ಜಿಲ್ಲೆಗಳಲ್ಲಿ ಸರ್ಕಾರಿ ಗೋಶಾಲೆ ಆರಂಭಕ್ಕೆ ಡಿಸೆಂಬರ್ ಡೆಡ್‌ಲೈನ್: ಪ್ರಭು ಚೌಹಾಣ್

Public TV
3 Min Read
Prabhu Chauhan 2

ಬೆಂಗಳೂರು: ಎಲ್ಲಾ ಸರ್ಕಾರಿ ಜಿಲ್ಲಾ ಗೋಶಾಲೆಗಳನ್ನು (Government Goshala) ಡಿಸೆಂಬರ್ ಅಂತ್ಯದೊಳಗೆ ಆರಂಭಿಸುವಂತೆ ಪಶುಸಂಗೋಪನೆ ಇಲಾಖಾ ಅಧಿಕಾರಿಗಳಿಗೆ ಪಶುಸಂಗೋಪನೆ ಸಚಿವ ಪ್ರಭು ಬಿ ಚೌಹಾಣ್ (Prabhu Chauhan) ಗಡುವು ನೀಡಿದರು.

ವಿಕಾಸಸೌಧದ ಸಮ್ಮೇಳನ ಸಭಾಂಗಣದಲ್ಲಿ ಪಶುಸಂಗೋಪನೆ ಇಲಾಖಾ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರಿ ಜಿಲ್ಲಾ ಗೋಶಾಲೆಗಳ ಪ್ರಸ್ತುತ ಸ್ಥಿತಿಗತಿ ಕುರಿತು ಮಾಹಿತಿ ಪಡೆದು ಅಧಿಕಾರಿಗಳ ಕಾರ್ಯವೈಖರಿಗೆ ಸಿಡಿಮಿಡಿಗೊಂಡರು.

Prabhu Chauhan

ಜಿಲ್ಲೆಗೊಂದು ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗೃತ ಕೋಶ ವಿಭಾಗದ ಅಪರ ನಿರ್ದೇಶಕ ಡಾ. ಶ್ರೀನಿವಾಸ್ ಅವರು, ಕಾರ್ಯನಿರ್ವಹಿಸುತ್ತಿರುವ 5 ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ನೀಡಲಾಗಿದೆ. 12 ಗೋಶಾಲೆಗಳು ಪೂರ್ಣಗೊಂಡಿವೆ. 8 ಪೂರ್ಣಗೊಳ್ಳುವ ಹಂತದಲ್ಲಿದ್ದು, ಇನ್ನುಳಿದವುಗಳು ನಿರ್ಮಾಣ ಹಂತದಲ್ಲಿವೆ ಎಂದು ಮಾಹಿತಿ ನೀಡಿದರು. ಈ ವೇಳೆ ಗರಂ ಆದ ಸಚಿವರು, ನನಗೆ ಲೆಕ್ಕ ಬೇಡ, ನಿರ್ಮಾಣ ಕಾಮಗಾರಿ ಮುಂದಿನ ವರ್ಷಕ್ಕೆ ಮುಂದುವರಿಯದೇ ಇದೇ ವರ್ಷದ ಅಂತ್ಯದೊಳಗೆ ಎಲ್ಲಾ ಗೋಶಾಲೆಗಳಲ್ಲಿ ಜಾನುವಾರುಗಳಿಗೆ ಆಶ್ರಯ ನೀಡಬೇಕು ಎಂದು ಅಂತಿಮ ಡೆಡ್‌ಲೈನ್ ನೀಡಿದರು.

ಸಂಚಾರಿ ಪಶು ಚಿಕಿತ್ಸಾ ವಾಹನಗಳು ಜಾನುವಾರುಗಳ ಆರೋಗ್ಯ ಸಮಸ್ಯೆಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಈ ಬಗ್ಗೆ ನೀವು ಏನು ಕೆಲಸ ಮಾಡುತ್ತಿದ್ದೀರಿ? ಜಾನುವಾರು ಅಂಬುಲೆನ್ಸ್ ಇದು ಜನಪರ ಯೋಜನೆಯಾಗಿದ್ದು ಕುಂಠಿತಗೊಳ್ಳಬಾರದು ಎಂದು ಅಧಿಕಾರಿಗಳ ವಿರುದ್ಧ ಸಚಿವ ಪ್ರಭು ಚೌಹಾಣ್ ಅಸಮಾಧಾನ ವ್ಯಕ್ತಪಡಿಸಿದರು.

Prabhu Chauhan 3

ಸಭೆಗೆ ಮಾಹಿತಿ ನೀಡಿದ ಜಾನುವಾರು ಆರೋಗ್ಯ ವಿಭಾಗದ ಅಪರ ನಿರ್ದೇಶಕ ಡಾ.ಪಿ.ಟಿ ಶ್ರೀನಿವಾಸ್ ಅವರು, ಬೆಂಗಳೂರು ಮತ್ತು ಬೆಳಗಾವಿ ವಿಭಾಗದಲ್ಲಿ 167 ಅಂಬುಲೆನ್ಸ್ ಕಾರ್ಯನಿರ್ವಹಿಸುತ್ತಿವೆ. ಮೈಸೂರು ಮತ್ತು ಕಲಬುರಗಿ ವಿಭಾಗದಲ್ಲಿ ಶೀಘ್ರದಲ್ಲೇ ಅಂಬುಲೆನ್ಸ್ ಆರಂಭಿಸಲಾಗುವುದು. ಡ್ರೈವರ್ ಮತ್ತು ಸಿಬ್ಬಂದಿ ನೇಮಕಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ರಾಜ್ಯದಲ್ಲಿ ಚರ್ಮಗಂಟು ರೋಗ ಉಲ್ಬಣದಿಂದ ಜಾನುವಾರುಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಚಿವ ಪ್ರಭು ಚೌಹಾಣ್ ಪ್ರಶ್ನಿಸುತ್ತಿದ್ದಂತೆ ಉತ್ತರಿಸಿದ ನಿರ್ದೇಶಕ ಡಾ. ಮಂಜುನಾಥ್ ಪಾಳೇಗಾರ್, ಗಡಿ ಭಾಗದಲ್ಲಿ ವೈರಾಣು ಹರಡುವಿಕೆಯಿಂದ ಸಾವಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜ್ಯದಲ್ಲಿ ವ್ಯಾಪಕವಾಗಿ ಚರ್ಮಗಂಟು ರೋಗಕ್ಕೆ 51 ಲಕ್ಷ ಲಸಿಕೆ ನೀಡಲಾಗಿದೆ. ಸಿಬ್ಬಂದಿ ಇಲ್ಲದಿರುವುದರಿಂದ ಲಸಿಕೆ ನೀಡುವ ಪ್ರಕ್ರಿಯೆ ತಡವಾಗುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಲೈಸೆನ್ಸ್ ರಿನ್ಯೂವಲ್ ಮಾಡಿಲ್ಲ- ಅಂಗಡಿಯ ವ್ಯಾಪಾರಿಗೆ ಜನಪ್ರತಿನಿಧಿಯಿಂದ ಹಲ್ಲೆ

Prabhu Chauhan 1

ಸರ್ಕಾರದ ಕಾರ್ಯದರ್ಶಿ ಡಾ. ಸಲ್ಮಾ ಕೆ. ಫಾಹೀಮ್ ಮಾತನಾಡಿ, ಚರ್ಮಗಂಟು ರೋಗ ಮತ್ತು ಕಾಲುಬಾಯಿ ರೋಗ ಲಸಿಕಾಕರಣಕ್ಕೆ ಪಶುವೈದ್ಯ ವಿದ್ಯಾರ್ಥಿಗಳು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳನ್ನು ಒದಗಿಸುವಂತೆ ಪಶು ವಿವಿ ಕುಲಪತಿ ಡಾ. ವೀರಣ್ಣ ಅವರಿಗೆ ಸೂಚಿಸಿದರು. ಈಗಾಗಲೇ ಪಶುವೈದ್ಯ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳನ್ನು ಲಸಿಕಾಕರಣ ಮತ್ತು ರೋಗ ನಿಯಂತ್ರಣ ಪ್ರಕ್ರಿಯೆಗಳಲ್ಲಿ ತೊಡಗಿಸಲಾಗುತ್ತಿದೆ ಎಂದು ಡಾ. ವೀರಣ್ಣ ವಿವರಿಸಿದರು.

400 ಪಶು ವೈದ್ಯಾಧಿಕಾರಿಗಳು ಮತ್ತು 250 ಕಿರಿಯ ಪಶು ವೈದ್ಯಕೀಯ ಪರೀಕ್ಷಕರ ನೇಮಕಾತಿ ಪ್ರಕ್ರಿಯೆ ವಿಳಂಬದ ಕುರಿತು ತರಾಟೆ ತೆಗೆದುಕೊಂಡ ಸಚಿವ ಪ್ರಭು ಚೌಹಾಣ್ ಅವರ ಪ್ರಶ್ನೆಗೆ ಉತ್ತರಿಸಿದ ಇಲಾಖೆ ಆಯುಕ್ತೆ ಎಸ್. ಅಶ್ವಥಿ, ಪ್ರಕರಣ ಉಚ್ಚ ನ್ಯಾಯಾಲಯದಲ್ಲಿದ್ದು, ಅಂತಿಮ ಆದೇಶ ಹಂತದಲ್ಲಿದೆ. ಕಿರಿಯ ಪಶು ವೈದ್ಯಕೀಯ ಪರೀಕ್ಷಕರ ಆಯ್ಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ತಿಂಗಳ 28ರಂದು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನಿಗದಿ ಪಡಿಸಿದೆ ಎಂದರು.

ಹಿರಿಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕು. ಜಾನುವಾರುಗಳ ರಕ್ಷಣೆಗೆ ನಾವೆಲ್ಲರೂ ಒಗ್ಗೂಡಿ ಶ್ರಮಿಸೋಣ. ನನಗೆ ನನ್ನ ಹೆಸರು ಶ್ರೇಯಸ್ಸು ಬೇಡ. ಬದಲಾಗಿ ಪಶುಸಂಗೋಪನೆ ಇಲಾಖೆ ರಾಜ್ಯದಲ್ಲಿ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಜನ ಮಾತನಾಡುವಂತಾಗಬೇಕು ಎಂದು ಸಚಿವ ಪ್ರಭು ಚೌಹಾಣ್ ಸಲಹೆ ನೀಡಿದರು. ಇದನ್ನೂ ಓದಿ: ದಿಢೀರ್ ಕಾಂಗ್ರೆಸ್‌ಗೆ ಗುಡ್‌ಬೈ – 300ಕ್ಕೂ ಹೆಚ್ಚು ಕಾರ್ಯಕರ್ತರು BJP ಸೇರ್ಪಡೆ

ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಡಾ. ಸಲ್ಮಾ ಕೆ. ಪಾಹೀಮ್, ಆಯುಕ್ತೆ ಎಸ್. ಅಶ್ವಥಿ, ನಿರ್ದೇಶಕ ಡಾ. ಮಂಜುನಾಥ್ ಪಾಳೇಗಾರ್, ಕರ್ನಾಟಕ ಪಶುವೈದ್ಯಕೀಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ವೀರಣ್ಣ ಸೇರಿದಂತೆ ವಿವಿಧ ವಿಭಾಗಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *