ಬೆಂಗಳೂರು: ಬಿಬಿಎಂಪಿ ಶಾಲೆಗಳು ಇನ್ಮುಂದೆ ಶಿಕ್ಷಣ ಇಲಾಖೆ ಅಧೀನಕ್ಕೆ ನೀಡಲು ಬಿಬಿಎಂಪಿ ನಿರ್ಧಾರ ಮಾಡಿದೆ. ಇಂದು (ಶುಕ್ರವಾರ) ಡಿಸಿಎಂ ಡಿ.ಕೆ.ಶಿವಕುಮಾರ್ (D.K.Shivakumar) ಮತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಶಾಲೆಗಳನ್ನ ಶಿಕ್ಷಣ ಇಲಾಖೆಗೆ ನೀಡುವ ನಿರ್ಧಾರ ಮಾಡಲಾಯ್ತು.
ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಬಿಬಿಎಂಪಿ (BBMP) ಶಾಲೆಗಳನ್ನು ಇನ್ಮುಂದೆ ಶಿಕ್ಷಣ ಇಲಾಖೆ ಸುಪರ್ದಿಗೆ ನೀಡಲು ತೀರ್ಮಾನಿಸಲಾಗಿದೆ. ಪ್ರತಿ ವರ್ಷ ಫಲಿತಾಂಶದಲ್ಲಿ ಬಿಬಿಎಂಪಿ ಶಾಲೆಗಳಲ್ಲಿ ಕುಸಿತ ಕಂಡಿರುವುದನ್ನು ನಾವು ಗಮನಿಸಿದ್ದೇವೆ. ಇದಕ್ಕೆ ಅವಕಾಶ ನೀಡಬಾರದು. ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಗುಣಮಟ್ಟದ ಶಿಕ್ಷಣ ನೀಡಲು ಈ ತೀರ್ಮಾನ ಮಾಡಲಾಗಿದೆ. ಶಾಲೆಗಳಲ್ಲಿ ಶಿಕ್ಷಣ ನೀಡುವಂತಹ ಜವಾಬ್ದಾರಿಯನ್ನು ಮಾತ್ರ ಶಿಕ್ಷಣ ಇಲಾಖೆಗೆ ನೀಡಲಾಗುತ್ತಿದ್ದು, ಈ ಶಾಲೆಗಳ ಮೂಲಸೌಕರ್ಯಗಳ ಉನ್ನತೀಕರಣ ಹಾಗೂ ನಿರ್ವಹಣೆಯನ್ನು ಬಿಬಿಎಂಪಿಯಿಂದಲೇ ಮಾಡಲಾಗುವುದು. ಶಾಲೆಯ ಜಾಗ, ಕಟ್ಟಡ ನಿರ್ವಹಣೆ ಸೇರಿದಂತೆ ಎಲ್ಲಾ ಮೂಲಭೂತ ಸೌಕರ್ಯವನ್ನು ಪಾಲಿಕೆಯಿಂದಲೇ ನಿರ್ವಹಿಸಲಾಗುವುದು. ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿಯನ್ನು ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಮಕ್ಕಳಿಂದ ಟಾಯ್ಲೆಟ್ ಸ್ವಚ್ಛಗೊಳಿಸಿದ ಪ್ರಕರಣ – ಸರ್ಕಾರ ಸತ್ತಿದೆಯೋ, ಬದುಕಿದೆಯೋ: ಆರ್.ಅಶೋಕ್ ವಾಗ್ದಾಳಿ
Advertisement
Advertisement
ಸಿಎಸ್ಆರ್ ನಿಧಿಯ ಮೂಲಕ ಪಂಚಾಯ್ತಿ ಮಟ್ಟದಲ್ಲಿ 2 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆಗಳ ನಿರ್ಮಾಣ ಮಾಡುವ ಗುರಿ ಸರ್ಕಾರದ ಮುಂದಿದೆ. ಮೊದಲ ವರ್ಷ 500 ಶಾಲೆಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದೆ. ಮುಂದಿನ ತಿಂಗಳು ಮೊದಲನೇ ಅಥವಾ ಎರಡನೇ ವಾರದಲ್ಲಿ ಎಲ್ಲಾ ಸಿಎಸ್ಆರ್ ಕಂಪನಿಗಳನ್ನು ಕರೆದು ಅವರಿಗೆ ಈ ಶಾಲೆಗಳ ನಿರ್ಮಾಣ ಯೋಜನೆಗಳನ್ನು ನೀಡುತ್ತೇವೆ. ಕಂಪನಿಗಳು ನಮಗೆ ಗುಣಮಟ್ಟದ ಮೂಲಸೌಕರ್ಯವಿರುವ ಶಾಲೆಗಳನ್ನು ನಿರ್ಮಿಸಿ ಕೊಡಲಿದ್ದಾರೆ. ಪ್ರತಿ ಶಾಲೆಯ ಮೂಲಭೂತ ಸೌಕರ್ಯಕ್ಕೆ ಕನಿಷ್ಠ 4 ಕೋಟಿಯಿಂದ 7 ಕೋಟಿ ರೂ. ವರೆಗೂ ವೆಚ್ಚವಾಗಲಿದೆ. ನಾವು ಈಗಾಗಲೇ ಕೆಲವು ಕಂಪನಿಗಳ ಜತೆ ಚರ್ಚೆ ಮಾಡಿದ್ದು, ಮತ್ತೊಂದು ಸುತ್ತಿನ ಸಭೆ ಮಾಡುತ್ತೇವೆ. ಕಂಪನಿ ಅಥವಾ ಸಂಸ್ಥೆಗಳು ಸರ್ಕಾರಕ್ಕೆ ಸಿಎಸ್ಆರ್ ಹಣ ನೀಡುವ ಅಗತ್ಯವಿಲ್ಲ. ಶಾಲೆ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಕನಿಷ್ಠ 2 ಎಕರೆಯಿಂದ ಮೂರ್ನಾಲ್ಕು ಎಕರೆಯಷ್ಟು ಜಾಗವನ್ನು ಸರ್ಕಾರ ನೀಡಲಿದ್ದು, ಅಲ್ಲಿ ಈ ಸಂಸ್ಥೆಗಳು ಶಾಲೆ ನಿರ್ಮಿಸಲಿವೆ. ಶಾಲೆಯಲ್ಲಿ ಲೈಬ್ರರಿ, ತರಗತಿ, ಪ್ರಯೋಗಾಲಯ, ಶೌಚಾಲಯ ಸೇರಿದಂತೆ ಎಲ್ಲದರ ಯೋಜನೆ ನೀಡಲಾಗುವುದು. ಅವರು ಬೇಕೆಂದರೆ ಇನ್ನು ಉತ್ತಮ ಯೋಜನೆ ಮಾಡಿಕೊಂಡು ಶಾಲೆ ನಿರ್ಮಾಣ ಮಾಡಬಹುದು. ಈ ಬಗ್ಗೆ ರಾಮನಗರ ಜಿಲ್ಲೆಯಲ್ಲಿ ಪ್ರಯೋಗ ಆರಂಭವಾಗಿದೆ ಎಂದು ಹೇಳಿದರು.
Advertisement
ನಮ್ಮಲ್ಲಿರುವ ಉತ್ತಮ ಶೈಕ್ಷಣಿಕ ಸಂಸ್ಥೆಗಳು ಈ ಕರ್ನಾಟಕ ಪಬ್ಲಿಕ್ ಶಾಲೆಗಳ ಜವಾಬ್ದಾರಿಯನ್ನು ಹೊತ್ತುಕೊಳ್ಳಲಿವೆ. ಎಲ್ಲೆಲ್ಲಿ ಶಿಕ್ಷಕರ ಕೊರತೆ ಇದೆ ಅಲ್ಲಿ ಈ ಸಂಸ್ಥೆಗಳು ಶಿಕ್ಷಕರನ್ನು ನೇಮಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜವಾಬ್ದಾರಿ ವಹಿಸಿಕೊಳ್ಳಲಿವೆ. ಒಂದು ಶಿಕ್ಷಣ ಸಂಸ್ಥೆ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಒಂದು ಅಥವಾ ಎರಡು ಮೂರು ಶಾಲೆಗಳ ಜವಾಬ್ದಾರಿಯನ್ನು ಪಡೆಯಬಹುದಾಗಿದೆ. ಸರ್ಕಾರಿ ಶಿಕ್ಷಕರ ಜತೆಗೆ ಈ ಶಿಕ್ಷಣ ಸಂಸ್ಥೆಗಳು ಶಿಕ್ಷಕರನ್ನು ಒದಗಿಸಲಿವೆ. ಈಗಾಗಲೇ ಇದರ ಬಗ್ಗೆ ಕೆಲವು ಶಿಕ್ಷಣ ಸಂಸ್ಥೆಗಳ ಜತೆ ಚರ್ಚೆ ಮಾಡಲಿದ್ದು, ಎಲ್ಲಾ ಪಬ್ಲಿಕ್ ಶಾಲೆಗಳು ಸರ್ಕಾರಿ ಶಾಲೆಯಾಗಿ ಕಾರ್ಯನಿರ್ವಹಿಸಲಿವೆ. ಈ ಮೂಲಕ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣಕ್ಕಾಗಿ ನಗರಗಳತ್ತ ವಲಸೆ ಬರುವುದನ್ನು ತಪ್ಪಿಸಲಾಗುವುದು. ಈ ವಿಚಾರವಾಗಿ ಸಮಿತಿ ರಚನೆ ಬಗ್ಗೆ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದರು. ಇದನ್ನೂ ಓದಿ: ರಾಜ್ಯದಲ್ಲಿ ಹಿಜಬ್ ನಿಷೇಧ ವಾಪಸ್: ಸಿಎಂ ಸಿದ್ದರಾಮಯ್ಯ ಘೋಷಣೆ
Advertisement
ಈಗಾಗಲೇ ನಮ್ಮ ಬಳಿ 1,900 ಕೋಟಿ ರೂ.ಗಳಷ್ಟು ಸಿಎಸ್ಆರ್ ನಿಧಿ ನೀಡಲು ಹಲವು ಸಂಸ್ಥೆಗಳು ಮುಂದೆ ಬಂದಿವೆ. ಇದಕ್ಕಾಗಿ ನೀಲನಕ್ಷೆ ಸಿದ್ಧವಾಗಿದೆ. ಮುಂದಿನ 15ರಿಂದ 20 ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಸಿಎಸ್ಆರ್ ಸಂಸ್ಥೆಗಳನ್ನು ಕರೆಸಿ ಸಭೆ ಮಾಡುತ್ತೇವೆ. ಈ ಶಾಲೆಗಳು ತಾಲೂಕು ಅಥವಾ ಜಿಲ್ಲಾ ಕೇಂದ್ರದಲ್ಲಿ ಇರುವುದಿಲ್ಲ. ಈ ಶಾಲೆಗಳೇನಿದ್ದರೂ ಹೋಬಳಿ ಅಥವಾ ಪಂಚಾಯ್ತಿ ಮಟ್ಟದಲ್ಲಿ ಮಾತ್ರ ಇರುತ್ತವೆ. ಒಂದು ದೊಡ್ಡ ಸಾಹಸಕ್ಕೆ ನಮ್ಮ ಸರ್ಕಾರ ಮುಂದಾಗಿದೆ. ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳಿಗೆ ಬಸ್ ವ್ಯವಸ್ಥೆ ಮಾಡಲಾಗುತ್ತದೆ. ನಾವು ಮನೆ ಬಾಗಿಲಲ್ಲೇ ಶಾಲೆ ಆರಂಭಿಸಲು ಆಗುವುದಿಲ್ಲ. ಸ್ಥಳೀಯ ಮಟ್ಟದಲ್ಲಿ ಅದರ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಬೆಂಗಳೂರು ಅಥವಾ ಇತರೆ ನಗರಗಳಿಗೆ ವಲಸೆ ಬರುವುದನ್ನು ತಪ್ಪಿಸುವ ಉದ್ದೇಶದಿಂದ ಪಂಚಾಯ್ತಿ ಮಟ್ಟದಲ್ಲಿ ಶಾಲೆ ಮಾಡುತ್ತಿದ್ದೇವೆ. ಕೆಲವು ಕಡೆಗಳಲ್ಲಿ ಬಸ್ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ತಿಳಿಸಿದರು.