ನರಕ ಚತುರ್ದಶಿ ದೀಪಾವಳಿಯ (Deepavali Festival) 2ನೇ ಮಹತ್ವದ ದಿನವಾಗಿದೆ. ಇದನ್ನು ಪ್ರತಿವರ್ಷ ಕಾರ್ತಿಕ ಮಾಸದ 14ನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಶ್ರೀಕೃಷ್ಣ ಮತ್ತು ಸತ್ಯಭಾಮಾ ಇಬ್ಬರೂ ಸೇರಿ ನರಕಾಸುರ ಎಂಬ ರಾಕ್ಷಸನನ್ನು ಸಂಹಾರ (Narakasura Vadha) ಮಾಡಿದರು. ಅದಕ್ಕಾಗಿ ನರಕ ಚತುರ್ದಶಿ ಆಚರಣೆಗೆ ಬಂದಿತು ಎಂಬ ನಂಬಿಕೆಯಿದೆ. ಇದಕ್ಕೆ ಭಾಗವತ ಪುರಾಣದಲ್ಲಿ ಉಲ್ಲೇಖಗಳಿವೆ ಎನ್ನುತ್ತಾರೆ. ಆದ್ರೆ ಕಾಳಿಕಾ ಪುರಾಣದಲ್ಲಿ ಮಹಾಕಾಳಿ (Mahakali) ಈ ದಿನದಂದು ನರಕಾಸುರನನ್ನು ಸಂಹರಿಸಿದಳು, ಅದಕ್ಕಾಗಿ ನರಕ ಚತುರ್ದಶಿ ಆಚರಣೆಗೆ ಬಂತು ಎಂಬ ಉಲ್ಲೇಖಗಳಿವೆ.
Advertisement
ಭಾಗವತಾ ಪುರಾಣ ಕಥೆ ಹೇಳುವಂತೆ, ಹಿಂದೆ ಪ್ರಾಗ್‌ಜ್ಯೋತಿಷಪುರ ಎಂಬಲ್ಲಿ ಭೌಮಾಸುರ ಅಥವಾ ನರಕಾಸುರನೆಂಬ ಒಬ್ಬ ಬಲಾಢ್ಯ ರಾಕ್ಷಸನು ರಾಜ್ಯವನ್ನಾಳುತ್ತಿದ್ದನು. ಅವನು ದೇವತೆಗಳಿಗೆ ಮತ್ತು ಮಾನವರಿಗೆ ತೊಂದರೆ ಕೊಡುತ್ತಿದ್ದ. ರಾಕ್ಷಸನಾದ ನರಕಾಸುರನು ಭೂಮಿತಾಯಿಯ ಮಗ. ಇವನ ಆಳ್ವಿಕೆಯಲ್ಲಿ ಸಾಕಷ್ಟು ದೌರ್ಜನ್ಯ ಎಸಗಿದ್ದ, ಜನರಿಗೆ ಮೋಸ ಮಾಡಿದ್ದ. ಭೂಮಿಯ ಮೇಲೆ ತನ್ನದೇ ಆಡಳಿತ ಮಾಡುತ್ತಾ ದುರಹಂಕಾರಕ್ಕೆ ಒಳಗಾಗಿದ್ದ. ನಂತರ ತಾನು ಸ್ವರ್ಗವನ್ನು ಆಳಬೇಕು ಎಂದು ಬಯಸಿದ. ಈ ಬಯಕೆಯ ಪ್ರಯುಕ್ತ ಯುದ್ಧಕ್ಕಾಗಿ ಇಂದ್ರ ದೇವನನ್ನು ಆಹ್ವಾನಿಸಿದನು.
Advertisement
Advertisement
ಈ ದುಷ್ಟದೈತ್ಯನು ಸ್ತ್ರೀಯರನ್ನು ಪೀಡಿಸತೊಡಗಿದನು. ಅವನು ತಾನು ಜಯಿಸಿ ತಂದಿದ್ದ 16,000 ವಿವಾಹಯೋಗ್ಯ ರಾಜಕನ್ಯೆಯರನ್ನ ಸೆರೆವಾಸದಲ್ಲಿಟ್ಟು ಅವರೊಂದಿಗೆ ವಿವಾಹವಾಗುವ ಹುನ್ನಾರ ಮಾಡಿದ್ದ. ಈ ವೃತ್ತಾಂತವು ಶ್ರೀಕೃಷ್ಣನಿಗೆ ತಿಳಿದ ಕೂಡಲೇ ಅವನು ಸತ್ಯಭಾಮೆಯೊಂದಿಗೆ ಬಂದು ನರಕಾಸುರನನ್ನು ಸಂಹಾರ ಮಾಡಿ, ಸೆರೆಯಲ್ಲಿದ್ದ ರಾಜಕನ್ಯೆಯರನ್ನ ಮುಕ್ತಗೊಳಿಸಿದನು.
Advertisement
ಏಕೆ ಅಭ್ಯಂಗ ಸ್ನಾನ ಮಾಡಬೇಕು?
ಕೃಷ್ಣನು ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿ ದಿನದಂದು ನರಕಾಸುರನನ್ನು ಸಂಹರಿಸಿದ. 16000 ರಾಜಪುತ್ರಿಯರನ್ನು ಬಂಧನದಿಂದ ಬಿಡಿಸಿ ಬೆಳಗಿನ ಜಾವ ಮನೆಗೆ ಬಂದು ಅಭ್ಯಂಜನ ಸ್ನಾನ ಮಾಡಿದ. ಅಂದಿನಿಂದ ಕೃಷ್ಣ ಚತುರ್ದಶಿಯನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ನರಕಾಸುರನನ್ನು ಸಂಹರಿಸಿದಾಗ ದೇಹದ ರಕ್ತದ ಕಲೆಗಳಾಗಿದ್ದರಿಂದ ಅದನ್ನು ಶುಚಿಗೊಳಿಸಲು ಶ್ರೀಕೃಷ್ಣನು ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು. 16000 ರಾಜಪುತ್ರಿಯರು ಕೃಷ್ಣನ ಕಡೆಗೆ ಬಂದು ಕೃತಜ್ಞತೆ ಸಲ್ಲಿಸಿ ಸಂಭ್ರಮದಿಂದ ಕೃಷ್ಣನಿಗೆ ಆರತಿ ಬೆಳಗಿ ಪೂಜಿಸಿದರು.
ತಾಯಿ ಭೂದೇವಿ ಮಗ ನರಕಾಸುರನನ್ನು ಕಳೆದುಕೊಂಡು ದುಃಖಿಸಿದಳು. ಈ ದಿನವು ನನ್ನ ಮಗನ ಹೆಸರಿನಿಂದ ಆಚರಿಸಲ್ಪಡಲಿ. ಈ ದಿನ ಎಲ್ಲರೂ ನಿನ್ನಂತೆಯೇ ಅಭ್ಯಂಜನ ಸ್ನಾನ ಮಾಡಲಿ ಎಂದು ಕೃಷ್ಣನಲ್ಲಿ ಬೇಡಿದಳು. ಕೃಷ್ಣ ತಥಾಸ್ತು ಎಂದ. ಈ ಕಾರಣಕ್ಕೆ ನರಕಚತುರ್ದಶಿಯಂದು ಜನರು ಅಭ್ಯಂಜನ ಮಾಡುತ್ತಾರೆ. ಬೆಳಗಿನ ಜಾವ ಮಾಡುವ ಅಭ್ಯಂಜನ ಶ್ರಿಕೃಷ್ಣನೊಂದಿಗೆ ಭೂದೇವಿಗೂ ಹಿತಕರ. ಅಂದು ಜನರು ಸೂರ್ಯೋದಯಕ್ಕೂ ಮುಂಚೆ ಎದ್ದು, ಅಭ್ಯಂಗ ಸ್ನಾನ ಮಾಡುತ್ತಾರೆ. ಜೊತೆಗೆ ಬಾಳಿನ ಕತ್ತಲೆಯನ್ನು ತೊಡೆದು ಹಾಕಬೇಕೆಂಬ ನಂಬಿಕೆಯಿಂದ ಮನೆ ಮನೆಯಲ್ಲೂ ದೀಪ ಬೆಳಗಿಸುತ್ತಾರೆ, ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.
ಅಷ್ಟೇ ಅಲ್ಲದೇ ಪ್ರಾಚೀನ ವೈದ್ಯ ಪದ್ಧತಿಯಾದ ಆಯುರ್ವೇದದಲ್ಲಿಯೂ ಅಭ್ಯಂಗಕ್ಕೆ ವಿಶೇಷ ಮಹತ್ವವಿದೆ. ಶರೀರಕ್ಕೆ ತೈಲ ಹಚ್ಚಿ ಮೃದುವಾಗಿ ತೀಡಿ, ಸ್ವಲ್ಪ ಹೊತ್ತು ಕಳೆದ ನಂತರ ಸ್ನಾನ ಮಾಡುವುದನ್ನು ಅಭ್ಯಂಗ ಸ್ನಾನವೆಂದು ಹೇಳಲಾಗುತ್ತೆ. ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ, ಹಬ್ಬ-ಹರಿದಿನಗಳು ಹಾಗೂ ವಿಶೇಷ ಸಂದರ್ಭಗಳಲ್ಲೂ ಅಭ್ಯಂಗ ಸ್ನಾನ ಮಾಡಿ, ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಅಂದು ಚಿಕ್ಕಮಕ್ಕಳಾದಿಯಾಗಿ ಎಲ್ಲರೂ ಅಭ್ಯಂಜನ ಸ್ನಾನಮಾಡಿ ಹೊಸವಸ್ತ್ರಗಳನ್ನು ಧರಿಸುತ್ತಾರೆ. ನರಕ ಎಂದರೆ ಅಜ್ಞಾನ. ಚತುರ್ದಶಿ ಎಂದರೆ ಬೆಳಕು. ಅಜ್ಞಾನ ಕಳೆದು ಸುಜ್ಞಾನದ ಬೆಳಕು ದೊರೆಯಲೆಂದೇ ನರಕಚತುರ್ದಶಿಯ ಆಚರಣೆ.