Bengaluru CityKarnatakaLatestMain Post

BEL ವಸ್ತು ಪ್ರದರ್ಶನವನ್ನು ಉದ್ಘಾಟಿಸಿದ ರಾಜನಾಥ್ ಸಿಂಗ್

ಬೆಂಗಳೂರು: ಭಾರತ ರಕ್ಷಣಾ ಇಲಾಖೆಯ ಸಾರ್ವಜನಿಕ ಉದ್ಯಮವಾದ, ಭಾರತ್ ಎಲೆಕ್ಟ್ರಾನಿಕ್ಸ್ ಬೆಂಗಳೂರು (ಬಿಇಎಲ್‍) ಘಟಕದಲ್ಲಿ ಇಂದಿನಿಂದ ಡಿಸೆಂಬರ್ 19 ರವರೆಗೆ ವಸ್ತು ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದ್ದು, ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಆನ್‍ಲೈನ್ ಮೂಲಕ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ ಉತ್ಪಾದನೆಯಲ್ಲಿ ಬಿಇಎಲ್‍ನ ಪಾತ್ರವನ್ನು ಪ್ರಶಂಸಿದರು. ರಕ್ಷಣಾ ಉತ್ಪಾದನೆಯ ಪ್ರಮುಖ 20 ಕಂಪನಿಗಳಲ್ಲಿ ಬಿಇಎಲ್ ಸ್ಥಾನವನ್ನು ಶ್ಲಾಘಿಸಿದರು. ಸಂಸ್ಥೆಯ ಉತ್ಪಾದನೆ ಹಾಗೂ ನಿರ್ಮಾಣಗಳಲ್ಲಿ ರಕ್ಷಣಾ ಸಚಿವಾಲಯದ ಸಹಯೋಗದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಸ್ತು ಪ್ರದರ್ಶನದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ನಿರ್ಮಿಸುವ ರಕ್ಷಣೆ ಹಾಗೂ ರಕ್ಷಣೇತರ ಉತ್ಪನ್ನಗಳ ವೈವಿಧ್ಯಮಯ ಪ್ರದರ್ಶನವನ್ನು ಸಾರ್ವಜನಿಕರಿಗಾಗಿ ಹಾಗೂ ವಿಶೇಷವಾಗಿ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗಿದೆ. ಈ ವಸ್ತು ಪ್ರದರ್ಶನದಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಾದ ರಾಡರ್ ವ್ಯವಸ್ಥೆಗಳು, ಎಲೆಕ್ಟ್ರಾನಿಕ್ ಉಪಕರಣಗಳು, ಎಲೆಕ್ಟ್ರಾನಿಕ್ ಮತದಾನ ಯಂತ್ರಗಳು ಹಾಗೂ ಇತರ ವಿಶಿಷ್ಟ ಉಪಕರಣಗಳ ಪ್ರದರ್ಶನ ಇದೆ. ಯುದ್ಧದಲ್ಲಿ ಬಳಸುವ ತೇಜಸ್ ಯುದ್ದ ವಿಮಾನಕ್ಕೆ ಬೇಕಾದ ಫ್ಲೈಟ್ ಕಂಟ್ರೋಲ್ ಸಿಸ್ಟಮ್, ರುಸ್ತಮ್, ಮಾಡೆಲ್, ಆಕಾಶ್ ಮಿಸೈಲ್ ಸಿಸ್ಟಮ್, ಶತ್ರುಗಳನ್ನು 25 ಕಿಲೋಮೀಟರ್ ದೂರದಲ್ಲಿದ್ದರೂ ಸಂಹಾರ ಮಾಡುವ ಮಿಸೈಲ್ ಲಾಂಚರ್, ರೇಡಾರ್, ಚುನಾವಣೆಯಲ್ಲಿ ಬಳಸುವ ವಿವಿಪ್ಯಾಡ್ ಮಿಶನ್, ಮಾನವ ರಹಿತ ಟ್ರ್ಯಾಕರ್, ವಿವಿಧ ಬಗೆಯ ಡ್ರೋನ್‍ಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಈ ಸಮಾರಂಭದಲ್ಲಿ ಬಿಇಎಲ್‍ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಆನಂದಿ ರಾಮಲಿಂಗಂ ಸೇರಿದಂತೆ ಎಲ್ಲಾ ನಿರ್ದೇಶಕ ವರ್ಗದವರು, ಪ್ರಧಾನ ವ್ಯವಸ್ಥಾಪಕರು ಮತ್ತು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದಲ್ಲಿ ಸುಮಾರು 300 ಜನ ವಿದ್ಯಾರ್ಥಿಗಳು ಹಾಗೂ ಎನ್‍ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು. ಸರ್ಕಾರದ ಮಾರ್ಗಸೂಚಿಗಳ ಅನುಸಾರ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ.

Leave a Reply

Your email address will not be published.

Back to top button