ಬೆಂಗಳೂರು: ಒಂದು ವರ್ಷಕ್ಕೂ ಹೆಚ್ಚು ಅವಧಿಯವರೆಗೆ ಕ್ಷೇತ್ರಗಳು ಖಾಲಿ ಇದ್ದರೆ ಉಪಚುನಾವಣೆ ಅನಿವಾರ್ಯ. ಹೀಗಾಗಿ ಬಳ್ಳಾರಿ, ಮಂಡ್ಯ, ಶಿವಮೊಗ್ಗಕ್ಕೆ ಲೋಕಸಭೆ ಉಪಚುನಾವಣೆ ನಡೆಯುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟನೆ ನೀಡಿದೆ.
ಲೋಕಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಈಗ ಉಪಚುನಾವಣೆ ಅಗತ್ಯವಿತ್ತೆ ಎನ್ನುವ ಚರ್ಚೆ ಭಾರೀ ಸದ್ಧು ಮಾಡಿತ್ತು. ಈ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಚುನಾವಣೆಗೆ ಆಯೋಗವು ಶಿವಮೊಗ್ಗ, ಬಳ್ಳಾರಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳು ಈ ವರ್ಷದ ಮೇ ತಿಂಗಳಿಂದ ಖಾಲಿ ಉಳಿದಿವೆ. ಈಗ ಅಸ್ತಿತ್ವದಲ್ಲಿರುವ 16ನೇ ಲೋಕಸಭೆಯ ಅವಧಿ 2019ರ ಜೂನ್ 3ಕ್ಕೆ ಅಂತವಾಗಲಿದೆ. ಹೀಗಾಗಿ ಉಪಚುನಾವಣೆ ಅನಿವಾರ್ಯವಾಗಿದೆ ಎಂದು ಹೇಳಿದೆ.
Advertisement
Advertisement
ಆಂಧ್ರಪ್ರದೇಶದಲ್ಲಿ ಖಾಲಿ ಇರುವ ಲೋಕಸಭಾ ಕ್ಷೇತ್ರಗಳಿಗೆ ಏಕೆ ಚುನಾವಣೆ ನಡೆಸುತ್ತಿಲ್ಲ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಕೇಂದ್ರ ಚುನಾವಣೆ ಆಯೋಗವು, ಸೆಕ್ಷನ್ 154ಎ ಪ್ರಕಾರ ಒಂದು ವರ್ಷಕ್ಕಿಂತ ಕಡಿಮೆ ಅಂತರ ಇರುವ ಕೇತ್ರಗಳಲ್ಲಿ ಉಪಚುನಾವಣೆ ಅಗತ್ಯವಿಲ್ಲ. ಆಂಧ್ರ ಪ್ರದೇಶದಲ್ಲಿ ಖಾಲಿ ಇರುವ ಕ್ಷೇತ್ರಗಳು ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ಅಂತರವಿದೆ. ಆಂಧ್ರದಲ್ಲಿ ಜೂನ್ 20ರ ನಂತರ ಕ್ಷೇತ್ರ ತೆರವಾಗಿದ್ದರೆ ಕರ್ನಾಟಕದ ಬಳ್ಳಾರಿ, ಶಿವಮೊಗ್ಗ, ಮಂಡ್ಯ ಕ್ರಮವಾಗಿ ಮೇ 18 ಮತ್ತು 21 ರಿಂದ ತೆರವಾಗಿದೆ. ಹೀಗಾಗಿ ಆಂಧ್ರದಲ್ಲಿ ಚುನಾವಣೆ ಅನಿವಾರ್ಯವಲ್ಲ ಎಂದು ತಿಳಿಸಿದೆ.
Advertisement
ಎರಡು ಸಂದರ್ಭದಲ್ಲಿ ಉಪಚುನಾವಣೆ ಆಗಲ್ಲ:
ಪ್ರಜಾ ಪ್ರತಿನಿಧಿ ಕಾಯ್ದೆಯ ಸೆಕ್ಷನ್ 151 ಎ ಪ್ರಕಾರ ಎರಡು ಸಂದರ್ಭದಲ್ಲಿ ಉಪ ಚುನಾವಣೆ ನಡೆಯುವುದಿಲ್ಲ. ಮೊದಲನೆಯದಾಗಿ, ತೆರವಾದ ನಿರ್ದಿಷ್ಟ ಲೋಕಸಭೆ ಕ್ಷೇತ್ರದ ಸದಸ್ಯನ ಉಳಿಕೆ ಅವಧಿ ಒಂದು ವರ್ಷಕ್ಕಿಂತ ಕಡಿಮೆ ಇದ್ದರೆ ಉಪ ಚುನಾವಣೆ ನಡೆಸಲು ಅವಕಾಶ ಇಲ್ಲ. ಎರಡನೆಯದಾಗಿ, ಚುನಾವಣೆ ಆಯೋಗ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚನೆ ನಡೆಸಿ, ಉಳಿಕೆ ಅವಧಿಯಲ್ಲಿ ಉಪ ಚುನಾವಣೆ ನಡೆಸುವುದು ಕಷ್ಟ ಎಂದು ಹೇಳಿದರೆ ಚುನಾವಣೆ ನಡೆಯುವುದಿಲ್ಲ. ಈಗ ಅಸ್ತಿತ್ವದಲ್ಲಿರುವ 16ನೇ ಲೋಕಸಭೆಯ ಅವಧಿ 2019ರ ಜೂನ್ ತಿಂಗಳಿನಲ್ಲಿ ಪೂರ್ಣಗೊಳ್ಳುತ್ತದೆ. ಶಿವಮೊಗ್ಗ, ಬಳ್ಳಾರಿ, ಮಂಡ್ಯ ಕ್ಷೇತ್ರಗಳ ಉಪ ಚುನಾವಣೆ ನವೆಂಬರ್ 3 ರಂದು ನಡೆದರೆ ನವೆಂಬರ್ 6 ರಂದು ಮತ ಎಣಿಕೆ ನಡೆಯಲಿದೆ. ಅಂದರೆ ಈ ಫಲಿತಾಂಶ ಬಂದ ಬಳಿಕ ಗೆದ್ದವರಿಗೆ ಸಿಗುವುದು ಕೇವಲ 4 ತಿಂಗಳು ಮಾತ್ರ. ಯಾಕೆಂದರೆ ಏಪ್ರಿಲ್ ನಿಂದಲೇ ಚುನಾವಣಾ ಪ್ರಕ್ರಿಯೆ ಜಾರಿಯಾಗುತ್ತದೆ. ಸದಸ್ಯರು ರಾಜೀನಾಮೆ ನೀಡಿದ 6 ತಿಂಗಳ ಒಳಗಡೆ ಚುನಾವಣೆ ನಡೆಸುವುದು ಆಯೋಗದ ಕರ್ತವ್ಯ. ಆದರೆ 3-4 ತಿಂಗಳ ಅವಧಿಗಾಗಿ ಹಣವನ್ನು ಖರ್ಚು ಮಾಡಿ ಈ ಚುನಾವಣೆ ನಡೆಸಬೇಕೇ ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ.
Advertisement
ಈ ವಿಚಾರಕ್ಕೆ ಹಿರಿಯ ವಕೀಲ ಬಿವಿ. ಆಚಾರ್ಯ ಪ್ರತಿಕ್ರಿಯಿಸಿ, ಚುನಾವಣಾ ಆಯೋಗದ ಕ್ರಮವನ್ನು ಪ್ರಶ್ನಿಸಿ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಚುನಾವಣೆ ಮಾಡಬಾರದು ಎಂದು ನಿಯಮವಿಲ್ಲ. ಸದ್ಯ ಉಪ ಚುನಾವಣೆ ಘೋಷಣೆ ಮಾಡಿರುವುದರಲ್ಲಿ ಚುನಾವಣಾ ಆಯೋಗದ ತಪ್ಪಿಲ್ಲ. ಆದರೆ ಯಾವುದೇ ಕಾರಣದಿಂದ ತೆರವಾದ ಸ್ಥಾನಗಳಿಗೆ 6 ತಿಂಗಳ ಒಳಗೆ ಚುನಾವಣೆ ನಡೆಸಬೇಕು ಎಂದು ಕಾನೂನಿದೆ. ಅದ್ದರಿಂದ ಆಯೋಗ ಚುನಾವಣೆ ಘೋಷಣೆ ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ತನ್ನ ಕೆಲಸ ಮಾಡಿದೆ. 151 ಎ ಸೆಕ್ಷನ್ ವಿಧಾನಸಭೆ, ವಿಧಾನ ಪರಿಷತ್ ಮತ್ತು ಲೋಕಸಭೆ, ರಾಜ್ಯಸಭೆಗಳಿಗೂ ಅನ್ವಯಿಸುತ್ತದೆ ಎಂದರು. ರಾಜಕೀಯ ಪಕ್ಷಗಳು ಮನಸ್ಸು ಮಾಡಿ ಚುನಾವಣೆ ಬೇಡ ಎಂದು ಹೇಳಿದರೆ ಆಯೋಗ ತನ್ನ ನಿರ್ಧಾರವನ್ನು ಪರಿಶೀಲಸಬಹುದು ಎಂದು ತಿಳಿಸಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv