– ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ
ಬೆಂಗಳೂರು: ಜುಲೈ 31ರ ವರೆಗೆ ತಮಿಳುನಾಡಿಗೆ (Tamil Nadu) ನಿತ್ಯ 1 ಟಿಎಂಸಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿಯಂತ್ರಣಾ ಸಮಿತಿ (CWRC) ಶಿಫಾರಸ್ಸನ್ನು ಸರ್ವಪಕ್ಷ ಸಭೆಯಲ್ಲಿ ತಿರಸ್ಕರಿಸಲಾಯಿತು. ಶಿಫಾರಸು ಕುರಿತು ಮರುಪರಿಶೀಲನೆ ನಡೆಸುವಂತೆ ಮೇಲ್ಮನವಿ ಸಲ್ಲಿಸಲು ತೀರ್ಮಾನ ಕೈಗೊಳ್ಳಲಾಯಿತು. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕೃತವಾಗಿ ತೀರ್ಮಾನ ಪ್ರಕಟಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ಕಾವೇರಿ ನೀರು ನಿಯಂತ್ರಣಾ ಸಮಿತಿ ತಮಿಳುನಾಡಿಗೆ ನಿತ್ಯ 1 ಟಿಎಂಸಿ ನೀರು ಬಿಡಲು ಶಿಫಾರಸು ಮಾಡಿತ್ತು. ಈ ಸಂಬಂಧ ತೀರ್ಮಾನ ಕೈಗೊಳ್ಳಲು ಭಾನುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸರ್ವಪಕ್ಷ ಸಭೆ (ALL Party Meeting) ಕರೆಯಲಾಗಿತ್ತು. ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಮಿತಿ ಆದೇಶಕ್ಕೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಲು ಸರ್ಕಾರ ನಿರ್ಧರಿಸಿರುವುದಾಗಿ ತಿಳಿಸಿದರು.
ಸಭೆ ಆರಂಭಗೊಂಡ ನಂತರ ಮೊದಲಿಗೆ ಕಾವೇರಿ ತಾಂತ್ರಿಕ ಸಮಿತಿ, ಕಾವೇರಿ ಕೊಳ್ಳದ 4 ಜಲಾಶಯಗಳಲ್ಲಿ (Reservoirs) ನೀರಿನ ಸಂಗ್ರಹ, ಒಳ ಹರಿವು, ಮಳೆಯ ಪ್ರಮಾಣದ ಕುರಿತ ವರದಿ ನೀಡಿತು. ಸಭೆಯಲ್ಲಿ 4 ಜಲಾಶಯದ ನೀರಿನ ಸಂಗ್ರಹದ ಮಾಹಿತಿ ನೀಡಿದ ಅಧಿಕಾರಿಗಳು, ಹಾರಂಗಿಯಲ್ಲಿ 76%, ಹೇಮಾವತಿಯಲ್ಲಿ 56%, ಕೆಆರ್‌ಎಸ್‌ಯಲ್ಲಿ 54% ಹಾಗೂ ಕಬಿನಿ-96% ನೀರು ಇದೆ ಎಂಬ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದಿತು. ವರದಿ ಆಧರಿಸಿ ಸರ್ವಪಕ್ಷಗಳೊಂದಿಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಿಂದ ಅಷ್ಟು ಪ್ರಮಾಣದ ನೀರನ್ನು ಬಿಡಲು ಅಸಾಧ್ಯ ಎಂದು ಕಾಂಗ್ರೆಸ್ ನಾಯಕರು ಪ್ರಸ್ತಾಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ (Congress Government) ಧೋರಣೆಯನ್ನು ಖಂಡಿಸಿದವು, ಮುಂಚೆಯಿಂದಲೂ ಕೇಳಿದಷ್ಟು ನೀರು ಬಿಟ್ಟು ಅಭ್ಯಾಸ ಮಾಡಿಬಿಟ್ಟಿದ್ದೀರಿ. ಪ್ರತೀ ಸಲವೂ ಕಾವೇರಿ ನೀರು ನಿರ್ವಹಣಾ ಸಮಿತಿ ಹಾಗೂ ಕಾವೇರಿ ನೀರು ನಿಯಂತ್ರಣಾ ಮಡಳಿಗಳ ಆದೇಶ ಜಾರಿ ಮಾಡಿದ್ರಿ. ಸರ್ಕಾರದ ಈ ನಡೆಯಿಂದ ನಮ್ಮ ನೀರು ತಮಿಳುನಾಡಿಗೆ ಹರಿದುಹೋಯ್ತು. ನಮ್ಮ ರೈತರಿಗೆ ಸಮಸ್ಯೆ ಆದರೂ ಸರ್ಕಾರ ತಲೆಕೆಡಿಸಿಕೊಳ್ಳಲಿಲ್ಲ. ನಮ್ಮ ದನಿ, ರೈತರ ದನಿ ನೀವು ಕೇಳಿಸಿಕೊಳ್ಳಲೇ ಇಲ್ಲ ಎಂದು ವಿಪಕ್ಷ ನಾಯರು ಆರೋಪಿಸಿದರು. ಬಳಿಕ ಸರ್ವಪಕ್ಷಗಳು ಸಿಡಬ್ಲ್ಯೂಆರ್‌ಸಿ ಶಿಫಾರಸ್ಸನ್ನು ಮರುಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಿದವು.
ಪ್ರಮುಖ ನಾಯಕರು ಭಾಗಿ:
ಸರ್ವಪಕ್ಷ ಸಭೆಯಲ್ಲಿ ನಾಯಕ ಆರ್. ಅಶೋಕ್, ದೆಹಲಿ ಪ್ರತಿನಿಧಿ ಜಯಚಂದ್ರ, ಸಚಿವ ಚೆಲುವರಾಯಸ್ವಾಮಿ, ಜವರಾಯೇಗೌಡ, ಸದಾನಂದಗೌಡ, ಕಾಂಗ್ರೆಸ್ ನಾಯಕರಾದ ಶಿವಲಿಂಗೇಗೌಡ, ದಿನೇಶ್ ಗುಂಡೂರಾವ್, ಸುನೀಲ್ ಬೋಸ್, ಯತೀಂದ್ರ ಸಿದ್ದರಾಮಯ್ಯ, ಪರಮೇಶ್ವರ್, ಯು.ಬಿ ವೆಂಕಟೇಶ್, ಹೆಚ್.ಸಿ ಮಹದೇವಪ್ಪ, ಕೆ.ಜೆ ಜಾರ್ಜ್, ಪೊನ್ನಣ್ಣ, ಕೃಷ್ಣಭೈರೇಗೌಡ, ಮೈಸೂರಿನ ಬಿಜೆಪಿ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಸಿಟಿ ರವಿ, ಮಂಜುಳಾ ಲಿಂಬಾವಳಿ, ಶ್ರೀವತ್ಸವ, ಜಿ.ಟಿ ದೇವೇಗೌಡ, ಸುರೇಶ್ ಬಾಬು, ಭೋಜೇಗೌಡ, ಶರವಣ, ಮಂಜೇಗೌಡ ಪಾಲ್ಗೊಂಡಿದ್ದರು. ಇದರೊಂದಿಗೆ ಕಾವೇರಿ ಭಾಗದ ಶಾಸಕರು, ಪರಿಷತ್ ಸದಸ್ಯರು, ಸಂಸದರು, ಅಡ್ವೋಕೇಟ್ ಜನರಲ್, ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಸಿಎಸ್ ಸೇರಿ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಸಭೆಗೆ ಕೇಂದ್ರ ಸಚಿವರ ಗೈರು:
ಮಹ್ವದ ಸಭೆಗೆ ಕೇಂದ್ರ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ, ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಪ್ರಹ್ಲಾದ್ ಜೋಶಿ, ಸಂಸದರಾದ ತೇಜಸ್ವಿ ಸೂರ್ಯ, ಡಾ.ಸಿ.ಎನ್ ಮಂಜುನಾಥ್, ಪಿ.ಸಿ ಮೋಹನ್ ಗೈರಾಗಿದ್ದರು.