ಉಡುಪಿ: ಕೆಸರಿನ ಹೊಂಡದಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ ಜಿಂಕೆಯನ್ನು ರಕ್ಷಣೆ ಮಾಡಲು ಕುಂದಾಪುರದ ಇಬ್ಬರು ಸಾಹಸಿಗರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರೆ.
ಬಾಯಾರಿಕೆಯಿಂದ ಬಳಲಿ ನೀರು ಅರಸುತ್ತಾ ಜಿಂಕೆಯೊಂದು ಕಾಡಿನಿಂದ ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಸಿದ್ಧಾಪುರಕ್ಕೆ ಬಂದಿದೆ. ಕೆಸರಿನ ಹೊಂಡದ ನಡುವೆ ನೀರು ಕಂಡ ಜಿಂಕೆ ಮದಗಕ್ಕೆ ಇಳಿದಿದೆ. ಅಷ್ಟರಲ್ಲಿ ಪಾಪ ಜಿಂಕೆಯ ನಾಲ್ಕೂ ಕಾಲುಗಳು ಕೆಸರಿನಾಳದಲ್ಲಿ ಹೂತು ಹೋಗಿದೆ. ಚೂಪು ಕಾಲಿನ ಜಿಂಕೆಗೆ ಮೇಲೆ ಬಾರದ ಸ್ಥಿತಿ ನಿರ್ಮಾಣವಾಗಿದೆ.
ಇದು ಸ್ಥಳೀಯರ ಗಮನಕ್ಕೆ ಬಂದಿದೆ. ಕೂಡಲೇ ಸ್ಥಳದಲ್ಲಿ ಜನರು ಜಮಾಯಿಸಿದ್ದಾರೆ. ಸ್ಥಳೀಯ ಅರಣ್ಯಾಧಿಕಾರಿಗಳಿಗೂ ಮಾಹಿತಿ ರವಾನಿಸಲಾಗಿದೆ. ಅರಣ್ಯಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿದ್ದಾರೆ. ಅಷ್ಟರಲ್ಲಿ ಜೀವದ ಹಂಗು ತೊರೆದು ಕೃಷ್ಣ ಪೂಜಾರಿ ಮತ್ತು ಪ್ರಶಾಂತ್ ಕುಮಾರ್ ಕೆಸರಿನ ಮದಗಕ್ಕೆ ಇಳಿದಿದ್ದಾರೆ.
ತಾವು ಕೆಸರಲ್ಲಿ ಹೂತು ಹೋಗುತ್ತಿದ್ದರೂ ಅದನ್ನು ಲೆಕ್ಕಿಸದೆ ಜಿಂಕೆಯನ್ನು ರಕ್ಷಿಸಲು ಹೋರಾಟ ಮಾಡಿದ್ದಾರೆ. ಇಬ್ಬರನ್ನು ಕಂಡು ಕಾಡುಪ್ರಾಣಿಯೂ ಭಯಗೊಂಡು ಸಹಕರಿಸಿಲ್ಲ. ನಂತರ ಹರಸಾಹಸ ಪಟ್ಟು ಜಿಂಕೆಯನ್ನು ಹೊಂಡದಿಂದ ಮೇಲೆತ್ತಲಾಯ್ತು. ಕೆಸರು ದಾಟಿ ಗಟ್ಟಿ ಭೂಮಿ ಸಿಕ್ಕ ಕೂಡಲೇ ಜಿಂಕೆ ಬದುಕಿದ್ನಲ್ಲಾ ಬಡಜೀವ ಅಂತ ಕಾಡಿನತ್ತ ಓಡಿಹೋಗಿದೆ.
ಪ್ರಾಣವನ್ನೇ ಪಣಕ್ಕಿಟ್ಟು ಮೂಕ ಪ್ರಾಣಿಯನ್ನು ರಕ್ಷಣೆ ಮಾಡಿದ ಕೃಷ್ಣಪೂಜಾರಿ ಮತ್ತು ಪ್ರಶಾಂತ್ ಕುಮಾರ್ ಅವರ ಸಾಹಸವನ್ನು ಸ್ಥಳೀಯರು, ಅರಣ್ಯಾಧಿಕಾರಿಗಳು ಹೊಗಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಕೃಷ್ಣಪೂಜಾರಿ ಮತ್ತು ಪ್ರಶಾಂತ್ ಮಾತು ಬಾರದ ಮೂಕ ಪ್ರಾಣಿಯ ವೇದನೆ ಕಂಡು ಸುಮ್ಮನಿರಲು ಮನಸ್ಸು ಕೇಳಲಿಲ್ಲ. ನೇರ ಕೆಸರಿಗೆ ಇಳಿದೇ ಬಿಟ್ಟೆವು. ನಾವು ಹೂತು ಹೋಗುವ ಪರಿಸ್ಥಿತಿ ಎದುರಾದರೆ ಅರಣ್ಯ ಇಲಾಖೆ, ಸ್ಥಳೀಯರು ಸಹಾಯಕ್ಕೆ ಬರುತ್ತಾರೆ ಎಂಬ ನಂಬಿಕೆಯಿತ್ತು ಎಂದು ಹೇಳಿದ್ದಾರೆ.