ಬಲಿಪಾಡ್ಯಮಿ; ಬಲಿ ಮೇಲೆ ವಾಮನ ಅವತಾರದಲ್ಲಿ ವಿಷ್ಣುವಿನ ವಿಜಯ

Public TV
3 Min Read
Balipadyami 1

ಲೆಲ್ಲೂ ದೀಪಾವಳಿಯ ಸಂಭ್ರಮ ಮನೆಮಾಡಿದೆ. 5 ದಿನಗಳ ದೀಪಾವಳಿ ಹಬ್ಬದಲ್ಲಿ ಬಲಿಪಾಡ್ಯಮಿ ಕೂಡ ಒಂದು. ಈ ಹಬ್ಬವನ್ನು ದೀಪಾವಳಿಯ ನಾಲ್ಕನೇ ದಿನ ಆಚರಿಸಲಾಗುತ್ತದೆ. ಇದು ಭೂಮಿಯ ಮೇಲೆ ರಾಕ್ಷಸ-ರಾಜ ಬಲಿಯ ಆಗಮನದ ಸ್ಮರಣೆಯಾಗಿದೆ. ಇದನ್ನು ಕರ್ನಾಟಕದಲ್ಲಿ ಬಲಿ ಪಾಡ್ಯಮಿ ಎಂದರೆ ಮಹಾರಾಷ್ಟ್ರದಲ್ಲಿ ಬಲಿ ಪಾಡ್ವಾ ಎಂದು ಕರೆಯುತ್ತಾರೆ. ಬಲಿಪಾಡ್ಯಮಿಯನ್ನು ದೈತ್ಯ-ರಾಜ ಬಲಿಯ ಮೇಲೆ ವಾಮನ ಅವತಾರದಲ್ಲಿ ವಿಷ್ಣುವಿನ ವಿಜಯವನ್ನು ಗುರುತಿಸಲು ಆಚರಿಸಲಾಗುತ್ತದೆ. ಹಾಗೆಯೇ ಜಗತ್ತಿಗೆ ರಾಕ್ಷಸ ರಾಜ ಬಲಿಯು ಹಿಂದಿರುಗುವ ಕ್ಷಣವನ್ನು ನೆನಪಿಸುತ್ತದೆ. ಈ ದಿನದಂದು ಶ್ರೀಕೃಷ್ಣನು ಗೋಕುಲದ ನಿವಾಸಿಗಳನ್ನು ಇಂದ್ರನ ಕೋಪದಿಂದ ಮುಕ್ತಗೊಳಿಸಿದನು ಎನ್ನುವ ಕಥೆಯಿದೆ. ಈ ಆಚರಣೆಯ ಹಿನ್ನೆಲೆ ಏನು? ಪೌರಾಣಿಕ ಕಥೆಯೇನು ಎಂಬುದನ್ನು ನೋಡೋಣ.

ಪುರಾಣದ ಕಥೆ ಏನು?
ಬಲಿಪಾಡ್ಯಮಿ ದಿನ ರಾಜ ಬಲೀಂದ್ರನನ್ನು ಪೂಜಿಸುವ ಪದ್ಧತಿಯಿದೆ. ರಾಜ ಬಲೀಂದ್ರ ಸದ್ಗುಣಶೀಲ ರಾಜನಾಗಿದ್ದು, ತನ್ನ ಪ್ರಜೆಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು. ಆದರೆ, ಆತನ ಸುತ್ತಮುತ್ತಲಿನ ಜನರು ರಾಕ್ಷಸ ಪ್ರವೃತ್ತಿಯನ್ನು ಹೊಂದಿದವರಾಗಿದ್ದರು. ಅವರಿಂದ ಜನರು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದಕ್ಕೆ ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ರಾಜ ಬಲಿ ಕಾರಣನಾಗಿದ್ದ. ಈ ದುಷ್ಟರ ಸಂಹಾರಕ್ಕಾಗಿ ವಿಷ್ಣು ವಾಮನ ಅವತಾರವನ್ನು ತಾಳಿ ಭೂಮಿಗೆ ಬರುತ್ತಾನೆ. ಹಾಗೂ ರಾಜ ಬಲಿಯ ಬಳಿಗೆ ಬಂದು ದಾನವನ್ನು ಕೇಳುತ್ತಾನೆ. ಬಲೀಂದ್ರ ರಾಜ ಕೊಡುಗೈ ದಾನಿ. ವಾಮನನಿಗೆ ನಿನಗೆ ಏನು ಬೇಕೆಂದು ಕೇಳು ಎನ್ನುತ್ತಾನೆ. ಆಗ ವಾಮನ ನನಗೆ ಮೂರು ಹೆಜ್ಜೆಗಳನ್ನಿಡುವಷ್ಟು ಜಾಗ ಕೊಡು ಎಂದು ಕೇಳುತ್ತಾನೆ.

Balipadyami

ಕೇವಲ ಮೂರು ಹೆಜ್ಜೆಗಳನ್ನಿಡುವಷ್ಟು ಜಾಗವೇ ಎಂದು ಹಿಂದೆಮುಂದೆ ಯೋಚಿಸದೇ ಬಲೀಂದ್ರ ಒಪ್ಪುತ್ತಾನೆ. ವಿಷ್ಣು ತನ್ನ ವಾಮನ ರೂಪದಲ್ಲಿ ಒಂದು ಹೆಜ್ಜೆಯನ್ನು ಭೂಲೋಕದಲ್ಲಿ, ಇನ್ನೊಂದು ಹೆಜ್ಜೆಯನ್ನು ಸ್ವರ್ಗ ಲೋಕದಲ್ಲಿ ಮೂರನೇ ಹೆಜ್ಜೆ ಎಲ್ಲಿಡುವುದು ಎಂದು ಕೇಳಿದಾಗ ತನ್ನ ತಲೆ ಮೇಲೆ ಇಡುವಂತೆ ಬಲೀಂದ್ರ ಹೇಳುತ್ತಾನೆ. ವಿಷ್ಣುದೇವ ಮೂರನೇ ಹೆಜ್ಜೆಯನ್ನು ಬಲೀಂದ್ರನ ತಲೆ ಮೇಲೆ ಇಟ್ಟಾಗ ಪಾತಾಳ ಲೋಕಕ್ಕೆ ಇಳಿದು ಹೋಗುತ್ತಾನೆ. ಅವನ ಜೊತೆ ಉಳಿದ ರಾಕ್ಷಸರೂ ಪಾತಾಳಕ್ಕೆ ಇಳಿಯುತ್ತಾರೆ. ಹೀಗೆ ಪಾತಾಳ ಲೋಕಕ್ಕೆ ಹೋದ ಬಲೀಂದ್ರನನ್ನು ವರ್ಷಕ್ಕೆ ಒಂದು ದಿನ ನೆನೆದು ಭೂಮಿಗೆ ಕರೆಯುವ ದಿನವೇ ಬಲಿಪಾಡ್ಯಮಿ.

Lord Vishnu

ಜನಪದ ಕತೆ:
ಇನ್ನೊಂದು ವಿಶಿಷ್ಠ ಕತೆಯಿದೆ. ವಾಮನ ತಲೆ ಮೇಲೆ ಹೆಜ್ಜೆ ಇಟ್ಟು ಬಲಿ ಪಾತಾಳದೊಳಕ್ಕೆ ಇಳಿಯುತ್ತಿರುವಾಗ ತನಗೆ ಮೋಕ್ಷ ಯಾವಾಗ ಎಂದು ಕೇಳುತ್ತಾನೆ, ಆಗ ವಿಷ್ಣು ಭೂಮಿಯ ಮೇಲೆ ಜನರ ಸುಳಿವಿಲ್ಲದಿದ್ದಾಗ ನಿನಗೆ ಮೋಕ್ಷ ದೊರೆಯುತ್ತದೆ ಎಂದೂ ಹೇಳಿದನೆಂದು ಜನಪದ ನಂಬಿಕೆ.

ಬಲಿ ಪಾಡ್ಯಮಿ ಪೂಜೆ ವಿಧಾನ:
ಬಲಿ ಪಾಡ್ಯಮಿಯಂದು ಗೋಮಯದಿಂದ ತುಳಸಿಕಟ್ಟೆಯ ಸಮೀಪ ಏಳುಸುತ್ತಿನ ಕೋಟೆಯನ್ನು ಕಟ್ಟಲಾಗುತ್ತದೆ. ಈ ಕೋಟೆಗೆ ಗಣಪತಿಯನ್ನು ಕಾವಲಿಗೆ ನಿಲ್ಲಿಸಲಾಗುತ್ತದೆ. ಮನೆ ಬಾಗಿಲಿನ ಹೊಸ್ತಿಲಿಗೆ ಯಾವುದೇ ದುಷ್ಟಶಕ್ತಿಗಳು ಒಳಪ್ರವೇಶಿಸದಂತೆ ಸಗಣಿಯಿಂದ ಮಾಡಿದ ಸಣ್ಣ ಗೊಂಬೆಗಳನ್ನು ಇಡಲಾಗುತ್ತದೆ. ಸಂಜೆ ಗೋಧೂಳಿ ಲಗ್ನದ ಸಮಯದಲ್ಲಿ ಮನೆಯ ಸದಸ್ಯರೆಲ್ಲಾ ಬಲೀಂದ್ರನಿಗೆ ಪೂಜೆ ಮಾಡುತ್ತಾರೆ. ತುಳುನಾಡು ಮತ್ತು ಕರಾವಳಿಯ ಸುತ್ತಮುತ್ತಲಿನ ಪ್ರದೇಶದಲ್ಲಿ ಬಲೀಂದ್ರನನ್ನು ರಚಿಸಿ, ತುಳಸಿ ಕಟ್ಟೆಯ ಸಮೀಪ ನಿಲ್ಲಿಸಿ ಬಲೀಂದ್ರ, ಬಲೀಂದ್ರ, ಕೂ… ಕೂ.. ಬಲೀಂದ್ರ ಎಂದು ಮೂರು ಬಾರಿ ಕರೆದು ಪೂಜೆ ಮಾಡಿ ಪಾತಾಳ ಲೋಕಕ್ಕೆ ಕಳುಹಿಸಿಕೊಡುವ ಸಂಪ್ರದಾಯವನ್ನು ಪಾಲಿಸುತ್ತಾರೆ.

Baliyendra Pooje

ಮಲೆನಾಡಿನಲ್ಲಿ ಬಲಿಪಾಡ್ಯಮಿಯಂದು ಬೆಳಗ್ಗೆಯೇ ದನದ ಕೊಟ್ಟಿಗೆಯನ್ನು ತೊಳೆದು, ಸೆಗಣಿಯಿಂದ ಗಣಪತಿಯನ್ನು ಮಾಡಿ, ಹೂವಿನಿಂದ ಸಿಂಗರಿಸುತ್ತಾರೆ. ಕಂಚಿಕಡ್ಡಿ, ಬ್ರಹ್ಮದಂಡೆ ಗಿಡಗಳನ್ನು ತಂದು ಜಡೆಯಂತೆ ಹಣೆದು ಕೊಟ್ಟಿಗೆಯಲ್ಲಿ ಸೆಗಣಿ ಬೆನಕನ ಪಕ್ಕದಲ್ಲಿ ಇಡುತ್ತಾರೆ. ಎಲ್ಲಾ ಹಸುಗಳ ಮೈತೊಳೆದು ಹೂಹಾರ ಹಾಕಿ ಪೂಜಿಸುತ್ತಾರೆ. ಹಣ್ಣು ತುಂಬಿದ ಎಡೆಯನ್ನು ನೈವೇದ್ಯ ಮಾಡುತ್ತಾರೆ.

Share This Article