ಮುಂಬೈ: ಬಾಲಿವುಡ್ ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ರಣ್ವೀರ್ ಸಿಂಗ್ ಮದುವೆಯಾಗುತ್ತಿದ್ದಾರೆ ಎಂಬ ಗಾಳಿಸುದ್ದಿ ಈಗ ಅಧಿಕೃತವಾಗಿದೆ. ಇನ್ನೂ 3-4 ತಿಂಗಳಲ್ಲಿ ದೀಪಿಕಾ ಹಾಗೂ ರಣ್ವೀರ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.
ವರದಿಗಳ ಪ್ರಕಾರ ದೀಪಿಕಾ ಹಾಗೂ ರಣ್ವೀರ್ 3-4 ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕಾಗಿ ದೀಪಿಕಾ ಅವರ ಪೋಷಕರು ಮುಂಬೈನಲ್ಲಿರುವ ರಣ್ವೀರ್ ಮನೆಗೆ ಭೇಟಿ ನೀಡಿ ಮದುವೆ ದಿನಾಂಕವನ್ನು ನಿಗದಿಪಡಿಸಿದ್ದಾರೆ. ಈ ಇಬ್ಬರು ವರ್ಲಿಯ ಹೋಟೆಲ್ನಲ್ಲಿ ಕಾಣಿಸಿಕೊಂಡಿದ್ದರು.
ವಿರಾಟ್ ಹಾಗೂ ಅನುಷ್ಕಾ ಮದುವೆಯಂತೆ ದೀಪಿಕಾ ಹಾಗೂ ರಣ್ವೀರ್ ಕೂಡ ಡೆಸ್ಟೀನೇಶನ್ ವೆಡ್ಡಿಂಗ್ ಮಾಡಿಕೊಳ್ಳಲಿದ್ದಾರೆ. ಮುಂಬೈ ಹಾಗೂ ದೆಹಲಿಯಲ್ಲಿ ರಣ್ವೀರ್ ಸಂಬಂಧಿಕರು ಇರುವುದರಿಂದ ಈ ಮದುವೆ ಮುಂಬೈಯಲ್ಲೇ ನಡೆಯಬೇಕು ಎಂದು ರಣ್ವೀರ್ ಕುಟುಂಬದವರು ತಿಳಿಸಿದ್ದಾರೆ.
ದಕ್ಷಿಣ ಭಾರತದ ಸಂಪ್ರದಾಯದಂತೆ ರಣ್ವೀರ್ ಹಾಗೂ ದೀಪಿಕಾ ಮದುವೆ ನಡೆಯಲಿದ್ದು, ಈಗಾಗಲೇ ದೀಪಿಕಾ ರಣ್ವೀರ್ ಕುಟುಂಬದವರ ಜೊತೆ ಮದುವೆಯ ಶಾಪಿಂಗ್ ಮಾಡುತ್ತಿದ್ದಾರೆ. ದೀಪಿಕಾ ಈಗ ಲಂಡನಲ್ಲಿದ್ದು, ರಣ್ವೀರ್ ಕುಟುಂಬದ ಜೊತೆ ಚಿನ್ನಾಭರಣ ಖರೀದಿ ಮಾಡುತ್ತಿದ್ದಾರೆ. ಗಲ್ಲಿ ಬಾಯ್ ಚಿತ್ರದ ಚಿತ್ರೀಕರಣದಿಂದಾಗಿ ರಣ್ವೀರ್ ತಮ್ಮ ಕುಟುಂಬದ ಜೊತೆ ಶಾಪಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ.
ದೀಪಿಕಾ ಈಗ ವಿಶಾಲ್ ಭಾರದ್ವಾಜ್ ನಿರ್ದೇಶಿಸುತ್ತಿರುವ ಚಿತ್ರದಲ್ಲಿ ಇರ್ಫಾನ್ ಖಾನ್ ಜೊತೆ ನಟಿಸುತ್ತಿದ್ದು, ರಣ್ವೀರ್ ಝೋಯಾ ಅಖ್ತರ್ ನಿರ್ದೇಶಿಸುತ್ತಿರುವ ಗಲ್ಲಿ ಬಾಯ್ ಚಿತ್ರದಲ್ಲಿ ಅಲಿಯಾ ಭಟ್ ಜೊತೆ ನಟಿಸುತ್ತಿದ್ದಾರೆ.