ದೀಪಿಕಾ ದಾಸ್ ಸಿನಿಮಾ ರಂಗದ ಮೂಲಕವೇ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟವರು. ದೂಧ್ ಸಾಗರ್, ಈ ಮನಸೇ, ಡ್ರೀಮ್ ಗರ್ಲ್ ಹೀಗೆ ಕೆಲವು ಸಿನಿಮಾಗಳನ್ನು ಮಾಡಿದರು. ಎಷ್ಟೇ ಸಿನಿಮಾಗಳನ್ನು ಮಾಡಿದರೂ ಸಿನಿಮಾ ರಂಗ ಮಾತ್ರ ಕೈ ಹಿಡಿಯಲಿಲ್ಲ. ಕನ್ನಡದಲ್ಲಿ ಮಾತ್ರವಲ್ಲ ತೆಲುಗಿಗೂ ಹೋಗಿ ಬಂದರು. ಆದರೆ, ಚಿತ್ರಗಳು ಮಾತ್ರ ಗೆಲ್ಲಲಿಲ್ಲ. ಹಾಗಂತ ದೀಪಿಕಾ ಪ್ರಯತ್ನ ಮಾತ್ರ ಬಿಡಲಿಲ್ಲ.
ಸಿನಿಮಾ ರಂಗ ಕೈ ಬಿಟ್ಟರೆ ಏನಂತೆ? ಕಿರುತೆರೆ ಅವರಿಗೆ ರತ್ನಗಂಬಳಿ ಹಾಕಿ ಸ್ವಾಗತಿಸಿತು. ನಾಗಿಣಿ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾದರು ದೀಪಿಕಾ. ಈಗಲೂ ಅವರನ್ನು ನಾಗಿಣಿ ಹೆಸರಿನಿಂದಲೇ ಕರೆಯುತ್ತಾರೆ. ಅಷ್ಟರ ಮಟ್ಟಿಗೆ ಆ ಧಾರಾವಾಹಿ ನಟಿಗೆ ಹೆಸರು ತಂದುಕೊಟ್ಟಿತು. ಕಿರುತೆರೆಯಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹುಟ್ಟಿಕೊಂಡರು. ಪರಿಣಾಮ ಬಿಗ್ ಬಾಸ್ ಮನೆಯಲ್ಲೂ ಕಾಣಿಸಿಕೊಂಡರು ದೀಪಿಕಾ. ಇದನ್ನೂ ಓದಿ:ಅಪ್ಪು ಹೆಸರಿನಲ್ಲಿ ಮಕ್ಕಳ ಚಿತ್ರೋತ್ಸವ: ಅದ್ಧೂರಿ ಚಾಲನೆ
ಬಿಗ್ ಬಾಸ್ ಮನೆಯಲ್ಲಿ ಎರಡೆರಡು ಬಾರಿ ಪ್ರವೇಶ ಮಾಡಿದ ಕೆಲವೇ ಕೆಲವು ನಟಿಯರಲ್ಲಿ ದೀಪಿಕಾ ದಾಸ್ ಕೂಡ ಒಬ್ಬರು. ಎರಡು ಬಾರಿ ಹೋದಾಗಲೂ ದೀಪಿಕಾ ಫಿನಾಲೆಗೆ ಬರುತ್ತಾರೆ, ಅವರೇ ಟ್ರೋಫಿ ವಿನ್ ಆಗುತ್ತಾರೆ ಎಂದೆಲ್ಲ ಸುದ್ದಿ ಆಯಿತು. ಅದು ನಿಜ ಎನ್ನುವಂತೆ ಅವರನ್ನು ಸಪೋರ್ಟ್ ಮಾಡಿದರು ವೀಕ್ಷಕರು. ಆದರೆ, ಫಿನಾಲೆಗೆ ಬಂದರೂ ಬಿಗ್ ಬಾಸ್ ಪಟ್ಟ ಮಾತ್ರ ದಕ್ಕಲಿಲ್ಲ.
ಇಂತಿಪ್ಪ ದೀಪಿಕಾ ದಾಸ್ ಮತ್ತೆ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಬಾರಿ ಅವರು ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಅವರು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದು, ಅಂದು ದೀಪಿಕಾ ನಟಿಸಬೇಕಿರುವ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಈ ಮೂಲಕ ಮತ್ತೊಮ್ಮೆ ಅವರು ಸಿನಿಮಾ ರಂಗದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.