ಶಾರುಖ್ ಖಾನ್ (Shah Rukh Khan) ನಟನೆಯ ಪಠಾಣ್ ಸಿನಿಮಾದ ಎರಡನೇ ಹಾಡು ನಾಳೆ ಬಿಡುಗಡೆ ಆಗುತ್ತಿದೆ. ಅದಕ್ಕೂ ಮುನ್ನ ಈ ಹಾಡಿನ ಒಂದೇ ಒಂದು ಫೋಟೋವನ್ನು ರಿಲೀಸ್ ಮಾಡಲಾಗಿದ್ದು, ದೀಪಿಕಾ ಪಡುಕೋಣೆ (Deepika Padukone) ಈ ಹಾಡಿನಲ್ಲೂ ಸಖತ್ ಹಾಟ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಈ ಹಾಡಿನಲ್ಲೂ ಅವರು ಗ್ಲಾಮರ್ ಗೆ ಯಾವುದೇ ಕೊರತೆಯನ್ನು ಮಾಡಿಲ್ಲ. ಹಾಗಾಗಿ ಈ ಹಾಡಿನ ಬಗ್ಗೆಯೂ ಅಷ್ಟೇ ನಿರೀಕ್ಷೆಯನ್ನು ಹೊಂದಲಾಗಿದೆ. ಈ ಹಾಡು ಯಾವ ರೀತಿಯಲ್ಲಿ ಮೂಡಿ ಬಂದಿದೆ ಎನ್ನುವುದು ಸದ್ಯಕ್ಕಿರುವ ಕುತೂಹಲ.
ಪಠಾಣ್ (Pathan) ಸಿನಿಮಾದ ಎರಡನೇ ಹಾಡಾದ ‘ಜೂಮೇ ಜೋ ಪಠಾಣ್’ (Jhoome Jo Pathaan) ನಾಳೆ ರಿಲೀಸ್ ಮಾಡುತ್ತಿರುವ ಕುರಿತು ನಿರ್ಮಾಣ ಸಂಸ್ಥೆಯು ವಿಷಯವನ್ನು ಹಂಚಿಕೊಂಡಿದ್ದು, ಈ ಹಾಡು ಕೂಡ ಸಖತ್ ಆಗಿಯೇ ಚರ್ಚೆ ಆಗಲಿದೆ ಎಂದು ಮೊದಲೇ ಹೇಳಿಕೊಂಡಿದೆ. ಹಾಗಾಗಿ ಮತ್ತೇನಾದರೂ ವಿವಾದಕ್ಕೆ ಕಾರಣವಾಗಿರುವ ಅಂಶಗಳು ಇರಬಹುದಾ ಎನ್ನುವ ಚರ್ಚೆ ಕೂಡ ನಡೆದಿದೆ. ಮೊದಲ ಹಾಡಿನಲ್ಲಿ ದೀಪಿಕಾ ಕೇಸರಿ ಬಿಕಿನಿ ಹಾಕಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆದರೂ, ಚಿತ್ರತಂಡ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ.
ಎರಡನೇ ಹಾಡು ಬಿಡುಗಡೆಯ ಬೆನ್ನಲ್ಲೇ ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್ ಸಾರ್ವಕಾಲಿಕ ಶ್ರೇಷ್ಠ ನಟರ ಪಟ್ಟಿ ರಿಲೀಸ್ ಮಾಡಿದ್ದು, ಅದರಲ್ಲಿ ಶಾರುಖ್ ಖಾನ್ ಹೆಸರು ಇದೆ. ಭಾರತದ ನಟರಲ್ಲಿ ಈ ಸ್ಥಾನವನ್ನು ಪಡೆದ ಏಕೈಕ ನಟ ಶಾರುಖ್ ಖಾನ್ ಎನ್ನುವುದು ವಿಶೇಷ. ಈ ಮಾಹಿತಿಯನ್ನು ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಏನೇ ವಿವಾದ ಮಾಡಿದರೂ, ಅವರ ಜನಪ್ರಿಯತೆ ಯಾವತ್ತೂ ಕಡಿಮೆ ಆಗಲ್ಲ ಎಂದು ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಇದನ್ನೂ ಓದಿ: ಆ ಒಂದು ಮಾತಿನಿಂದ ಮುರಿದು ಬಿತ್ತು ರೂಪೇಶ್ ಶೆಟ್ಟಿ- ರಾಜಣ್ಣ ಫ್ರೆಂಡ್ಶಿಪ್
ಶಾರುಖ್ ಖಾನ್ ನಟನೆಯ ಪಠಾಣ್ ಸಿನಿಮಾ ಜನವರಿ 25ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಅದಕ್ಕೂ ಮೊದಲ ಮೊನ್ನೆಯಷ್ಟೇ ಹಾಡೊಂದನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ಅವರು ಕೇಸರಿ ಬಿಕಿನಿ ಹಾಕಿದ್ದರು ಎನ್ನುವ ಕಾರಣಕ್ಕಾಗಿ ಭಾರೀ ವಿವಾದವಾಗಿತ್ತು. ಇದು ಹಿಂದೂಗಳಿಗೆ ಮಾಡುತ್ತಿರುವ ಅಪಮಾನ ಎಂದು ಬಿಂಬಿಸಲಾಗಿತ್ತು. ಶಾರುಖ್ ಖಾನ್ ಕೂಡಲೇ ಅದನ್ನು ಸರಿಪಡಿಸಬೇಕು ಎಂದು ಆಗ್ರಹಿಸಲಾಗಿತ್ತು.
ವಿವಾದದ ಕುರಿತು ಶಾರುಖ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ವಿವಾದ ಮಾಡುವ ಮೂಲಕ ಸಿನಿಮಾಗೆ ಮತ್ತಷ್ಟು ಪ್ರಚಾರ ಕೊಟ್ಟಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಹೇಳಿದ್ದರು. ನೀವು ಏನೇ ಬಾಯ್ಕಾಟ್ ಮಾಡಿರಿ, ಸಿನಿಮಾ ಗೆಲ್ಲುತ್ತದೆ ಎನ್ನುವ ವಿಶ್ವಾವನ್ನೂ ಅವರು ವ್ಯಕ್ತ ಪಡಿಸಿದ್ದರು. ಶಾರುಖ್ ಏನೇ ಹೇಳಿದರೂ, ವಿವಾದದ ಉರಿ ಇನ್ನೂ ತಣ್ಣಗಾಗಲಿಲ್ಲ. ಸಿನಿಮಾ ಪ್ರೇಮಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಈ ವಿವಾದಲ್ಲಿ ಪ್ರವೇಶ ಮಾಡಿದ್ದಾರೆ. ಹಾಗಾಗಿ ವಿವಾದ ದೊಡ್ಡದಾಗಿದೆ.