ದೀಪಾವಳಿ ಹಿಂದೂಗಳೆಲ್ಲ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದ್ದು, ಉಳಿದ ಹಬ್ಬಗಳಿಗಿಂತ ವಿಶಿಷ್ಟವಾಗಿ ಹಬ್ಬವನ್ನು ಆಚರಿಸಲಾಗುತ್ತದೆ. ಎಣ್ಣೆನೀರು, ಹೊಸ ಬಟ್ಟೆ, ದೇವರ ಪೂಜೆ, ದೀಪಾಲಂಕಾರ ಹೊಸ ಅಳಿಯನನ್ನು ಹಬ್ಬಕ್ಕೆ ಬರಮಾಡಿಕೊಂಡು ಸತ್ಕರಿಸುವುದು ದೀಪಾವಳಿಯ ವಿಶೇಷತೆ.
ಮುಂಗಾರು ಬೆಳೆ ಕೊಯ್ಲಿಗೆ ಬರುವ ಕಾಲದಲ್ಲಿ ಈ ಹಬ್ಬ ಬರುತ್ತದೆ. ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೇ ದಿನ ಹಬ್ಬ ನಡೆಯುತ್ತದೆ. ಉತ್ತರ ಭಾರತದಲ್ಲಿ ಇನ್ನೂ ಎರಡು ದಿನ ಹೆಚ್ಚಾಗಿಯೇ ಒಟ್ಟು 5 ದಿನಗಳ ಕಾಲ ಹಬ್ಬ ಆಚರಿಸುತ್ತಾರೆ. ಉತ್ತರ ಭಾರತದಲ್ಲಿ ಇದನ್ನು ದಿವಾಲಿ ಎಂದು ಕರೆಯುತ್ತಾರೆ. ಇದನ್ನೂ ಓದಿ: ದೀಪಾವಳಿಯ ದೀಪಾರಾಧನೆ-ಮನೆಯ ಮುಂಭಾಗ ಇರಿಸುವ ದೀಪಗಳೆಷ್ಟಿರಬೇಕು?
ದೀಪಾವಳಿಯು ದೀಪಗಳ, ಅರ್ಥಾತ್ ಬೆಳಕಿನ ಹಬ್ಬ. ಕತ್ತಲೆಯನ್ನು ಹೋಗಲಾಡಿಸುವ ಹಬ್ಬ. ಮನೆ ಮನೆಯ, ಮನ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟುಮಾಡುವ ಹಬ್ಬ. ದೀಪಾವಳಿ ನರಕ ಚತುರ್ದಶಿಯಿಂದ ಪ್ರಾರಂಭವಾಗುತ್ತದೆ. ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡಲಾಗುತ್ತದೆ. ಎಣ್ಣೆ ಸ್ನಾನ ಮಾಡುವ ಮಂದಿಗೆ ಯಾಕೆ ಈ ದಿನ ಎಣ್ಣೆ ಸ್ನಾನ ಮಾಡಲಾಗುತ್ತದೆ? ಬೇರೆ ಹಬ್ಬದ ದಿನದಂದು ಯಾಕೆ ಎಣ್ಣೆ ಸ್ನಾನ ಇಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಈ ಪ್ರಶ್ನೆಗೆ ಉತ್ತರ ಶ್ರೀಮದ್ಭಾಗವತ ಪುರಾಣ ಕಥೆಯಲ್ಲಿ ಸಿಗುತ್ತದೆ. ಶ್ರೀ ಕೃಷ್ಣನು ನರಕಾಸುರನನ್ನು ಕೊಂದ ನೆನಪನ್ನು ಈ ಹಬ್ಬ ತರುತ್ತದೆ. ಇದನ್ನೂ ಓದಿ: ದೀಪಾವಳಿಗೆ ರುಚಿ ರುಚಿಯಾದ ಕುಂಬಳಕಾಯಿ ಇಡ್ಲಿ ಮಾಡೋದು ಹೇಗೆ?
ನರಕಾಸುರನ ಹುಟ್ಟು ಸಾಮಾನ್ಯದ್ದಲ್ಲ. ಶ್ರೀಮನ್ನಾರಾಯಣನು ವರಹಾವತಾರವನ್ನೆತ್ತಿ ಭೂಮಿಯನ್ನು ಉದ್ಧರಿಸಿದ ಬಳಿಕ ಆತನ ಶರೀರದಿಂದ ಬಿದ್ದ ಒಂದು ತೊಟ್ಟು ಬೆವರು ಅಸುರಾಕೃತಿಯನ್ನು ಪಡೆಯಿತು. ಈ ಅಕೃತಿಯೇ ಮುಂದೆ ನರಕಾಸುರನಾಗಿ ಬದಲಾಯಿತು.
ಪ್ರಾಗ್ಜ್ಯೋತಿಷಪುರದಲ್ಲಿ ನರಕಾಸುರ(ಭೌಮಾಸುರ) ರಾಜ್ಯವಾಳುತ್ತಿದ್ದ. ಈತ ದುರುಳತೆಗೂ ಹೆಸರಾದವನು. ಈತನಿಗೆ ಒಮ್ಮೆ ತನ್ನ ಆಯುಸ್ಸು ಹೆಚ್ಚಿಸಿಕೊಳ್ಳಬೇಕು ಎಂಬ ಆಸೆಯಾಯ್ತು. ಬ್ರಹ್ಮನ ಕುರಿತು ತಪಸ್ಸು ಮಾಡಿದ. ಬ್ರಹ್ಮ ಪ್ರತ್ಯಕ್ಷನಾದಾಗ, “ನನಗೆ ಚಿರಂಜೀವತ್ವದ ವರ ಬೇಡ. ನಾನು ಭೂಮಿ ತಾಯಿಯಿಂದ ಜನಿಸಿದವನು. ನನಗೆ ಆ ತಾಯಿಯಿಂದಲೇ ಸಾವು ಬರುವ ಹಾಗೆ ಮಾಡು” ಎಂದ. ಪ್ರತ್ಯಕ್ಷನಾದ ಬ್ರಹ್ಮ ಈತನ ಬೇಡಿಕೆಯನ್ನು ಈಡೇರಿಸಿ ತಥಾಸ್ತು ಎಂದ. ಇದನ್ನೂ ಓದಿ: ದೀಪಾವಳಿ ಸಂಭ್ರಮಕ್ಕೆ ಜೊತೆಯಾಗಲಿದೆ ಪರಿಸರ ಸ್ನೇಹಿ ಹಸಿರು ಪಟಾಕಿ
ಭೂಮಿಯ ಅರಸರನ್ನು ಸೋಲಿಸಿ ಅವರ ಸಂಪತ್ತನ್ನು ದೋಚಿದ ನರಕಾಸುರ ದೇವಲೋಕದ ಸ್ತ್ರೀಯರನ್ನೆಲ್ಲ ತನ್ನ ಜೊತೆಗೆ ಬಲವಂತವಾಗಿ ಸೆಳೆದೊಯ್ದ. ಈ ವೇಳೆ ತಾಯಿ ಅದಿತೀ ದೇವಿಯ ಕರ್ಣಾಭರಣಗಳು ಆತನನ್ನು ಆಕರ್ಷಿಸಿದವು. ಅದನ್ನು ಕತ್ತರಿಸಿ ತನ್ನ ವಶಕ್ಕೆ ತೆಗೆದುಕೊಂಡು ಹೋದ. ಇತ್ತ ಖಾಲಿ ಕಿವಿಯಲ್ಲಿ ಅಳುತ್ತಾ ಅದಿತಿಯು ಸತ್ಯಭಾಮೆ ಇರುವಲ್ಲಿಗೆ ಬಂದು ತನ್ನ ತಮ್ಮವರ ವ್ಯಥೆಯನ್ನು ಹೇಳುತ್ತಾಳೆ.
ಹದಿನಾರು ಸಾವಿರಕ್ಕೂ ಹೆಚ್ಚು ರಾಜ ಕನ್ಯೆಯರನ್ನು ಅಪಹರಿಸಿ ತಂದು, ಅವರನ್ನು ಸೆರೆಮನೆಯಲ್ಲಿ ಇಟ್ಟು, ಅವರನ್ನು ಮದುವೆಯಾಗಲು ಮುಂದಾದನು. ಇದರಿಂದ ಎಲ್ಲೆಡೆ ಹಾಹಾಕಾರವಾಗತೊಡಗಿತು. ನರಕಾಸುರ ದುಷ್ಟ ಕೃತ್ಯವನ್ನು ಸತ್ಯಭಾಮೆ ಕೃಷ್ಣನಿಗೆ ತಿಳಿಸುತ್ತಾಳೆ. ವಿಷಯ ತಿಳಿದು ಕೃಷ್ಣ ನರಕಾಸುರನ ವಿರುದ್ಧ ಯುದ್ಧ ಸಾರುತ್ತಾನೆ. ಇದನ್ನೂ ಓದಿ: ಉತ್ತರ ಭಾರತದಲ್ಲಿ 5 ದಿನ ದೀಪಾವಳಿ – ಯಾವ ದಿನ ಯಾವ ಹಬ್ಬ?
ಯುದ್ಧಕ್ಕೆ ಹೋಗುವ ಮೊದಲು ಸತ್ಯಭಾಮೆ ಬಳಿ ಕೃಷ್ಣ, “ಈ ಹಿಂದೆ ನಾನು ಯುದ್ಧಕ್ಕೆ ಹೋಗುತ್ತಿದ್ದಾಗ ನೀನು ಸಹ ನನ್ನ ಜೊತೆ ಬರುತ್ತೇನೆ ಎಂದು ಹಂಬಲಿಸಿದ್ದೆ. ಇಲ್ಲಿಯವರೆಗೆ ಆ ಅವಕಾಶ ಸಿಕ್ಕಿರಲಿಲ್ಲ. ಈಗ ಆ ಸುಯೋಗ ಬಂದಿದೆ. ನಾವಿಬ್ಬರೂ ಜೊತೆಯಾಗಿ ಹೋಗೋಣ” ಎಂದು ಹೇಳುತ್ತಾನೆ. ಕೃಷ್ಣನ ಮಾತಿಗೆ ಒಪ್ಪಿ ಸತ್ಯಭಾಮೆಯೂ ಯುದ್ಧಕ್ಕೆ ಧುಮುಕಿದಳು. ಭಯಕಂಕರ ಕಾದಾಟದಲ್ಲಿ ನರಕಾಸುರ ಬಿಟ್ಟ ಬಾಣಕ್ಕೆ ಕೃಷ್ಣ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಕೃಷ್ಣ ಕೆಳಗಡೆ ಬಿದ್ದಿರುವುದನ್ನು ನೋಡಿ ದಿಕ್ಕು ತೋಚದೆ ಸತ್ಯಭಾಮೆಯೇ ಹೋರಾಟ ಮಾಡಿ ಬಾಣ ಪ್ರಯೋಗಿಸಿ ನರಕಾಸುರನನ್ನು ಕೊಲ್ಲುತ್ತಾಳೆ.
ತನ್ನ ಕೊನೆಯುಸಿರು ಎಳೆಯುವಾಗ ನರಕಾಸುರನು ಶ್ರೀ ಕೃಷ್ಣನಲ್ಲಿ ಒಂದು ವರವನ್ನು ಕೇಳುತ್ತಾನೆ. ‘ಈ ದಿನ ಯಾರು ಅಭ್ಯಂಗ ಸ್ನಾನವನ್ನು ಮಾಡುತ್ತಾರೋ ಅವರಿಗೆ ನರಕ ಪ್ರಾಪ್ತಿಯಾಗಬಾರದು’ ಎಂದು ಕೇಳಿಕೊಳ್ಳುತ್ತಾನೆ.
ಚತುರ್ದಶಿಯಂದು ನರಕಾಸುರನನ್ನು ವಧಿಸಿ, ಆವನ ರಕ್ತವನ್ನು ತನ್ನ ಹಣೆಗೆ ಹಚ್ಚಿಕೊಂಡು ಮನೆಗೆ ಮರಳಿದ ಶ್ರೀಕೃಷ್ಣನಿಗೆ ಅಭ್ಯಂಗ ಸ್ನಾನ ಮಾಡಿಸಲಾಯಿತು. ಸ್ತ್ರೀಯರೆಲ್ಲರೂ ದೀಪಗಳ ಆರತಿಯನ್ನು ಬೆಳಗಿ ಆನಂದವನ್ನು ವ್ಯಕ್ತಪಡಿಸಿದರು. ಆದುದರಿಂದ ಆಶ್ವಯುಜ ಕೃಷ್ಣ ಚತುರ್ದಶಿಯು ನರಕ ಚತುರ್ದಶಿ ಎಂದು ಆಚರಿಸಲ್ಪಡುತ್ತದೆ, ಜನರು ಈ ದಿನದಂದು ಸೂರ್ಯೋದಯವಾಗುವ ಮುಂಚೆ ಅಭ್ಯಂಗ ಸ್ನಾನವನ್ನು ಮಾಡುತ್ತಾರೆ.
ಎಣ್ಣೆ ಸ್ನಾನ ಮಾಡುವಾಗ ಸಪ್ತ ಚಿರಂಜೀವಿಗಳ (ಅಶ್ವತ್ಥಾಮ, ಬಲೀಂದ್ರ, ವೇದವ್ಯಾಸ, ಹನುಮಂತ, ವಿಭೀಷಣ, ಕೃಪಾಚಾರ್ಯ ಮತ್ತು ಪರಶುರಾಮ) ಹೆಸರು ಹೇಳುತ್ತಾರೆ. ಕಾರಣ ಮನೆಯಲ್ಲಿರುವ ಮಕ್ಕಳು ಮತ್ತು ಕುಟುಂಬದ ಸದಸ್ಯರ ಆರೋಗ್ಯ ಆಯುಷ್ಯ ಚೆನ್ನಾಗಿರಲಿ ಎಂದು ಸ್ನಾನದ ಸಮಯದಲ್ಲಿ ಚಿರಂಜೀವಿಗಳ ಹೆಸರು ಇರುವ ಶ್ಲೋಕವಾದ ಅಶ್ವತ್ಥಾಮೋ ಬಲಿವ್ರ್ಯಾಸೋ ಹನೂಮಾಂಶ್ಚ ವಿಭೀಷಣಃ |.ಕೃಪಃ ಪರಶುರಾಮಶ್ಚ ಸಪ್ತೈತೇ ಚಿರಜೀವಿನಃ || ಹೇಳಿ ಪ್ರಾರ್ಥಿಸಲಾಗುತ್ತದೆ.
ಸ್ನಾನ ಮಾಡುವ ಮುನ್ನ ಎಣ್ಣೆಯನ್ನು ಏಳು ಚುಕ್ಕಿಗಳಾಗಿ ನಿಮ್ಮ ಉಂಗುರ ಬೆರಳಿನ ಮೂಲಕ ಇರಿಸಿ. ನಂತರ ಶ್ಲೋಕ ಹೇಳುತ್ತಾ, ಏಳು ಚುಕ್ಕಿಗಳನ್ನು ಉಂಗುರು ಬೆರಳಿನ ಮೂಲಕ ಅಳಿಸಿ, ಎಣ್ಣೆಯನ್ನು ನಿಮ್ಮ ತಲೆಯಲ್ಲಿರುವ ಸುಳಿಗೆ ಹಚ್ಚಿಕೊಂಡು ಸ್ನಾನ ಮಾಡಬೇಕು. ನಂತರ ಮಡಿಯಿಂದ ನಿಮ್ಮ ನಿಮ್ಮ ಕುಲದೇವತೆಗಳನ್ನು ಪ್ರಾರ್ಥನೆ ಮಾಡಬೇಕು.
ಕಾರ್ತಿಕ ಮಾಸದಲ್ಲಿ ನಿರಂತರವಾಗಿ ಒಂದು ತಿಂಗಳು ದೀಪಾರಾಧನೆ ಮಾಡಬೇಕು. ಒಂದು ತಿಂಗಳ ದೀಪಾರಾಧನೆಯಿಂದ ನಿಮ್ಮ ಅಭಿವೃದ್ಧಿ ಜ್ಯೋತಿಯಂತೆ ಬೆಳಗುತ್ತದೆ.
https://www.youtube.com/watch?v=bdq-b9Difjs