ನವದೆಹಲಿ: ಜೈಲು ಶಿಕ್ಷೆಯಿಂದ ತನ್ನನ್ನು ಪಾರು ಮಾಡಿದ ಅಣ್ಣ ಮುಕೇಶ್ ಅಂಬಾನಿಗೆ ಅನಿಲ್ ಅಂಬಾನಿ ಹೃದಯಪೂರ್ವಕ ಧನ್ಯವಾದ ತಿಳಿಸಿದ್ದಾರೆ.
ಎರಿಕ್ಸನ್ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಿಲಯನ್ಸ್ ಕಮ್ಯೂನಿಕೇಶನ್(ಆರ್‌ಕಾಂ) ತಪ್ಪು ಎಸಗಿದ್ದು ಈ ಆದೇಶ ಪ್ರಕಟವಾದ 4 ವಾರದ ಒಳಗಡೆ ಹಣವನ್ನು ಪಾವತಿಸಬೇಕು. ಒಂದು ವೇಳೆ ಹಣವನ್ನು ಪಾವತಿ ಮಾಡದಿದ್ದಲ್ಲಿ ಅನಿಲ್ ಅಂಬಾನಿಯನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಫೆ.20 ರಂದು ಮಹತ್ವದ ಆದೇಶ ಪ್ರಕಟಿಸಿತ್ತು.
ಈ ಅವಧಿ ಮುಗಿಯುವ ಒಂದು ದಿನದ ಮೊದಲು ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಹಣ ಪಾವತಿ ಸಂಬಂಧ ಅನಿಲ್ ಅಂಬಾನಿಗೆ ಸಹಾಯ ಮಾಡಿದ್ದರು. ಮುಕೇಶ್ ಅಂಬಾನಿ ಹಣ ನೀಡಿದ ಬಳಿಕ ಸೋಮವಾರ ಆರ್‌ಕಾಂ ಕಂಪನಿ ಎರಿಕ್ಸನ್ ಕಂಪನಿಗೆ 458.77 ಕೋಟಿ ರೂ. ಹಣವನ್ನು ಪಾವತಿಸಿದೆ.
ಈ ಸಂಬಂಧ ಹೇಳಿಕೆ ಆರ್‌ಕಾಂ ವಕ್ತಾರರು ಅನಿಲ್ ಅಂಬಾನಿ ಅವರ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. “ಕಷ್ಟದ ಸಮಯದಲ್ಲಿ ನನ್ನ ಬೆಂಬಲವಾಗಿ ನಿಂತ ಅಣ್ಣ ಮುಕೇಶ್ ಅಂಬಾನಿ ಮತ್ತು ಅತ್ತಿಗೆ ನೀತಾ ಅವರಿಗೆ ಧನ್ಯವಾದಗಳು. ನಮ್ಮ ನಡುವಿನ ಗಟ್ಟಿಯಾದ ಕುಟುಂಬದ ಬಾಂಧವ್ಯದ ಮಹತ್ವವನ್ನು ಮತ್ತೊಮ್ಮೆ ಎತ್ತಿ ಹಿಡಿದು ಸಹಾಯ ಮಾಡಿದ್ದಕ್ಕೆ ನಾನು ಚಿರಋಣಿಯಾಗಿದ್ದಾನೆ, ನನ್ನ ಹೃದಯ ತುಂಬಿ ಬಂದಿದೆ” ಎಂದು ಅನಿಲ್ ಅಂಬಾನಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಏನಿದು ನ್ಯಾಯಾಂಗ ನಿಂದನೆ ಕೇಸ್?
ಸ್ವೀಡನ್ ಮೂಲದ ದೂರ ಸಂಪರ್ಕ ಉಪಕರಣಗಳ ನಿರ್ಮಾಣ ಕಂಪನಿ ಎರಿಕ್ಸನ್‍ಗೆ ರಿಲಯನ್ಸ್ ಕಮ್ಯುನಿಕೇಷನ್ಸ್ 550 ಕೋಟಿ ರೂ. ಪಾವತಿಸಬೇಕಿತ್ತು. ಈ ಹಣವನ್ನು ಅಂಬಾನಿ ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್ ಈ ಹಿಂದೆ ಸುಪ್ರೀಂ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಬಾಕಿ ಹಣವನ್ನು 2018ರ ಸೆ.30ರ ಒಳಗಡೆ ಪಾವತಿಸುವಂತೆ ಆರ್‌ಕಾಂ ಗೆ ಸೂಚಿಸಿತ್ತು. ಈ ಗಡುವಿನ ಒಳಗಡೆ ಹಣವನ್ನು ಪಾವತಿ ಮಾಡದ ಹಿನ್ನೆಲೆಯಲ್ಲಿ ಎರಿಕ್ಸನ್ ಕಂಪನಿ ಅಕ್ಟೋಬರ್ ನಲ್ಲಿ ಮತ್ತೆ ಕೋರ್ಟ್ ಮೊರೆ ಹೋಗಿತ್ತು. ಈ ವೇಳೆ ಕೋರ್ಟ್ ಡಿಸೆಂಬರ್ 15ರ ಒಳಗಡೆ ಹಣವನ್ನು ಪಾವತಿಸಬೇಕೆಂದು ಆದೇಶಿಸಿತ್ತು. ಈ ಆದೇಶವನ್ನೂ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಎರಿಕ್ಸನ್ ಕಂಪನಿ ರಿಲಯನ್ಸ್ ಕಮ್ಯೂನಿಕೇಶನ್ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿತ್ತು.
ನ್ಯಾಯಾಂಗ ನಿಂದನೆ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಧೀಶರಾದ ಆರ್.ಎಫ್.ನಾರಿಮನ್ ಮತ್ತು ವಿನೀತ್ ಸಹರಾನ್ ಅವರು ಈ ಪ್ರಕರಣದಲ್ಲಿ ಅನಿಲ್ ಅಂಬಾನಿ ಜೊತೆ ರಿಲಯನ್ಸ್ ಟೆಲಿಕಾಂ ಮುಖ್ಯಸ್ಥ ಸತೀಶ್ ಸೇಠ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಮುಖ್ಯಸ್ಥೆ ಛಾಯಾ ವೈರನಿ ಸಹ ದೋಷಿಯಾಗಿದ್ದಾರೆ ಎಂದು ಹೇಳಿ ಅವರಿಗೂ ದಂಡ ವಿಧಿಸಿದ್ದರು.
ರಿಲಯನ್ಸ್ ಕಮ್ಯುನಿಕೇಷನ್, ರಿಲಯನ್ಸ್ ಟೆಲಿಕಮ್ಯುನಿಕೇಶನ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ನಾಲ್ಕು ವಾರದಲ್ಲಿ ಹಣವನ್ನು ಪಾವತಿಸಬೇಕು. ಇಲ್ಲವಾದಲ್ಲಿ ಈ ಕಂಪೆನಿಗಳ ಅಧ್ಯಕ್ಷರು ಒಂದು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಪೀಠ ಬಿಸಿ ಮುಟ್ಟಿಸಿತ್ತು. ಇದರ ಜೊತೆಯಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ ಈಗಾಗಲೇ ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ಠೇವಣಿ ಇಟ್ಟಿರುವ 118 ಕೋಟಿ ರೂ. ಹಣವನ್ನು ಎರಿಕ್ಸನ್ ಕಂಪನಿಗೆ ಒಂದು ವಾರದ ಒಳಗಡೆ ಪಾವತಿಸಬೇಕೆಂದು ಪೀಠ ಸೂಚಿಸಿತ್ತು.
ಎರಿಕ್ಸನ್ ಕಂಪನಿಗೆ ಪಾವತಿಸಬೇಕಿದ್ದ 550 ಕೋಟಿ ರೂ. ಪಾವತಿಸಲು ಈ ಹಿಂದೆ 120 ದಿನಗಳ ಅವಕಾಶ ನೀಡಲಾಗಿತ್ತು. ಮತ್ತೆ 60 ದಿನಗಳ ಅವಕಾಶವನ್ನು ವಿಸ್ತರಿಸಿದರೂ ಹಣವನ್ನು ಪಾವತಿಸದೇ ತನ್ನ ಆದೇಶವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ರಿಲಯನ್ಸ್ ಸಲ್ಲಿಸಿದ ಕ್ಷಮಾಯಾಚನೆಯನ್ನು ಕೋರ್ಟ್ ತಿರಸ್ಕರಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv