– ರಾಜ್ಯದ 15 ಕಡೆ ರೋಪ್‌ವೇಗಳ ನಿರ್ಮಾಣಕ್ಕೆ ನಿರ್ಣಯ – ಸಚಿವ ಹೆಚ್.ಕೆ.ಪಾಟೀಲ
ಬೆಳಗಾವಿ: ರಾಜ್ಯದಲ್ಲಿ 15 ಕಡೆ ರೋಪ್‌ವೇಗಳ ನಿರ್ಮಾಣಕ್ಕೆ ಸರ್ಕಾರ ನಿರ್ಣಯ ಕೈಗೊಂಡಿದೆ. ಇವುಗಳ ನಿರ್ಮಾಣ ಮತ್ತು ಕಾರ್ಯನಿರ್ವಹಣೆಯನ್ನು ಅಧಿಕೃತಗೊಳಿಸಿ, ಸುಗಮಗೊಳಿಸುವ ಹಾಗೂ ನಿಯಂತ್ರಿಸುವ ಸಲುವಾಗಿ 2024ನೇ ಸಾಲಿನ ಕರ್ನಾಟಕ ಪ್ರವಾಸೋದ್ಯಮ ರೋಪ್‌ವೇಗಳ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ ಎಂದು ಕಾನೂನು ಸಂಸದೀಯ ವ್ಯವಹಾರಗಳು ಮತ್ತು ಶಾಸಕ ರಚನೆ ಹಾಗೂ ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ ಹೇಳಿದರು.
Advertisement
ಸುವರ್ಣ ಸೌಧದಲ್ಲಿ ಸೋಮವಾರ ವಿಧಾನಸಭೆ ಕಲಾಪದಲ್ಲಿ ವಿಧೇಯಕವನ್ನು ಸದನದ ಪರ್ಯಾಲೋಚನೆಗೆ ಅವರು ಮಂಡಿಸಿದರು. ರೋಪ್‌ವೇಗಳ ನಿರ್ಮಾಣದಿಂದ ರಾಜ್ಯದಲ್ಲಿ ಪ್ರವಾಸೋದ್ಯಮಕ್ಕೆ ಇಂಬು ದೊರಕಲಿದೆ. ಈ ರೋಪ್‌ವೇಗಳ ನಿರ್ಮಾಣದ ಜೊತೆಗೆ ನಿರ್ವಹಣೆಯನ್ನು ಸಹ ಪ್ರತ್ಯೇಕವಾಗಿ ಇಡಲು ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ವಿಧೇಯಕವನ್ನು ಮಂಡಿಸಲಾಗುತ್ತಿದೆ. ಸದನ ಒಪ್ಪಿಗೆ ನೀಡುವಂತೆ ಅವರು ಕೋರಿದರು.
Advertisement
ಆರ್.ಅಶೋಕ್ ಮಾತನಾಡಿ, ವಿಧೇಯಕದಡಿ ರಚಿಸಲಾಗುವ ಸಲಹಾ ಪ್ರಾಧಿಕಾರದಲ್ಲಿ ಸರ್ಕಾರದ ಅರಣ್ಯ ಇಲಾಖೆ ಕಾರ್ಯದರ್ಶಿಗಳನ್ನು ಸಹ ಸದಸ್ಯರನ್ನಾಗಿ ನೇಮಿಸಬೇಕು. ರೋಪ್‌ವೇ ನಿರ್ಮಿಸಲು ಉದ್ದೇಶಿಸಿದ ಅನೇಕ ಸ್ಥಳಗಳು ಅರಣ್ಯ ಇಲಾಖೆ ವ್ಯಾಪ್ತಿಗೆ ಬರುತ್ತವೆ. ಇದರಿಂದ ಶೀಘ್ರವೇ ಅನುಮತಿ ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಶಾಸಕ ಡಾ.ಅಶ್ವಥ್ ನಾರಾಯಣ ಮಾತನಾಡಿ, ರೋಪ್‌ವೇಗಳು ಮಲೆನಾಡು ಭಾಗದಲ್ಲಿ ಗುಡ್ಡದ ಮೇಲೆ ಕಾಲುದಾರಿಗಳ ನಿರ್ಮಾಣದಿಂದ ಉಂಟಾಗುವ ಭೂ ಕುಸಿತ ತಡೆಯಲು ಸಹಾಯಕವಾಗಿವೆ ಎಂದು ಅಭಿಪ್ರಾಯಪಟ್ಟರು.
Advertisement
ಶಾಸಕ ಅರಗ ಜ್ಞಾನೇಂದ್ರ ಮಾತನಾಡಿ, ರೋಪ್‌ವೇಗಳ ಸುರಕ್ಷತೆ ಹಾಗೂ ಗುಣಮಟ್ಟ ಪರೀಶಿಲನೆಗೆ ಸರ್ಕಾರ ವಿಧೇಯಕದಲ್ಲಿ ಹೆಚ್ಚಿನ ಮಹತ್ವ ನೀಡಬೇಕು ಎಂದರು. ಶಾಸಕ ಹೆಚ್.ಸಿ.ಬಾಲಕೃಷ್ಣ ಶ್ರವಣಬೆಳಗೊಳದಲ್ಲಿ ರೋಪ್ ವೇ ನಿರ್ಮಿಸಲು ಭಾರತೀಯ ಪುರತತ್ವ ಇಲಾಖೆ ಅನುಮತಿ ನೀಡುತ್ತಿಲ್ಲ. ಇದನ್ನು ಗಮನದಲ್ಲಿ ಇಟ್ಟುಕೊಂಡು ರೋಪ್ ವೇ ಸಲಹಾ ಪ್ರಾಧಿಕಾರದಲ್ಲಿ ಪುರತತ್ವ ಇಲಾಖೆ ಅಧಿಕಾರಿಗಳನ್ನು ಸಹ ಸದಸ್ಯರನ್ನಾಗಿ ಮಾಡುವಂತೆ ಸಲಹೆ ನೀಡಿದರು. ಶಾಸಕರು ಸಲಹೆ ನೀಡಿದ ಸೂಚನೆಗಳ ತಿದ್ದುಪಡಿಯೊಂದಿಗೆ ವಿಧೇಯಕಕ್ಕೆ ಸದನ ಧ್ವನಿ ಮತದಿಂದೊಂದಿಗೆ ಅಂಗೀಕಾರ ನೀಡಿತು.
Advertisement
ವಿಧೇಯಕ ವಾಪಸ್ಸು: ರಾಜ್ಯಪಾಲರ ಸಲಹೆ ಮೇರೆಗೆ ಸಚಿವ ಹೆಚ್.ಕೆ.ಪಾಟೀಲ 2024ನೇ ಸಾಲಿನ ಕರ್ನಾಟಕ ವಿಧಾನ ಮಂಡಲ ಅನರ್ಹತಾ ನಿವಾರಣೆ ತಿದ್ದುಪಡಿ ವಿಧೇಯಕವನ್ನು ಹಿಂಪಡೆಯಲು ಸದನದಲ್ಲಿ ಅನುಮತಿ ಕೋರಿದರು. ವಿಧೇಯಕ ಹಿಂಪಡೆಯಲು ಸದನ ಅನುಮತಿ ನೀಡಿತು.