ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಶುರುವಾಗಿ ತಿಂಗಳು ಕಳೆದಿದ್ದರೂ ವಾಡಿಕೆಗಿಂತ ಶೇ. 20ರಷ್ಟು ಮಳೆ ಕಡಿಮೆ ಆಗಿದೆ. ಜೂನ್ ತಿಂಗಳಲ್ಲಿ ವಾಡಿಕೆಯಂತೆ ಸರಾಸರಿ 208 ಮಿಲಿಮೀಟರ್ ಮಳೆ ಆಗಬೇಕಿತ್ತು. ಆದರೆ ಕೇವಲ 167 ಮಿಲಿಮೀಟರ್ ಮಳೆ ಆಗಿದೆ.
ಕರಾವಳಿ ಕರ್ನಾಟಕದಲ್ಲಿ ವಾಡಿಕೆಗಿಂತ ಶೇ.33ರಷ್ಟು ಕಡಿಮೆ ಮಳೆ ಆಗಿದೆ. 873 ಮಿಲಿಮೀಟರ್ ಮಳೆ ಆಗಬೇಕಿದ್ದ ಕಡೆ 585 ಮಿಲಿಮೀಟರ್ ಮಳೆ ಆಗಿದೆ. ಮಲೆನಾಡು ಭಾಗದಲ್ಲಿ ಶೇ.46ರಷ್ಟು ಮಳೆ ಕೊರತೆ ಆಗಿದೆ. 384 ಮಿಲಿಮೀಟರ್ ಮಳೆ ಆಗಬೇಕಿದ್ದ ಕಡೆ 208 ಮಿಲಿ ಮೀಟರ್ ಮಳೆ ಆಗಿದೆ. ಕೊಡಗು ಜಿಲ್ಲೆಯೊಂದನ್ನು ಪರಿಗಣಿಸಿದರೆ ಶೇ. 53ರಷ್ಟು ಮಳೆ ಕೊರತೆ ಆಗಿದೆ. ಇದನ್ನೂ ಓದಿ: ಕೊಡಗಿನ ಚೆಂಬು, ಪೆರಾಜೆಯಲ್ಲಿ ಮತ್ತೆ ಕಂಪಿಸಿದ ಭೂಮಿ
ಬೆಂಗಳೂರು ಗ್ರಾಮಾಂತರದಲ್ಲಿ ಮಾತ್ರ ವಾಡಿಕೆಗಿಂತ ಹೆಚ್ಚು ಶೇ.85ರಷ್ಟು ಹೆಚ್ಚು ಮಳೆ ಆಗಿದೆ. 69 ಮಿಲಿಮೀಟರ್ ಮಳೆ ಆಗಬೇಕಿದ್ದ ಕಡೆ 198 ಮಿಲಿಮೀಟರ್ ಮಳೆ ಆಗಿದೆ. ಬೆಂಗಳೂರು ನಗರದಲ್ಲಿ 73 ಮಿಲಿಮೀಟರ್ ಮಳೆ ಆಗಬೇಕಿತ್ತು. ಆದರೆ 166 ಮಿಲಿಮೀಟರ್ ಮಳೆ ಆಗಿದೆ.
ಉತ್ತರ ಒಳನಾಡಿನಲ್ಲಿ ಸಾಮಾನ್ಯದಂತೆ ಮಳೆ ಆಗಿದೆ. ಒಟ್ಟಾರೆ 7 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ, 12 ಜಿಲ್ಲೆಗಳಲ್ಲಿ ವಾಡಿಕೆ ಮಳೆ, 10 ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಆಗಿದೆ.
ಕರಾವಳಿ ಮಲೆನಾಡು ಭಾಗದಲ್ಲಿ ಇಂದಿನಿಂದ ಜುಲೈ 8ರವರೆಗೂ ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.