ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯಲ್ಲಿ ಆರೋಗ್ಯ ಸೇವೆ ಪರಿಷ್ಕರಣೆಗೆ ನಿರ್ಧಾರ ಮಾಡಿದ್ದೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ (Bengaluru) ಮಾತನಾಡಿದ ಅವರು, ಬಿಬಿಎಂಪಿ ವಲಯದಲ್ಲಿನ ಆರೋಗ್ಯ ಸೇವೆಗಳ ಪರಿಷ್ಕರಣೆಯ ಬಗ್ಗೆ ಚರ್ಚೆ ಮಾಡಿದ್ದೇವೆ. ಬಿಬಿಎಂಪಿ ಮುಖ್ಯ ಆಯುಕ್ತರು ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಆರೋಗ್ಯ ವ್ಯವಸ್ಥೆಯ ಬಗ್ಗೆ ಕೆಲವು ಗೊಂದಲಗಳಿವೆ. ಬಿಬಿಎಂಪಿ ಕೆಲವು ಆಸ್ಪತ್ರೆಯನ್ನು ನಿರ್ವಹಣೆ ಮಾಡ್ತಿದೆ. ಕೆಲವನ್ನು ಆರೋಗ್ಯ ಇಲಾಖೆ ಮಾಡ್ತಿದೆ. ಬಿಬಿಎಂಪಿ ಹೊರವಲಯದ ಆಸ್ಪತ್ರೆಗೆ ಜಿಲ್ಲಾಪಂಚಾಯತಿ ಮೂಲಕ ಅನುದಾನ ಬರುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಮೆಟರ್ನಿಟಿ ಆಸ್ಪತ್ರೆಗಳನ್ನು ಬಿಬಿಎಂಪಿಯವರು ತಾವೇ ನೋಡಿಕೊಳ್ಳೊದಾಗಿ ಹೇಳಿದ್ದಾರೆ ಎಂದು ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಇನ್ನೂ ಉಳಿದ ಹೆಚ್ಚಿನ ಸೌಲಭ್ಯ ಇರುವ ಆಸ್ಪತ್ರೆಗಳನ್ನು ಆರೋಗ್ಯ ಇಲಾಖೆಯೇ ನೋಡಿಕೊಳ್ಳಲಿ ಎಂದು ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ. ನಿರ್ವಹಣೆ ಸಮಸ್ಯೆ ಉಂಟಾಗಿರುವುದರಿಂದ ಈ ರೀತಿ ಹೇಳಿದ್ದಾರೆ. ಡಿಸಿಎಂ ಬಳಿ ಇದರ ಬಗ್ಗೆ ಚರ್ಚೆ ಮಾಡಿ ನಾವು ತಿರ್ಮಾನಕ್ಕೆ ಬರುತ್ತಿದ್ದೇವೆ. ಸರಿಯಾಗಿ ಯಾರ ಅಡಿಯಲ್ಲಿ ಆಸ್ಪತ್ರೆಗಳು ಬರುತ್ತವೆ ಎಂಬ ಬಗ್ಗೆ ಸ್ಪಷ್ಟತೆ ಇರಬೇಕು. ಈ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ.