ಭಾರತದ (India) ರಫ್ತು ಉತ್ಪನ್ನಗಳು ಎಂದರೆ ಸಾಂಬಾರು ಪದಾರ್ಥಗಳು ಎಂದು ಉತ್ತರ ಬರೆಯುತ್ತಿದ್ದ ಕಾಲ ಈಗ ಸರಿದಿದೆ. ಇದೀಗ ಭಾರತ ರಕ್ಷಣಾ ಉತ್ಪನ್ನಗಳನ್ನು ಸಹ ವಿದೇಶಗಳಿಗೆ ರಫ್ತು (Defence exports) ಮಾಡುವ ಮಟ್ಟಕ್ಕೆ ಬೆಳೆದು ನಿಂತಿದೆ. ಮೇಕ್ ಇನ್ ಇಂಡಿಯಾದ ಸಹಕಾರದಿಂದ ಈ ಬಾರಿಯ (2023-24)ನಮ್ಮ ದೇಶದ ರಕ್ಷಣಾ ರಫ್ತು 21,083 ಕೋಟಿ ರೂ.ಗೆ ಏರಿಕೆಯಾಗಿದೆ.
ಭಾರತ ಮೂಲತಃ ಶಾಂತಿಯ ಮಾರ್ಗವನ್ನೇ ಅನುಸರಿಸಿ ಸ್ವಾತಂತ್ರ್ಯ ಪಡೆದ ದೇಶ. ಇದಾದ ಬಳಿಕವೂ ಶಾಂತಿಯ ಮಾರ್ಗದಲ್ಲೇ ಸಾಗುತ್ತಿದ್ದರು. ಅಕ್ಕಪಕ್ಕದ ಹಿತಶತ್ರು ದೇಶಗಳ ದಾಳಿ, ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವಾಗ ಭದ್ರತೆಯನ್ನು ಹೆಚ್ಚಿಸುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಭಾರತ ಮದ್ದು ಗುಂಡುಗಳು, ಅಣ್ವಸ್ತ್ರಗಳು ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಅಲ್ಲದೇ ಅಗತ್ಯ ಇರುವ ದೇಶಗಳಿಗೆ ರಫ್ತನ್ನು ಸಹ ಮಾಡುತ್ತಿದೆ. ಶಸ್ತ್ರಾಸ್ತ್ರಗಳ ರಫ್ತು ವರ್ಷದಿಂದ ವರ್ಷಕ್ಕೆ ಏರಿಕೆಯಾಗಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ. ಇದನ್ನೂ ಓದಿ: ವಿದೇಶಕ್ಕೆ ಭಾರತದ ಬ್ರಹ್ಮೋಸ್ – ಶಸ್ತ್ರಾಸ್ತ ರಫ್ತು ಎಷ್ಟಿತ್ತು? ಎಷ್ಟು ಏರಿಕೆಯಾಗಿದೆ?
Advertisement
ಮ್ಯಾನ್ಮಾರ್ ಭಾರತದ ಶಸ್ತ್ರಾಸ್ತ್ರಗಳ ಅತಿದೊಡ್ಡ ಆಮದುದಾರ
Advertisement
ಸ್ಟಾಕ್‌ಹೋಮ್ ಇಂಟರ್‌ನ್ಯಾಶನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಕಾರ, 2000 ಮತ್ತು 2023 ರ ನಡುವೆ ಮ್ಯಾನ್ಮಾರ್ ಭಾರತದ ಶಸ್ತ್ರಾಸ್ತ್ರಗಳ ಅತಿದೊಡ್ಡ ಆಮದುದಾರ ಎಂದು ವರದಿ ಮಾಡಿದೆ. ಇದು ಭಾರತದ ರಫ್ತಿನ 31% ಭಾಗ ಹೊಂದಿದೆ. ಶ್ರೀಲಂಕಾ 19%, ಮಾರಿಷಸ್, ನೇಪಾಳ, ಅರ್ಮೇನಿಯಾ, ವಿಯೆಟ್ನಾಂ ಮತ್ತು ಮಾಲ್ಡೀವ್ಸ್ ಇತರ ಪ್ರಮುಖ ಆಮದುದಾರರಾಗಿದ್ದಾರೆ.
Advertisement
Advertisement
ಶಸ್ತ್ರಾಸ್ತ ರಫ್ತು ಹೆಚ್ಚಳ
ಖಾಸಗಿ ಕಂಪನಿಗಳು ಸಹ ಶಸ್ತ್ರಾಸ್ತ್ರಗಳ ತಯಾರಿಸುತ್ತಿರುವ ಕಾರಣ ಭಾರತ ಹೆಚ್ಚು ಪ್ರಮಾಣದ ಶಸ್ತ್ರಾಸ್ತ್ರಗಳ ರಫ್ತು ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ರಫ್ತಿನ ಪ್ರಮಾಣ ಹೆಚ್ಚಾಗುತ್ತಿದೆ. ರಕ್ಷಣಾ ಸಚಿವಾಲಯದ ಪ್ರಕಾರ 2014-15 – 1,941 ಕೋಟಿ ರೂ., 2017-18 – 4,682 ಕೋಟಿ ರೂ., 2018-19- 10,746 ಕೋಟಿ ರೂ., 2021-22- 12,815 ಕೋಟಿ ರೂ., 2022-23 15,918 ಕೋಟಿ ರೂ. ಹಾಗೂ 2023-24 ರಲ್ಲಿ 21,083 ಕೋಟಿ ರೂ. ಮೊತ್ತದ ರಕ್ಷಣಾ ಸಾಮಾಗ್ರಿಗಳನ್ನು ಭಾರತ ರಫ್ತು ಮಾಡಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ಹೆಚ್ಚಿನ ಬೆಳವಣಿಗೆಯಾಗಿದೆ.
2025ರ ವೇಳೆಗೆ ಭಾರತ 35 ಸಾವಿರ ಕೋಟಿ ರೂ. ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡಬೇಕೆಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇದೇ ಬದ್ಧತೆಯಲ್ಲಿ ಭಾರತ ಮುಂದುವರಿದರೆ ಈ ಗುರಿಯನ್ನು ಮೀರಿ ಬೆಳೆಯುವುದರಲ್ಲಿ ಯಾವುದೇ ಸಂದೇಹ ಇಲ್ಲ.
ಯಾವೆಲ್ಲ ರಕ್ಷಣಾ ಉತ್ಪನ್ನಗಳು ರಫ್ತಾಗುತ್ತಿವೆ?
ಭಾರತೀಯ ಹಡಗುಗಳು ಅತ್ಯಂತ ಆಕರ್ಷಕ ರಕ್ಷಣಾ ಸರಕುಗಳಾಗಿವೆ. ಇದು ದೇಶದ ಒಟ್ಟು ರಕ್ಷಣಾ ರಫ್ತಿನ 61% ಹೊಂದಿದೆ. ಇದಾದ ನಂತರ 20% ರಷ್ಟು ವಿಮಾನಗಳು, 14% ರಷ್ಟು ಸಂಪರ್ಕ ಸಾಧನಗಳು, 2.8% ರಷ್ಟು ಶಸ್ತ್ರಸಜ್ಜಿತ ವಾಹನಗಳು ಮತ್ತು 1.1% ರಷ್ಟು ಫಿರಂಗಿಗಳನ್ನು ಭಾರತ ರಫ್ತು ಮಾಡುತ್ತಿದೆ.
ಕಳೆದ ಐದು ವರ್ಷಗಳಲ್ಲಿ ರಫ್ತು ಮಾಡಲಾದ ಪ್ರಮುಖ ರಕ್ಷಣಾ ಸಾಧನಗಳಲ್ಲಿ ಸಿಮ್ಯುಲೇಟರ್, ಅಶ್ರುವಾಯು ಲಾಂಚರ್, ALH ಹೆಲಿಕಾಪ್ಟರ್‌ಗಳು, ಟಾರ್ಪಿಡೊ-ಲೋಡಿಂಗ್ ಮೆಕ್ಯಾನಿಸಂ, ಅಲಾರ್ಮ್ ಮಾನಿಟರಿಂಗ್ ಮತ್ತು ಕಂಟ್ರೋಲ್, ನೈಟ್ ವಿಷನ್ ಮಾನೋಕ್ಯುಲರ್ ಮತ್ತು ಬೈನಾಕ್ಯುಲರ್, ಅಗ್ನಿಶಾಮಕ ನಿಯಂತ್ರಣ ವ್ಯವಸ್ಥೆಗಳು, ಶಸ್ತ್ರಸಜ್ಜಿತ ರಕ್ಷಣಾ ವಾಹನ, ಶಸ್ತ್ರಾಸ್ತ್ರಗಳನ್ನು ಪತ್ತೆ ಹಚ್ಚುವ ರಾಡಾರ್, ಆಕಾಶ್ ಕ್ಷಿಪಣಿ, ಹೈ ಫ್ರಿಕ್ವೆನ್ಸಿ ರೇಡಿಯೊ, ಡ್ರೋಣ್‌ಗಳು ಸೇರಿದಂತೆ ಇತ್ಯಾದಿಗಳನ್ನು ರಫ್ತು ಮಾಡಲಾಗಿದೆ.
ಇಟಲಿ, ಶ್ರೀಲಂಕಾ, ರಷ್ಯಾ, ಮಾಲ್ಡೀವ್ಸ್, ಮಾರಿಷಸ್, ನೇಪಾಳ, ಫ್ರಾನ್ಸ್, ಶ್ರೀಲಂಕಾ, ಈಜಿಪ್ಟ್, ಇಸ್ರೇಲ್, ಭೂತಾನ್, ಯುಎಇ, ಸೌದಿ ಅರೇಬಿಯಾ, ಇಥಿಯೋಪಿಯಾ, ಫಿಲಿಪೈನ್ಸ್, ಪೋಲೆಂಡ್, ಸ್ಪೇನ್ ಮತ್ತು ಚಿಲಿ ದೇಶಗಳು ರಫ್ತು ಲಿಸ್ಟ್‌ನಲ್ಲಿವೆ.
ಖಾಸಗಿ ವಲಯಯದ ಕೊಡುಗೆ
ಭಾರತದಲ್ಲಿ ಖಾಸಗಿ ವಲಯದ ಸುಮಾರು 50 ಕಂಪನಿಗಳು ರಕ್ಷಣಾ ರಫ್ತಿಗೆ ಕೊಡುಗೆ ನೀಡಿವೆ. ಲಘು ಯುದ್ಧ ವಿಮಾನ ತೇಜಸ್, ಲಘು ಯುದ್ಧ ಹೆಲಿಕಾಪ್ಟರ್‌ಗಳು ಮತ್ತು ಯುದ್ಧ ನೌಕೆಗಳಂತಹ ಸ್ವದೇಶಿ ಉತ್ಪನ್ನಗಳಲ್ಲಿ ತಯಾರಿಸಲು ಖಾಸಗಿ ಕಂಪನಿಗಳು ಉತ್ಸಾಹ ತೋರಿಸುತ್ತಿವೆ. ಅಲ್ಲದೇ ಫಿರಂಗಿ ಬಂದೂಕುಗಳು, ಬ್ರಹ್ಮೋಸ್ ಕ್ಷಿಪಣಿಗಳು, ಪಿನಾಕಾ ರಾಕೆಟ್‌ಗಳು ಮತ್ತು ಲಾಂಚರ್‌ಗಳು, ರಾಡಾರ್‌ಗಳು, ಸಿಮ್ಯುಲೇಟರ್‌ಗಳು ಮತ್ತು ಶಸ್ತ್ರಸಜ್ಜಿತ ವಾಹನಗಳಂತಹ ವಿಮಾನ ಸೇರಿದಂತೆ ಉತ್ತಮ ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿವೆ.
ಮೇಕ್ ಇನ್ ಇಂಡಿಯಾ ನೀಡಿದ ಚುರುಕು
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೇಕ್ ಇನ್ ಇಂಡಿಯಾ ನೀತಿಯಿಂದ (Make In India) ಭಾರತದ ರಕ್ಷಣಾ ಕ್ಷೇತ್ರ ಸೇರಿದಂತೆ ವಿವಿಧ ವಲಯಗಳಲ್ಲಿ ಉತ್ಪಾದನೆಗೆ ಪ್ರೋತ್ಸಾಹ ದೊರೆತಿದೆ. ಇದು ಭಾರತದ ಆಮದನ್ನು ಖಡಿತಗೊಳಿಸಿದ್ದು, ಸರಕುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ರಫ್ತು ಮಾಡಲು ಸಾಧ್ಯವಾಗಿದೆ.
ಈ ವರ್ಷ ಫಿಲಿಪೈನ್ಸ್‌ಗೆ ಬ್ರಹ್ಮೋಸ್ ರಫ್ತು
ಜ.2022 ರಲ್ಲಿ, ಎರಡು ದೇಶಗಳು 3,130 ಕೋಟಿ ರೂ. ಒಪ್ಪಂದಕ್ಕೆ ಸಹಿ ಹಾಕಿದ್ದವು. ಒಪ್ಪಂದದ ಅಡಿಯಲ್ಲಿ, ಭಾರತ ಮತ್ತು ರಷ್ಯಾದ ಜಂಟಿ ಉದ್ಯಮವಾದ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಹೈಸ್ಪೀಡ್ ಬ್ರಹ್ಮೋಸ್ ಕ್ಷಿಪಣಿ ವ್ಯವಸ್ಥೆಯ ಮೂರು ರಫ್ತು ಆವೃತ್ತಿಗಳೊಂದಿಗೆ ಕ್ಷಿಪಣಿಗಳನ್ನು ಪೂರೈಸುತ್ತಿದೆ. ಅಲ್ಲದೇ ಈ ಒಪ್ಪಂದದಲ್ಲಿ ಬ್ರಹ್ಮೋಸ್ ನಿರ್ವಹಣೆಗೆ ಬೇಕಾದ ಅಗತ್ಯ ತರಬೇತಿಯನ್ನು ಸಹ ನಿರ್ವಾಹಕರಿಗೆ ನೀಡಲಿದೆ. ಇದೀಗ ಯುದ್ಧ ಸಾಮಗ್ರಿಗಳ ಮೊದಲ ಬ್ಯಾಚ್ ಅಂತಿಮವಾಗಿ ಫಿಲಿಪೈನ್ಸ್‌ಗೆ ತಲುಪಿದೆ. ಇದರೊಂದಿಗೆ ಭಾರತ ವಿಶ್ವದ 12 ದೇಶಗಳಿಗೆ ಬ್ರಹ್ಮೋಸ್ (BrahMos) ಕ್ಷಿಪಣಿಯನ್ನು ರಫ್ತು ಮಾಡಲು ಮಾತುಕತೆ ನಡೆದಿದೆ.
ಬ್ರಹ್ಮೋಸ್ ವಿಶೇಷತೆ ಏನು?
ಚಲಿಸುವ ಪಥದ ಆಧಾರದ ಮೇಲೆ ಕ್ಷಿಪಣಿಗಳನ್ನು ಬ್ಯಾಲಿಸ್ಟಿಕ್ ಮತ್ತು ಕ್ರೂಸ್ ಕ್ಷಿಪಣಿಗಳಾಗಿ ವಿಂಗಡಿಸಲಾಗುತ್ತದೆ. ಬ್ಯಾಲಿಸ್ಟಿಕ್ ಕ್ಷಿಪಣಿ ಭೂಮಿಯ ವಾತಾವರಣವನ್ನು ಬಿಟ್ಟು ಬಾಹ್ಯಾಕಾಶವನ್ನು ಪ್ರವೇಶಿಸಿ ನಂತರ ಭೂಮಿಗೆ ಅಪ್ಪಳಿಸುತ್ತದೆ. ಭಾರತದ ಅಗ್ನಿ, ಪೃಥ್ವಿ ಬ್ಯಾಲಿಸ್ಟಿಕ್ ಕ್ಷಿಪಣಿಗಳಾಗಿವೆ.
ಕ್ರೂಸ್ ಕ್ಷಿಪಣಿ ಶಬ್ಧದ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಹೋಗುತ್ತದೆ. ಆರಂಭದಲ್ಲಿ ಕ್ರೂಸ್ ಕ್ಷಿಪಣಿ ಕೆಳಹಂತದಲ್ಲಿ ಭೂಮಿಯ ಮೇಲ್ಮೆಗೆ ಸಮಾನಂತರವಾಗಿ ಶಬ್ಧದ ವೇಗಕ್ಕಿಂತ ಕಡಿಮೆ ವೇಗದಲ್ಲಿ ಚಲಿಸಿ ಗುರಿ ತಲುಪುತ್ತಿದ್ದಂತೆ ಇದರ ವೇಗ ಶಬ್ಧದ ವೇಗಕ್ಕಿಂತ ಹೆಚ್ಚಾಗಿ ಕೊನೆಗೆ ಗುರಿಯನ್ನು ತಲುಪುತ್ತದೆ. ಈ ತಂತ್ರಜ್ಞಾನದಿಂದ ಶತ್ರುಗಳ ರೇಡಾರ್‌ಗಳಿಗೆ ಸಹ ಈ ಕ್ಷಿಪಣಿಯ ಪಥವನ್ನು ಅಷ್ಟು ಸುಲಭವಾಗಿ ಪತ್ತೆ ಹಚ್ಚಲು ಸಾಧ್ಯವಾಗುವುದಿಲ್ಲ. ಈ ಕ್ಷಿಪಣಿ ಸಮುದ್ರದ ಒಳಗೆ ಹೋಗಿ ಮತ್ತೆ ಮೇಲೆ ಬರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯ ವರ್ಗಕ್ಕೆ ಸೇರುತ್ತದೆ. ಬ್ರಹ್ಮೋಸ್ ಕ್ಷಿಪಣಿಯು 2.8 ಮ್ಯಾಕ್ ವೇಗದಲ್ಲಿ ಚಲಿಸುತ್ತದೆ, ಇದು ಶಬ್ದದ ವೇಗಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಬ್ರಹ್ಮೋಸ್ ಕ್ಷಿಪಣಿಗಳನ್ನು ಭೂಮಿಯಿಂದ, ಬಾನಿನಿಂದ, ಸಮುದ್ರದಿಂದ, ಜಲಾಂತರ್ಗಾಮಿ, ಚಲಿಸುವ ವಾಹನಗಳಿಂದಲೂ ಉಡಾಯಿಸಬಹುದು. ಭೂ ನೆಲೆ ಮತ್ತು ಯುದ್ಧ ನೌಕೆ ಆಧಾರಿತ ಬ್ರಹ್ಮೋಸ್ ಕ್ಷಿಪಣಿಗಳು ಗರಿಷ್ಠ 200 ಕೆಜಿ ಸಿಡಿತಲೆಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದ್ದರೆ ಯುದ್ಧ ವಿಮಾನದಿಂದ ಉಡಾವಣೆಯಾಗುವ ವೇರಿಯೆಂಟ್ 300 ಕೆಜಿ ಭಾರವನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ. ಇದನ್ನೂ ಓದಿ: ಮಿಷನ್ ದಿವ್ಯಾಸ್ತ್ರ ಪ್ರಯೋಗ ಯಶಸ್ವಿ – ಏನಿದು MIRV ತಂತ್ರಜ್ಞಾನ? ಯುದ್ಧದ ವೇಳೆ ಹೇಗೆ ಸಹಾಯವಾಗುತ್ತೆ? ಯಾರ ಬಳಿಯಿದೆ?