ನವದೆಹಲಿ: ಜಾತಿ ಜನಗಣತಿ ವರದಿ ಜಾರಿಗೆ ಕೆಲವು ಶಕ್ತಿಗಳು ವಿರೋಧ ವ್ಯಕ್ತಪಡಿಸುತ್ತಿವೆ. ಆದರೂ ನಾವು ವರದಿಯನ್ನು ಜಾರಿಗೆ ತಂದೇ ತರುತ್ತೇವೆ. ಕಾರಣ ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜಾತಿ ಜನಗಣತಿ ವರದಿ ಜಾರಿಗೆ ಮತ್ತು ಸಂವಿಧಾನ ರಕ್ಷಣೆಗೆ ಬದ್ಧರಾಗಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ವರ್ಕಿಂಗ್ ಕಮಿಟಿ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ದೆಹಲಿಯಲ್ಲಿ ನಡೆದ ‘ದಿ ಕಾಸ್ಟ್ ಸೆನ್ಸೆಸ್, ವೇಮೆನ್ ರೈಟ್ಸ್ ಅಂಡ್ ರೇಸರ್ವೇಶನ್ಸ್; ದಿ ಫಿಲ್ಲರ್ಸ್ ಆಫ್ ಸೋಶಿಯಲ್ ಜಸ್ಟಿಸ್’ 3ನೇ ರಾಷ್ಟ್ರೀಯ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಬಿ.ಕೆ. ಹರಿಪ್ರಸಾದ್ ಅವರು, ಜಾತಿ ವ್ಯವಸ್ಥೆಯಲ್ಲಿ ಶತಮಾನಗಳಿಂದ ಯಾವುದೇ ಅಡ್ಡಿ-ಆತಂಕಗಳಿಲ್ಲದೆ ಎಲ್ಲಾ ರೀತಿಯಲ್ಲೂ ಫಲ ಉಣ್ಣುತ್ತಿರುವರಿಗೆ ಜಾತಿಜನಗಣತಿ ಬಗ್ಗೆ ಭಯವಾಗುತ್ತಿದೆ. ಅದಕ್ಕಾಗಿ ಜಾತಿಜನಗಣತಿ ಬಗ್ಗೆ ಮಾತನಾಡುವವರನ್ನು ‘ಇವರು ಸಮಾಜವನ್ನು ಒಡೆಯುತ್ತಿದ್ದಾರೆ’ ಎಂದು ಬಿಂಬಿಸಲು ಪ್ರಯತ್ನಿಸುತ್ತಾರೆ. ಈ ಅಡೆತಡೆಗಳ ನಡುವೆಯೂ ಜಾತಿಜನಗಣತಿ ವರದಿ ಜಾರಿಯಾಗಲೇಬೇಕು ಎಂದು ಆಗ್ರಹಿಸಿದರು.
Advertisement
ಬಹಳ ವರ್ಷಗಳ ಬಳಿಕ ಕಾಂಗ್ರೆಸ್ ಪಕ್ಷ SC, ST ಮತ್ತು OBC ವರ್ಗಗಳಿಗೆ ನೀಡುತ್ತಿರುವ ಮೀಸಲಾತಿಯನ್ನು ಶೇ.75ಕ್ಕೆ ಏರಿಸಬೇಕು ಮತ್ತು ಅದಕ್ಕಾಗಿ ಜಾತಿ ಜನಗಣತಿ ಆಗಬೇಕು ಎಂದು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರತಿಪಾದಿಸುತ್ತಿದೆ. ಜಾತಿಜನಗಣತಿ ಆಗುವುದಷ್ಟೇ ಮುಖವಲ್ಲ, ಅದು ತಮಿಳುನಾಡು ಮಾದರಿಯಲ್ಲಿ ಸಂವಿಧಾನದ 9ನೇ ಪರಿಚ್ಛೇದ ಸೇರಬೇಕು. ಇಲ್ಲದಿದ್ದರೆ ನ್ಯಾಯಾಲಯ ಅದನ್ನು ಅಸಿಂಧು ಮಾಡುವ ಸಾಧ್ಯತೆ ಇದೆ ಎಂದು ಹರಿಪ್ರಸಾದ್ ಆತಂಕ ವ್ಯಕ್ತಪಡಿಸಿದರು.
Advertisement
ಸ್ವಾತಂತ್ರ್ಯ ಬಂದು 75 ವರ್ಷಗಳಾದ ಈ ಸಂದರ್ಭದಲ್ಲಿ ಸಂವಿಧಾನವನ್ನು ಅಭಿವೃದ್ಧಿ ಪಡಿಸುವ ಮತ್ತು ಬಲಪಡಿಸುವ ಬಗ್ಗೆ ಕಾರ್ಯಕ್ರಮ ರೂಪಿಸಬೇಕಿತ್ತು. ಆದರೆ, ನಾವೆಲ್ಲಾ ಈಗ ಸಂವಿಧಾನವನ್ನು ಉಳಿಸುವ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವುದು ದುರಾದೃಷ್ಟಕರ. ಮೀಸಲಾತಿ ಎನ್ನುವುದು ಭಿಕ್ಷೆ ಅಲ್ಲ. ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮ ಅಲ್ಲ. ಮೀಸಲಾತಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ ಅಲ್ಲ. ಮೀಸಲಾತಿ ಎಂದರೆ ಸಮಾಜದಲ್ಲಿ ಸಮಾನತೆ ಸಾಧಿಸುವ ಸಾಧನ ಎಂದು ಪರಿಗಣಿಸಬೇಕು. ಸಂವಿಧಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇನ್ನೂ ಬಹಳಷ್ಟಿದೆ ಎಂದು ಹೇಳಿದರು.
Advertisement
ವಿಪರ್ಯಾಸ ಎಂದರೆ, ಮೀಸಲಾತಿಯನ್ನು ಪ್ರತಿಭೆ ಮತ್ತು ಸಾಮರ್ಥ್ಯದ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಮೀಸಲಾತಿ ಎನ್ನುವುದು ಶೋಷಿತ ಸಮುದಾಯಗಳಿಗೆ ಸ್ವಲ್ಪ ಮಟ್ಟದ ರಿಯಾಯಿತಿ ನೀಡುತ್ತದೆ. ಮೀಸಲಾತಿಯು ಎಲ್ಲಾ ವರ್ಗಗಳಿಗೆ ನ್ಯಾಯದ ಸಮಾನ ಹಂಚಿಕೆ ಮಾಡುತ್ತದೆ. ಆದ್ದರಿಂದ ಮೀಸಲಾತಿ ಮತ್ತು ಪ್ರತಿಭೆಯನ್ನು ಬೇರ್ಪಡಿಸಿಯೇ ನೋಡಬೇಕಾಗಿದೆ. ಹೀಗಾಗಿ, ಮೀಸಲಾತಿ ಹಕ್ಕು ನೀಡುವ ಸಂವಿಧಾನದ ಆರ್ಟಿಕಲ್ 335 ಅನ್ನು ತಿದ್ದುಪಡಿ ಮಾಡಬೇಕಾದ ಅಗತ್ಯವಿದೆ.
Advertisement
ಮೀಸಲಾತಿ ವಿರುದ್ಧ ಬಹಳ ವ್ಯವಸ್ಥಿತವಾದ ಅಭಿಯಾನ ನಡೆಯುತ್ತಿದೆ. ಮೀಸಲಾತಿಯಿಂದ ಪ್ರತಿಭೆ ಇದ್ದವರಿಗೆ ಅವಕಾಶ ಸಿಗುತ್ತಿಲ್ಲ. ಸಾಮರ್ಥ್ಯ ಇದ್ದವರಿಗೆ ಅವಕಾಶ ಸಿಗುತ್ತಿಲ್ಲ ಎನ್ನುವುದಾದರೆ ಅತಿಹೆಚ್ಚು ಅಂದರೆ ಶೇ.69ರಷ್ಟು ಮೀಸಲಾತಿ ನೀಡುವ ತಮಿಳುನಾಡು ನಿರ್ನಾಮವಾಗಬೇಕಿತ್ತು. ಆದರೆ ತಮಿಳುನಾಡು ಇವತ್ತು ಇಡೀ ದೇಶಕ್ಕೆ ಮಾದರಿಯಾಗಿದೆ. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೊದಲ ಸ್ಥಾನದಲ್ಲಿದೆ. ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಕೂಡ ಮುಂದೆ ಇದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ನನಗೆ 19 ರಾಜ್ಯಗಳಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ನನಗೆ ಆ 19 ರಾಜ್ಯಗಳ ಸ್ಥಿತಿಗತಿಗಳು ಗೊತ್ತು, ಅದರಲ್ಲೂ ವಿಶೇಷವಾಗಿ ಉತ್ತರ ಭಾರತದ ಪರಿಸ್ಥಿತಿ ಗೊತ್ತು. ಕೇರಳದಲ್ಲಿ ಹಿಂದುಳಿದ ಜಾತಿಗಳಿಗೆ ಒಳಮೀಸಲಾತಿ ಕೂಡ ಇದೆ. ಒಂದೊಮ್ಮೆ ನಿಜಕ್ಕೂ ಮೀಸಲಾತಿ ಅಭಿವೃದ್ಧಿಗೆ ವಿರೋಧಿ ಎನ್ನುವುದಾದರೆ ಕೇರಳ ನಾಶವಾಗಬೇಕಿತ್ತು. ಮೀಸಲಾತಿ ಇರುವುದರಿಂದಾಗಿ ಕೇರಳ ಇಡೀ ದೇಶದಲ್ಲೇ ಪೂರ್ಣ ಪ್ರಮಾಣದ ಸಾಕ್ಷರತೆಯನ್ನು ಸಾಧಿಸಲು ಸಾಧ್ಯವಾಗಿದೆ. ಅಭಿವೃದ್ಧಿಯಲ್ಲೂ ಮುಂಚೂಣಿಯಲ್ಲಿದೆ ಎಂದು ಹರಿಪ್ರಸಾದ್ ವಿವರಿಸಿದರು.
ಕರ್ನಾಟಕ ಮೀಸಲಾತಿಯ ಪ್ರವರ್ತಕ ರಾಜ್ಯ. ನಮ್ಮ ರಾಜ್ಯದಲ್ಲಿ 1879ರಲ್ಲೇ ಪರಿಶಿಷ್ಟ ಜಾತಿಯ ಜನರಿಗೆ ಮೀಸಲಾತಿಯನ್ನು ನೀಡಲಾಗಿತ್ತು. 1918ರಲ್ಲಿ ಮೈಸೂರು ರಾಜರು SC, ST ಮತ್ತು OBC ವರ್ಗಗಳಿಗೆ ಶೇ.75ರಷ್ಟು ಮೀಸಲಾತಿ ನೀಡಿದ್ದರು. ಮೀಸಲಾತಿಯಿಂದ ಬೆಳವಣಿಗೆ ಇಲ್ಲ ಎನ್ನುವುದಾದರೆ ಕರ್ನಾಟಕದ ಅಭಿವೃದ್ಧಿಯು ಕುಂಠಿತವಾಗಬೇಕಿತ್ತು. ಆದರೆ ಇವತ್ತು ಕರ್ನಾಟಕ ಅತಿಹೆಚ್ಚು ಪ್ರಗತಿ ಹೊಂದಿರುವ ರಾಜ್ಯ ಮತ್ತು ಸಿಲಿಕಾನ್ ವ್ಯಾಲಿ ಇರುವ ಎರಡನೇ ರಾಜ್ಯವಾಗಿದೆ ಎಂದು ಹರಿಪ್ರಸಾದ್ ಹೇಳಿದರು.
ಅತಿಹೆಚ್ಚು ಜಿಎಸ್‌ಟಿ ನೀಡುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ರಾಜ್ಯ. ನಾವು ಒಂದು ರೂಪಾಯಿ ತೆರಿಗೆ ಕಟ್ಟಿ 35 ಪೈಸೆ ವಾಪಸ್ ಪಡೆಯುತ್ತಿದ್ದೇವೆ. ತಮಿಳುನಾಡು ಒಂದು ರೂಪಾಯಿ ತೆರಿಗೆ ಕಟ್ಟಿ 26 ಪೈಸೆ ಪಡೆಯುತ್ತಿದೆ. ಇದಕ್ಕೆ ವಿರುದ್ಧವಾಗಿ ಉತ್ತರ ಪ್ರದೇಶ 100 ರೂಪಾಯಿ ತೆರಿಗೆ ಕಟ್ಟಿ 700 ರೂಪಾಯಿ ವಾಪಸ್ ಪಡೆಯುತ್ತಿದೆ. ಬಿಹಾರ 100 ರೂಪಾಯಿ ತೆರಿಗೆ ಕಟ್ಟಿ 440 ರೂಪಾಯಿ ವಾಪಸ್ ಪಡೆಯುತ್ತಿದೆ. ಇದರಿಂದ ನಮಗೆ ಸಮಸ್ಯೆ ಇಲ್ಲ. ನಾವಿದನ್ನು ನೀಡಲು ಸಿದ್ದ. ಆದರೆ ಶಿಕ್ಷಣ ಮತ್ತು ಆರೋಗ್ಯದ ವಿಷಯಕ್ಕೆ ಬಂದರೆ ಉತ್ತರದಾಯಿತ್ವ ಎಲ್ಲಿದೆ? ಸಮಾನತೆ, ಸಾಮಾಜಿಕ ನ್ಯಾಯ ಎಲ್ಲಿದೆ? ‘ಮೀಸಲಾತಿಯಿಂದ ಪ್ರಗತಿ ಸಾಧ್ಯವಿಲ್ಲ’ ಎನ್ನುವ ಸುಳ್ಳು ಗೊತ್ತಾಗಬೇಕು ಎಂದು ಹರಿಪ್ರಸಾದ್ ತಿಳಿಸಿದರು.
ಬಹಳ ಹಿಂದಿನಿಂದಲೂ ಹೆಚ್ಚು ಮೀಸಲಾತಿ ಕೊಡುತ್ತಿರುವ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳು ಕೇಂದ್ರ ಸರ್ಕಾರದ ತಿಜೋರಿಗೆ ಅತಿಹೆಚ್ಚು ಜಿಎಸ್‌ಟಿ ಮತ್ತು ಇತರೆ ತೆರಿಗೆ ನೀಡುವ ರಾಜ್ಯಗಳಾಗಿವೆ. ಈ ರಾಜ್ಯಗಳ ತೆರಿಗೆ ಹಣವನ್ನು ಕೇಂದ್ರ ಸರ್ಕಾರ ಕಡಿಮೆ ಪ್ರಮಾಣದ ಮೀಸಲಾತಿ ಇರುವ ಉತ್ತರದ ರಾಜ್ಯಗಳಿಗೆ ಹಂಚುತ್ತಿದೆ. ಕಡಿಮೆ ಪ್ರಮಾಣದ ಮೀಸಲಾತಿ ಇರುವ ರಾಜ್ಯಗಳು ಹೆಚ್ಚು ಅಭಿವೃದ್ಧಿ ಹೊಂದುತ್ತವೆ ಎನ್ನುವುದರಲ್ಲಿ ಹುರುಳಿಲ್ಲ. ಉತ್ತರದ ರಾಜ್ಯಗಳು ಕೆಲವು ‘ಭೀಮಾರು’ ರಾಜ್ಯಗಳು, ‘ಸಿಕ್ ಸ್ಟೇಟ್ಸ್’ ಎಂದು ವಿವರಿಸಿದರು.
ಮೀಸಲಾತಿಯಿಂದ ಅಸ್ಪೃಶ್ಯತೆಯನ್ನು ನಿವಾರಿಸಬಹುದೇ ಎನ್ನುವ ಇನ್ನೊಂದು ಅಂಶ ಇದೆ. ಜಗತ್ತಿನಲ್ಲಿ ಎಲ್ಲೂ ಅಸ್ಪೃಶ್ಯತೆ ಎಂಬುದು ಇಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿ ಕಪ್ಪು ಮತ್ತು ಬಿಳಿಯರ ನಡುವಿನ ವರ್ಣ ಸಂಘರ್ಷ ಮಾತ್ರ. ಭಾರತದಲ್ಲಿ ಜಾತಿ ಹೆಸರಿನಲ್ಲಿ ಸಮಾಜವನ್ನು ಒಡೆಯಲಾಗಿದೆ. ಇಲ್ಲಿ ಅಸ್ಪೃಶ್ಯ ಜಾತಿಗಳು ಮಾತ್ರವಲ್ಲ, ಅದೃಶ್ಯ ಜಾತಿಗಳೂ ಇವೆ. ಸಂವಿಧಾನದ ಮೂಲಕ ನಾವು ಹೋರಾಡದಿದ್ದರೆ ಎಲ್ಲಾ ಜಾತಿಗಳಿಗೂ ನ್ಯಾಯ ಒದಗಿಸುವುದು ತುಂಬಾ ಕಶ್ಟದ ಕೆಲಸ ಎಂದು ಹೇಳಿದರು.
ಭಾರತದ ಜಾತಿ ವ್ಯವಸ್ಥೆಯಲ್ಲಿ ಕೆಳಗಿರುವ ಶೇ.50ರಷ್ಟು ಜನ ದೇಶದ ಜಿಎಸ್‌ಟಿಗೆ ಶೇ.64ರಷ್ಟು ಕೊಡುಗೆ ನೀಡುತ್ತಿದ್ದಾರೆ. ಮೇಲಿರುವ ಶೇ.10ರಷ್ಟು ಜನ ಕೇವಲ ಶೇ.12ರಷ್ಟು ಜಿಎಸ್‌ಟಿ ಕಟ್ಟುತ್ತಿದ್ದಾರೆ. ಶೇ.64ರಷ್ಟು ಬಡಜನರ ತೆರಿಗೆ ಹಣ ಮೀಸಲಾತಿ ಇಲ್ಲದ ಕಾರ್ಪೊರೇಟ್ ಕ್ಷೇತ್ರಕ್ಕೆ ಹೋಗುತ್ತಿದೆ. ಆ ಹಣಕ್ಕೆ ಉತ್ತರದಾಯಿತ್ವ ಬರಬೇಕಾಗಿದೆ ಎಂದು ಹರಿಪ್ರಸಾದ್ ಪ್ರತಿಪಾದಿಸಿದರು.
ಮಹಾತ್ಮಾ ಗಾಂಧಿ, ಗುರುನಾನಕ್, ವಿವೇಕಾನಂದ ಮತ್ತಿತರ ಮಹನೀಯರು ಹಿಂದೂ ಧರ್ಮವನ್ನು ಪಾಲಿಸಿದ್ದಾರೆ. ಆದರೆ ‘ಹಿಂದೂ ರಾಷ್ಟ್ರ’ ಎನ್ನುವುದು ರಾಜಕೀಯ ಪಕ್ಷದ ಘೋಷಣೆಯಷ್ಟೇ. ಸಾವರ್ಕರ್ ನೀಡಿದ ‘ಹಿಂದೂ ರಾಷ್ಟ್ರ’ಕ್ಕೂ ಹಿಂದೂ ಧರ್ಮಕ್ಕೂ ಯಾವುದೇ ಸಂಬಂಧ ಇಲ್ಲ. ‘ಹಿಂದೂ ರಾಷ್ಟ್ರ’ದ ಹೆಸರಿನಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡಲಾಗುತ್ತಿದೆ. ‘ಹಿಂದೂ ರಾಷ್ಟ್ರ’ ಎಂದು ಹೇಳುವವರು ಈಗ 100 ವರ್ಷ ಪೂರೈಸುತ್ತಿದ್ದಾರೆ. ಹಾಗಾಗಿ ಅವರೀಗ ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಎಲ್ಲಾ ರೀತಿಯಲ್ಲೂ ಧಕ್ಕೆ ಉಂಟು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಪಟ್ಟಭದ್ರ ಫ್ಯಾಸಿಸ್ಟ್ ಶಕ್ತಿಗಳು ಸೃಷ್ಟಿಸುವ ಅನಾಹುತಗಳ ಬಗ್ಗೆ ನಾವು ಸಮಾಜದಲ್ಲಿ ಅರಿವು ಮೂಡಿಸದಿದ್ದರೆ ಅವರ ವಿರುದ್ಧ ಹೋರಾಡುವುದು ಕಷ್ಟವಾಗುತ್ತದೆ. ಏಕೆಂದರೆ ಅವರು ಹಿಂದುಳಿದವರನ್ನು ‘ಹಿಂದುತ್ವ’ದ ರಾಜಕಾರಣಕ್ಕೆ ಬಳಸಿಕೊಳ್ಳಲಾಗುತ್ತದೆ. ಬಿಜೆಪಿ ಅಥವಾ ಆರ್‌ಎಸ್‌ಎಸ್ ನಾಯಕರು ಯಾರೂ ಹಿಂದೂ ಧರ್ಮಕ್ಕೆ ಹೋರಾಡಿ ಜೈಲಿನಲ್ಲಿ ಇಲ್ಲ. ಜೈಲು ಸೇರಿರುವವರೆಲ್ಲಾ ಅವರ ಕಾಲಾಳುಗಳಾಗಿರುವ ಹಿಂದುಳಿದ ವರ್ಗದವರು. ಹಿಂದುತ್ವಕ್ಕೆ ಹೋರಾಡಿದ ಹಿಂದುಳಿದವರು ಜೈಲಿನಲ್ಲಿದ್ದಾರೆ ಅಥವಾ ಕೊಲೆಯಾಗಿದ್ದಾರೆ. ಇದು ಬಿಜೆಪಿ ಮತ್ತು ಆರ್‌ಎಸ್‌ಎಸ್ ನಾಯಕರು ಹಿಂದುಳಿದ ವರ್ಗಗಳಿಗೆ ಕೊಟ್ಟಿರುವ ಕೊಡುಗೆ ಎಂದು ಹರಿಪ್ರಸಾದ್ ಕಿಡಿಕಾರಿದರು.
ಬಹಳ ವಿಶೇಷವಾಗಿ ಉತ್ತರ ಭಾರತದ ಹಿಂದುಳಿದ ವರ್ಗಗಳು ಸಂವಿಧಾನವನ್ನು ಉಳಿಸಲು ಮೊದಲು ಮುಂದಾಗಬೇಕು. ಏಕೆಂದರೆ ಪೆರಿಯಾರ್ ರಾಮಸ್ವಾಮಿ ಕಾರಣಕ್ಕೆ ಬಿಜೆಪಿ ತಮಿಳುನಾಡು ಪ್ರವೇಶ ಮಾಡಲು ಸಾಧ್ಯವಾಗಿಲ್ಲ. ಇಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಚಿಂತನೆಗೆ ಆಸ್ಪದವಿಲ್ಲ. ಕೇರಳದಲ್ಲಿ ನಾರಾಯಣಗುರು ಇರುವುದರಿಂದ ಅಲ್ಲೂ ಬಿಜೆಪಿ ಮತ್ತು ಆರ್‌ಎಸ್‌ಎಸ್ ಬೆಳೆಯಲು ಸಾಧ್ಯವಾಗುವುದಿಲ್ಲ.
ಆಂಧ್ರ ಮತ್ತು ತೆಲಗಾಂಣದಲ್ಲಿ ವೇಮನ ಇರುವುದರಿಂದ ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ಅಲ್ಲೂ ಜಾಗವಿಲ್ಲ. ಕರ್ನಾಟಕದಲ್ಲಿ ಬಸವಣ್ಣ ಇರುವ ಕಾರಣಕ್ಕೆ ಈಗಲೂ ಬಿಜೆಪಿಗೆ ಎಂದೂ ಬಹುಮತ ಸಿಕ್ಕಿಲ್ಲ. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್, ಜ್ಯೋತಿ ಬಾಫುಲೆ, ಸಾವಿತ್ರಿ ಬಾಫುಲೆ, ಸಾಹು ಮಹಾರಾಜ್, ಫಾತಿಮಾ ಶೇಕ್ ಇದ್ದರೂ ಅಲ್ಲಿ ಅವರು ಬಹುಮತದ ಹತ್ತಿರಕ್ಕೆ ಬಂದಿದ್ದಾರೆ. ಇದು ಅಪಾಯದ ಮುನ್ಸೂಚನೆ ಎಂದು ಹೇಳಿದರು.