯನ್ನು ಹೆಚ್ಚಿಸಬೇಕು. ರಸ್ತೆಗಳಲ್ಲಿ ಹೆಚ್ಚಿನ ಬಸ್‍ಗಳು ಓಡಾಡುವಂತೆ ನೋಡಿಕೊಳ್ಳಬೇಕು. ಮೆಟ್ರೋ ಸಂಚಾರವನ್ನೂ ಕೂಡ ಹೆಚ್ಚು ಮಾಡಬೇಕು. ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಹಾಗೂ ಆಫ್ ಪೀಕ್ ಹವರ್‍ಗಳಲ್ಲಿ ಪ್ರಯಾಣ ದರವನ್ನು ಕಡಿಮೆ ಮಾಡಬೇಕು ಎಂದು EPCA ಹೇಳಿದೆ.
ಈ ಎಲ್ಲಾ ಕ್ರಮಗಳನ್ನು ಘೋಷಣೆ ಮಾಡಿದ EPCA, ರಾಜಧಾನಿ ಸಂಕಷ್ಟ ಸ್ಥಿತಿಯಲ್ಲಿದ್ದು ಮುಂದಿನ ಕೆಲವು ದಿನಗಳ ಕಾಲ ಇದು ಮುಂದುವರೆಯಲಿದೆ ಎಂದು ಹೇಳಿದೆ.