– ಫೆ.26 ರಂದು ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆಗೆ ಬಿಜೆಪಿ ಕರೆ
ಬಾಗಲಕೋಟೆ: ಶಿವಾಜಿ ಜಯಂತಿಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದ ಬಾಗಲಕೋಟೆಯ ಕಿಲ್ಲಾ ಓಣಿ ಸಹಜ ಸ್ಥಿತಿಗೆ ಬಂದಿದೆ. ಕೊತ್ತಲೇಶ್ವರ ದೇವಸ್ಥಾನ ಹಾಗೂ ಪಂಕಾ ಮಸೀದಿ ಆವರಣದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ಆರಂಭವಾಗಿದೆ. ಈ ಬೆನ್ನಲ್ಲೇ ಹಿಂದೂ ಸರ್ವ ಸಮಾಜದ ಮುಖಂಡರು ಭಾನುವಾರ (ಫೆ.22) ನಡೆಸಿದ ಸಭೆಯಲ್ಲಿ ಮತ್ತೊಮ್ಮೆ ಶಿವಾಜಿ ಜಯಂತಿ ಆಚರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.
ಬಾಗಲಕೋಟೆ ಶಿವಾನುಭವ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಫೆ.26 ರಂದು ಶಿವಾಜಿ ಜಯಂತಿ ಅದ್ಧೂರಿ ಆಚರಣೆಗೆ ನಿರ್ಧರಿಸಲಾಗಿದೆ. ಜೊತೆಗೆ ಕಲ್ಲುತೂರಾಟ ನಡೆಸಿದ ಆರೋಪಿಗಳ ಬಂಧನಕ್ಕೂ ಆಗ್ರಹಿಸಲಾಗಿದೆ. ಇದನ್ನೂ ಓದಿ: ಪ್ರಮೋದ್ ಮುತಾಲಿಕ್, ಪುನಿತ್ ಕೆರೆಹಳ್ಳಿಗೆ ಬಾಗಲಕೋಟೆ ಪ್ರವೇಶಿಸದಂತೆ ನಿರ್ಬಂಧ

ಈ ವೇಳೆ ರಾಜ್ಯಸಭಾ ಸಂಸದ ನಾರಾಯಣ್ ಸಾ ಭಂಡಗೆ ಮಾತನಾಡಿ, ಫೆ.26 ರಂದು ಅದೇ ಮಸೀದಿ ಎದುರು ಅದ್ಧೂರಿಯಾಗಿ ಶಿವಾಜಿ ಮಹಾರಾಜರ ಜಯಂತಿ ಆಚರಿಸೋಣ. ಅಕ್ರಮ ಮಸೀದಿಗಳ ಬಗ್ಗೆ ನಮ್ಮ ಹೋರಾಟ ಮುಂದುವರಿಸೋಣ ಎಂದು ಕರೆ ನೀಡಿದರು.
ಸಹಜ ಸ್ಥಿತಿಗೆ ಮರಳಿದ್ರೂ ಮುನ್ನೆಚ್ಚರಿಕೆ
ಶಿವಾಜಿ ಜಯಂತಿಯ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದ ಬಾಗಲಕೋಟೆಯ ಕಿಲ್ಲಾ ಓಣಿ ಸಹಜ ಸ್ಥಿತಿಗೆ ಬಂದಿದೆ. ಆದಾಗ್ಯೂ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ಮಧ್ಯೆ, ಸೋಮವಾರ (ಫೆ.23) ನಡೆಯಬೇಕಿದ್ದ ಹಿಂದೂ ಸಮ್ಮೇಳನ ಅನಿರ್ದಿಷ್ಟಾವಧಿ ಮುಂದೂಡಿಕೆ ಆಗಿದೆ.

ಇನ್ನೂ ಹಿಂದೂ ಸಮ್ಮೇಳನದ ಪ್ರಮುಖ ಭಾಷಣಕಾರರಾಗಿದ್ದ ಪ್ರಮೋದ್ ಮುತಾಲಿಕ್‌ಗೆ ಬಾಗಲಕೋಟೆ ಪ್ರವೇಶಿಸದಂತೆ ನಿರ್ಬಂಧ ಹೇರಿದ್ರೂ ಜಿಲ್ಲೆ ಪ್ರವೇಶಿಸಿದ್ರು. ಬಾಗಲಕೋಟೆ ರೈಲು ನಿಲ್ದಾಣಕ್ಕೆ ಆಗಮಿಸಿದ ಮುತಾಲಿಕ್‌ಗೆ ನಿರ್ಬಂಧ ಇರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ರು. ಈ ವೇಳೆ ಪ್ರತಿಕ್ರಿಯಿಸಿ, ನಾನು ಮಾತನಾಡಿದ ನಂತರ ಏನಾದರೂ ತಪ್ಪು ಅನಿಸಿದರೆ ನನ್ನ ಮೇಲೆ ಕೇಸ್ ಹಾಕಿ. ಆದರೆ ನಿರ್ಬಂಧ ಹೇರಿದ್ರೆ ಹೇಗೆ ಎಂದು ಪ್ರಶ್ನಿಸಿದ್ರು. ಕಲ್ಲು ತೂರಿದವರ ವಿರುದ್ಧ ಆಕ್ರೋಶ ಹೊರ ಹಾಕಿದ್ರು.
ಫೆ.26 ರಂದು ಬೃಹತ್ ಪ್ರತಿಭಟನೆಗೆ ಬಿಜೆಪಿ ಕರೆ
ಇನ್ನೂ ಕಲ್ಲು ತೂರಾಟ ಹಾಗೂ ಚಪ್ಪಲಿ ಎಸೆತ ಪ್ರಕರಣ ಖಂಡಿಸಿ ಫೆ.26 ರಂದು ಬಾಗಲಕೋಟೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಬಿಜೆಪಿ ಮುಖಂಡ ಅಶೋಕ ಲಿಂಬಾವಳಿ ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: ಬಾಗಲಕೋಟೆ ಕಲ್ಲುತೂರಾಟ| ಬಂಧನಕ್ಕೆ ಒಳಗಾದ 7 ಮಂದಿ ಅಮಾಯಕರು: ಬಿಡುಗಡೆ ಮಾಡುವಂತೆ ಮುಸ್ಲಿಮರ ಮನವಿ

ಬಾಗಲಕೋಟೆ ನಗರದ ಚರಂತಿಮಠ ಕಲ್ಯಾಣ ಮಂಟಪದಲ್ಲಿ ನಡೆದ ಸರ್ವ ಹಿಂದೂ ಸಮಾಜದ ಮುಖಂಡರ ಸಭೆ ಬಳಿಕ ತೀರ್ಮಾನ ತೆಗೆಕೊಂಡಿದ್ದಾಗಿ ತಿಳಿಸಿದ್ದಾರೆ. ಫೆಬ್ರುವರಿ 26 ರಂದು ಬಾಗಲಕೋಟೆ ನಗರದ ಅಂಬಾಭವಾನಿ ದೇವಸ್ಥಾನದಿಂದ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ. ಅಂದು ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಗೆ ಹಿಂದೂ ಜಾಗರಣ ವೇದಿಕೆ ರಾಜ್ಯ ಸಂಚಾಲಕರಾದ ಜಗದೀಶ್ ಕಾರಂತ್ ಅವ್ರನ್ನ ಕರೆಸಲು ನಿರ್ಣಯಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರತಿಭಟನೆಗೆ ಜಿಲ್ಲೆಯ ಹಳ್ಳಿಹಳ್ಳಿಗಳಿಂದ ಹಿಂದೂ ಕಾರ್ಯಕರ್ತರು ಆಗಮಿಸಲಿದ್ದಾರೆ.

