ನವದೆಹಲಿ: ದೆಹಲಿಯ ವಾಯುಮಾಲಿನ್ಯದಿಂದ (Newdelhi Air Pollution) ಮಕ್ಕಳು ಸಾಯುತ್ತಿದ್ದಾರೆ. ನನ್ನಂತಹ ವೃದ್ಧರಿಗೆ ತೊಂದರೆಯಾಗುತ್ತಿದೆ. ಈ ಸಂಬಂಧ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ (Sonia Gandhi) ಕಿಡಿಕಾರಿದ್ದಾರೆ.
ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಬಗ್ಗೆ ಸಂಸತ್ ಭವನದ ಆವರಣದಲ್ಲಿ ವಿರೋಧ ಪಕ್ಷದ ನಾಯಕರು ಪ್ರತಿಭಟನೆ ನಡೆಸಿದರು. ಸೋನಿಯಗಾಂಧಿ, ಮಲ್ಲಿಕಾರ್ಜುನ್ ಖರ್ಗೆ, ಪ್ರಿಯಾಂಕಗಾಂಧಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಮಕರ ದ್ವಾರದ ಹೊರಗೆ ಸಾಂಕೇತಿಕವಾಗಿ ಮಾಸ್ಕ್ ಧರಿಸಿ, ಘೋಷಣೆ ಕೂಗಿದರು. ಪ್ರಧಾನಮಂತ್ರಿ ಅವರು ಹೇಳಿಕೆ ನೀಡುವುದನ್ನು ನಿಲ್ಲಿಸಿ, ಕ್ರಮ ಕೈಗೊಳ್ಳುವಂತೆ ವಿಪಕ್ಷ ನಾಯಕರು ಆಗ್ರಹಿಸಿದ್ದಾರೆ.ಇದನ್ನೂ ಓದಿ: ದ್ವೇಷ ಭಾಷಣ ಮಸೂದೆಗೆ ಇಂದೇ ಒಪ್ಪಿಗೆ ಪಡೆಯುತ್ತೇವೆ – ಪರಮೇಶ್ವರ್
ಪ್ರತಿಭಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೋನಿಯಾ ಗಾಂಧಿ, ಮಕ್ಕಳು ಸಾಯುತ್ತಿದ್ದಾರೆ. ನನ್ನಂತಹ ವೃದ್ಧರಿಗೆ ತೊಂದರೆಯಾಗುತ್ತಿದೆ. ಸರ್ಕಾರ ಕ್ರಮ ಕೈಗೊಳ್ಳಬೇಕು. ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಏನನ್ನಾದರು ಮಾಡಬೇಕಾಗಿರುವುದು ಸರ್ಕಾರ ಜವಾಬ್ದಾರಿಯಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾತನಾಡಿ, ವಾಯುಮಾಲಿನ್ಯದ ವಿಷಯ ರಾಜಕೀಯವಲ್ಲ. ಇದರ ಕುರಿತು ಚರ್ಚೆಯಾಗಬೇಕು ಮತ್ತು ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ (Priyanka Gandhi Vadra) ಮಾತನಾಡಿ, ಹೊರಗಿನ ಪರಿಸ್ಥಿತಿಯನ್ನು ನೋಡಿ. ಸೋನಿಯಾ ಗಾಂಧಿ ಹೇಳಿದಂತೆ ಮಕ್ಕಳಿಗೆ ಉಸಿರಾಡೋಕೆ ಆಗುತ್ತಿಲ್ಲ. ಸೋನಿಯಾ ಗಾಂಧಿ ಅವರಿಗೆ ಅಸ್ತಮಾ ಇದೆ ಮತ್ತು ಅವರಂತಹ ಹಿರಿಯ ನಾಗರಿಕರಿಗೆ ಉಸಿರಾಟದ ತೊಂದರೆಯಿರುತ್ತದೆ. ಅದಲ್ಲದೇ ವರ್ಷದಿಂದ ವರ್ಷಕ್ಕೆ ಪರಿಸ್ಥಿತಿ ಹದಗೆಡುತ್ತಿದೆ. ಪ್ರತಿ ವರ್ಷ ಕೇವಲ ಹೇಳಿಕೆಗಳನ್ನು ಮಾತ್ರ ನೀಡುತ್ತಾರೆ, ಆದರೆ ಯಾವುದೇ ನಿರ್ದಿಷ್ಟ ಕ್ರಮ ತೆಗೆದುಕೊಳ್ಳುತ್ತಿಲ್ಲ. ಸರ್ಕಾರ ಕ್ರಮ ಕೈಗೊಳ್ಳಬೇಕು. ನಾವೆಲ್ಲರೂ ಅವರೊಂದಿಗೆ ನಿಲ್ಲುತ್ತೇವೆ. ಇದು ರಾಜಕೀಯ ವಿಷಯವಲ್ಲ ಎಂದಿದ್ದಾರೆ.
ದೆಹಲಿಯಲ್ಲಿ AQI 400, ಜನರು ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಮಕ್ಕಳು ಉಸಿರಾಡೋಕೆ ತೊಂದರೆ ಅನುಭವಿಸುತ್ತಿದ್ದಾರೆ. ಇದು ಒಂದು ದೊಡ್ಡ ಆರೋಗ್ಯ ಬಿಕ್ಕಟ್ಟು. ಇದನ್ನು ಸದನದಲ್ಲಿ ಚರ್ಚಿಸಬೇಕು ಎಂದು ಸಂಸದ ಮನೀಶ್ ತಿವಾರಿ ಹೇಳಿದ್ದಾರೆ.ಇದನ್ನೂ ಓದಿ: ಪರಮೇಶ್ವರ್‌ಗೆ ಸಿಎಂ ಸ್ಥಾನ ಕೊಡಬೇಕು – ತುಮಕೂರಿನಲ್ಲಿ ದಲಿತಪರ ಸಂಘಟನೆ ಆಗ್ರಹ

