ಬೆಂಗಳೂರು: ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿಯ ನೂತನ ಶಾಸಕರಿಗೆ ಸೋತವರು ಗುದ್ದು ನೀಡಿದ್ದಾರೆ.
ಸೋತವರು ಸದ್ಯಕ್ಕೆ ಸಚಿವರಾಗುವಂತಿಲ್ಲ ಎಂಬ ಸಿಎಂ ಹೇಳಿಕೆ ಬೆನ್ನಲ್ಲೇ ಸೋತ ಹೆಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಸ್ಪರ್ಧೆಯಿಂದ ಹಿಂದೆ ಸರಿದಿದ್ದ ಆರ್.ಶಂಕರ್ ಮಿತ್ರಮಂಡಳಿಯ ಇತರರ ಮೇಲೆ ಕೋಪಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಗೆಲುವಿನ ಬಳಿಕ ನೀವ್ಯಾರು ನಮಗೆ ಸಚಿವ ಸ್ಥಾನ ಕೊಡುವಂತೆ ಹೇಳುತ್ತಿಲ್ಲ. ನಿಮಗೆ ಮಾತ್ರ ಸಚಿವ ಸ್ಥಾನ ಬೇಕೆಂದು ಮಾತ್ರ ಹೇಳಿದ್ರೆ ಹೇಗೆ? ನಮ್ಮೆಲ್ಲರ ನಡುವೆ ಮೊದಲಿನಂತೆ ಒಗ್ಗಟ್ಟಿಲ್ಲ. ನಿಮ್ಮ ಜೊತೆಗೆ ಬಿಜೆಪಿಗೆ ಬಂದ ನಾವು ಈಗ ಬೇರೆಯಾಗಿ ಬಿಟ್ಟವಾ ಎಂದು ಪ್ರಶ್ನಿಸಿ ಎಂಟಿಬಿ, ವಿಶ್ವನಾಥ್, ಆರ್. ಶಂಕರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
Advertisement
ಇತ್ತ ಸಿಎಂ ಹೇಳಿಕೆಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿರುವ ಹಳ್ಳಿ ಹಕ್ಕಿ, ಸೋತವರ ಬಿಟ್ಟು ಸಚಿವ ಸಂಪುಟ ವಿಸ್ತರಣೆ ಹೇಗೆ ಸಾಧ್ಯ? ಸಿಎಂ ಅವರ ಮಾತನ್ನು ನೆನಪಿಸ್ತೇವೆ. ನಮ್ಮದು ಸಾಮಾನ್ಯ ಸೋಲಲ್ಲ. ಬಿಜೆಪಿ ಇಲ್ಲದ ಕಡೆ ಚುನಾವಣೆಗೆ ನಿಂತು ದೊಡ್ಡ ಮಟ್ಟದಲ್ಲಿ ಮತ ಪಡೆದಿದ್ದೇವೆ. ಸಿಎಂ ಹಾಗೂ ಬಿಜೆಪಿ ಇದನ್ನು ಪರಿಗಣಿಸಬೇಕು. ಶೀಘ್ರ ದಲ್ಲೆ ಎಲ್ಲಾ 17 ಶಾಸಕರು ಸಭೆ ಮಾಡಿ ಸಿಎಂ ಭೇಟಿ ಮಾಡುತ್ತೇವೆ ಎಂದಿದ್ದಾರೆ.
Advertisement
Advertisement
ಹೊಸಕೋಟೆಯಲ್ಲಿ ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಎಂಟಿಬಿ, ಮುಖ್ಯಮಂತ್ರಿಗಳು ಕೊಟ್ಟ ಮಾತು ತಪ್ಪಲ್ಲ ಅನ್ನೋ ವಿಶ್ವಾಸ ಇದೆ. ನಾವು 17 ಜನ ಸಭೆ ಸೇರಿ ತೀರ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
Advertisement
ಸಿಎಂ ಯಡಿಯೂರಪ್ಪ ಚುನಾವಣೆ ಗೆದ್ದ 24 ಗಂಟೆಯಲ್ಲಿ ಮಂತ್ರಿ ಮಾಡ್ತೀವಿ ಅಂದಿದ್ದರು. 24 ಗಂಟೆಯಲ್ಲ, 24 ದಿನ ಕಳೆದರೂ ಮಂತ್ರಿನೂ ಇಲ್ಲ, ಕ್ಯಾರೇಯೂ ಅಂತಿಲ್ಲ. ದಾರಿ ತಪ್ಪಿದ ಮಕ್ಕಳಾದಂತೆ ಆದ ಮಿತ್ರಮಂಡಳಿ ಸದಸ್ಯರ ಗೋಳಾಟದ ಬಗ್ಗೆ ಸಿಎಂ ಮಾತ್ರ ಮಾತನಾಡುತ್ತಾರೆ. ಆದರೆ ಯಾವುದೇ ಬಿಜೆಪಿ ನಾಯಕರು ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಉಪ ಚುನಾವಣೆ ಗೆದ್ದ ಬಳಿಕ ಮೌನಕ್ಕೆ ಶರಣಾಗಿರುವ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ, ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಒಳಗೊಳಗೆ ಅಸಮಾಧಾನ ಹೊಂದಿದ್ದಾರೆ. ಇತ್ತ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ವಿಶ್ವನಾಥ್, ಎಂ.ಟಿ.ಬಿ ಬೆಂಕಿಯುಂಡೆಯಾಗಿದ್ದಾರೆ ಎಂಬ ಮಾತುಗಳು ಬಿಜೆಪಿ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.