ಭೂಮಿಯ ಮೇಲೆ ಹೊಟ್ಟೆಪಾಡಿಗಾಗಿ ತಮ್ಮನ್ನು ತಾವೇ ಮಾರಿಕೊಂಡು ಬದುಕಿದವರಿದ್ದಾರೆ. ಒಂದು ಹೊತ್ತಿನ ಊಟಕ್ಕಾಗಿ ಹಗಲು, ರಾತ್ರಿ ದುಡಿದು, ಹೊಟ್ಟೆ ತುಂಬಿಸಿಕೊಂಡಿದ್ದಾರೆ. ಇದರ ಮಧ್ಯೆ ಗುಲಾಮಗಿರಿ ಎಂಬುದು ಇವರೆಲ್ಲರ ಜೀವನವನ್ನೇ ಕಿತ್ತು ತಿಂದಿತು.
ಭಾರತದಲ್ಲಿ ಹಾಗೂ ಜಗತ್ತಿನಲ್ಲಿ ಗುಲಾಮಗಿರಿ ಎಂಬುದು ಒಂದು ದುರಂತವೇ ಹೌದು. ಹೊಟ್ಟೆಪಾಡಿಗಾಗಿ ಬೇರೆ ದಾರಿ ಇಲ್ಲದೇ ಇನ್ನೊಬ್ಬರ ಒಡೆತನದಲ್ಲಿ ಇದ್ದುಕೊಂಡು ಜೀವನ ಸಾಗಿಸಬೇಕಿತ್ತು. ಎಷ್ಟೇ ಕಷ್ಟವಾದರೂ ಕೂಡ ಅದನ್ನು ನುಂಗಿಕೊಂಡು ತಮ್ಮ ಸ್ವತಂತ್ರವನ್ನು ಕಳೆದುಕೊಂಡು ಬದುಕಬೇಕಿತ್ತು. ಇದೆಲ್ಲವೂ ಅದೇ ಗುಲಾಮಗಿರಿಯ ಆಡಳಿತ.
ಒಬ್ಬ ವ್ಯಕ್ತಿ ಇನ್ನೊಬ್ಬ ವ್ಯಕ್ತಿಯ ಒಡೆತನದಲ್ಲಿ ಇದ್ದುಕೊಂಡು, ಸಾಮಾನ್ಯ ವ್ಯಕ್ತಿಗಳಂತೆ ಬದುಕುದೇ ಯಾವುದೇ ರೀತಿಯ ಸ್ವತಂತ್ರ ಇಲ್ಲದೇ ಹಾಗೂ ತನ್ನೆಲ್ಲ ಹಕ್ಕುಗಳನ್ನು ಕಳೆದುಕೊಂಡು ಬದುಕಬೇಕಿತ್ತು. ಇದನ್ನು ಗುಲಾಮಗಿರಿ ಎನ್ನಲಾಗುತ್ತದೆ. ಉದಾಹರಣೆಗೆ, ಯಾವುದಾದರೂ ಅಪಚಾರ ಮಾಡಿದರೆ ಅಥವಾ ತಪ್ಪು ಮಾಡಿದರೆ ಅಂತವರನ್ನು ಗುಲಾಮರನ್ನಾಗಿ ಇಟ್ಟುಕೊಳ್ಳಲಾಗುತ್ತಿತ್ತು. ಇನ್ನು ಯುದ್ಧದಲ್ಲಿ ಸೋತವರನ್ನು ಅಥವಾ ಅಕ್ರಮವಾಗಿ ನಮ್ಮ ಪ್ರದೇಶಕ್ಕೆ ಪ್ರವೇಶ ಮಾಡಿದವರನ್ನು ಹಿಡಿದು ಗುಲಾಮರನ್ನಾಗಿ ಬಳಸಲಾಗುತ್ತಿತ್ತು. ಈ ಪದ್ಧತಿ ಮೊದಲು ಈಜಿಪ್ಟ್, ಗ್ರೀಸ್, ರೋಮ್, ಮಧ್ಯಪ್ರಾಚ್ಯ ಹಾಗೂ ಏಷ್ಯಾದ ಕೆಲವೆಡೆ ಕಂಡು ಬರುತ್ತಿತ್ತು.
16ನೇ ಶತಮಾನದ ಬಳಿಕ ಬ್ರಿಟನ್, ಫ್ರಾನ್ಸ್, ಸ್ಪೇನ್, ಪೋರ್ಚುಗಲ್, ಆಫ್ರಿಕಾ, ಅಮೆರಿಕ, ಕೆರಿಬಿಯನ್ ದ್ವೀಪಗಳು ಹಾಗೂ ದಕ್ಷಿಣ ಅಮೇರಿಕಾದ ನೌಕೆಗಳಲ್ಲಿ ಜನರನ್ನ ಕಳುಹಿಸಿ ಕೃಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ 400 ವರ್ಷಗಳ ಕಾಲ ಮಿಲಿಯನ್ಗಟ್ಟಲೆ ಜನರು ಗುಲಾಮಗಿರಿಗೆ ಬಲಿಯಾದರು.
ಹೀಗೆ ಬೆಳೆದು ಬಂದ ಹಾಗೆ ಮುಂದೆ ಭಾರತದಲ್ಲಿ ಗುಲಾಮಗಿರಿ ಪದ್ಧತಿ, ಬೆಳೆದು ಬಂತು. ಪ್ರಾಚೀನ ಭಾರತದಲ್ಲಿ, ಮಧ್ಯಯುಗ ಹಾಗೂ ಬ್ರಿಟಿಷರ ಕಾಲದಲ್ಲಿ ಗುಲಾಮಗಿರಿ ಜಾರಿಯಲ್ಲಿತ್ತು. ಈ ಸಮಯದಲ್ಲಿ ಸಾಲ ಕಟ್ಟದೇ ಇರುವವರನ್ನು ಗುಲಾಮರನ್ನಾಗಿ ಇಟ್ಟುಕೊಳ್ಳುತ್ತಿದ್ದರು. ಇನ್ನು ಕೆಲ ಜಾತಿಯವರನ್ನ ಗುಲಾಮಗಿರಿಗೆ ಎಂದು ಸೀಮಿತವಾಗಿ ಇರಿಸುತ್ತಿದ್ದರು. ಅದಲ್ಲದೆ ರಾಜ ಮನೆತನಗಳಲ್ಲಿ, ಅರಮನೆಗಳಲ್ಲಿ ಗುಲಾಮರನ್ನ ಇಟ್ಟುಕೊಳ್ಳುತ್ತಿದ್ದರು.

ಗುಲಾಮಗಿರಿಯಲ್ಲಿ ಎರಡು ವಿಧಾನಗಳಿದ್ದವು. ಒಂದು ಸಾಮಾನ್ಯವಾಗಿ ಮನೆಯ ಹೊರಗೆ ಕೆಲಸ ಮಾಡುವುದು ಅಂದರೆ ಹುಲ್ಲು ತೆಗೆಯುವುದು, ಊಟದಲ್ಲಿ ಕೆಲಸ ಮಾಡುವುದು ಅಥವಾ ಮನೆ ಕೆಲಸವನ್ನು ಮಾಡುವುದು ಇನ್ನಿತರ ಸೇವಗಳನ್ನ ಮಾಡುತ್ತಿದ್ದರು. ಇನ್ನೊಂದು ಗುಲಾಮರು ಕೆಲಸ ಮಾಡುತ್ತಾ ಆ ಮನೆಯ ದತ್ತುಪುತ್ರರಾಗಿ ಅಥವಾ ಮಹಿಳೆಯರಿದ್ದರೆ ಉಪ ಪತ್ನಿಯರಾಗಿ ಬದಲಾಗುತ್ತಿದ್ದರು. ಅವರು ಆ ಮನೆಗೆ ಮುಂದಿನ ಉತ್ತರಾಧಿಕಾರಿಗಳಿಗೆ ಜನ್ಮ ನೀಡುತ್ತಿದ್ದರು. ಇನ್ನು ದಕ್ಷಿಣ ಆಫ್ರಿಕಾದಲ್ಲಿ ವರ್ಣಭೇದ ನೀತಿ ಅನುಸಾರವಾಗಿ ಗುಲಾಮಗಿರಿ ಜಾರಿಯಲ್ಲಿತ್ತು. ಈ ಮೂಲಕ ಜನಾಂಗೀಯ ಪ್ರತ್ಯೇಕತೆ ಮತ್ತು ದಬ್ಬಾಳಿಕೆ ಮಾಡಲಾಗುತ್ತಿತ್ತು. ಬಿಳಿಯರಿಗೆ ಹೆಚ್ಚಿನ ಆದ್ಯತೆ ನೀಡಿ ಕಪ್ಪು ಜನಾಂಗದವರನ್ನು ಗುಲಾಮರನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದರು.
ಗುಲಾಮಗಿರಿ ನಿರ್ಮೂಲನೆ;
ಅದಾದ ನಂತರ ದಿನಗಳಂತೆ ಗುಲಾಮಗಿರಿ ವ್ಯವಸ್ಥೆ ಕಡಿಮೆಯಾಗಲಾರಂಭಿಸಿತು. 18ನೇ ಶತಮಾನದಲ್ಲಿ ಯೂರೋಪ್ನಲ್ಲಿ ಗುಲಾಮಗಿರಿ ವಿರೋಧ ಚಳುವಳಿ ಆರಂಭವಾಯಿತು. 1807ರಲ್ಲಿ ಬ್ರಿಟನ್ ಗುಲಾಮಗಿರಿ ನಿಷೇಧಿಸಿತು. ಬಳಿಕ 1833 ರಲ್ಲಿ ಬ್ರಿಟನ್ ಗುಲಾಮಗಿರಿಯನ್ನು ಸಂಪೂರ್ಣವಾಗಿ ನಿಷೇಧಿಸಿತು.
ಇನ್ನು 1865ರಲ್ಲಿ ಅಮೇರಿಕಾ ಹಾಗೂ 19, 20ನೇ ಶತಮಾನದಲ್ಲಿ ಆಫ್ರಿಕಾ ಹಾಗೂ ಏಷ್ಯಾದ ಬಹುತೇಕ ಕಡೆ ಗುಲಾಮಗಿರಿಯನ್ನು ನಿಷೇಧಿಸಲಾಯಿತು. ಇನ್ನು 1950ರಲ್ಲಿ ಬಲವಂತದ ಕೆಲಸ, ಮಾನವ ಸಾಗಾಣಿ ಸಂಪೂರ್ಣ ನಿಷೇಧ ಹಾಗೂ ಗುಲಾಮಗಿರಿಯನ್ನು ಭಾರತದಲ್ಲಿ ನಿಷೇಧಿಸಲಾಯಿತು. ನಂತರ 1976 ರಲ್ಲಿ ಗುಲಾಮಗಿರಿ ನಿರ್ಮೂಲನಾ ಕಾಯ್ದೆಯನ್ನ ಜಾರಿ ತರುವ ಮೂಲಕ ಸಂಪೂರ್ಣವಾಗಿ ರದ್ದುಗೊಳಿಸಲಾಯಿತು.
1949ರಿಂದ ಡಿ.2ರಂದು ವಿಶ್ವ ಗುಲಾಮಗಿರಿ ನಿರ್ಮೂಲನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಸಂಸ್ಥೆ ಮಾನವ ಸಾಗಾಣಿ, ವೇಶ್ಯಾವಾಟಿಕೆ ಮತ್ತು ಶೋಷಣೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ದಿನವನ್ನು ಚಾಲ್ತಿಗೆ ತರಲಾಯಿತು. ಇದರ ಅಡಿಯಲ್ಲಿ ಬಲವಂತದ ಕೆಲಸ, ಬಾಲ ಕಾರ್ಮಿಕ ಪದ್ಧತಿ, ಮಾನವ ಸಾಗಣೆ ಇವೆಲ್ಲವನ್ನ ನಿಷೇಧಿಸಿತು.
ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಮಾಹಿತಿ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಬಲವಂತದ ಕೆಲಸ ಹಾಗೂ ಬಲವಂತದ ವಿವಾಹ ಗಮನಾರ್ಹವಾಗಿ ಹೆಚ್ಚಾಗಿದೆ. 2016ರಲ್ಲಿ ವಿಶ್ವದಾದ್ಯಂತ 10 ಮಿಲಿಯನ್ ಜನ ಗುಲಾಮರಾಗಿ ಕೆಲಸ ಮಾಡುತ್ತಿದ್ದರು. ಆದರೆ 2021 ರಲ್ಲಿ ಇದು 50 ಮಿಲಿಯನ್‌ಗೆ ತಲುಪಿದೆ.
ಈ ಮೊದಲು ಒತ್ತಡದ ಕೆಲಸ, ದಬ್ಬಾಳಿಕೆ ಇವುಗಳ ಮೂಲಕ ಗುಲಾಮರನ್ನಾಗಿ ಇಟ್ಟುಕೊಳ್ಳುತ್ತಿದ್ದರು. ಆದರೆ ಈಗಿನ ಆಧುನಿಕ ಜಗತ್ತಿನಲ್ಲಿ ಮಾನವ ಕಳ್ಳ ಸಾಗಣೆ, ವೇಶ್ಯಾವಾಟಿಕೆ ಮತ್ತು ಬಲವಂತದ ವಿವಾಹ ಸೇರಿದಂತೆ ಇನ್ನಿತರ ವಿಧಾನಗಳಲ್ಲಿ ಗುಲಾಮಗಿರಿ ನಡೆಸಲಾಗುತ್ತದೆ.





