– 2016 ರಲ್ಲಿ ಕಣ್ಮರೆಯಾಗಿದ್ದ ವಿಮಾನದಲ್ಲಿದ್ರು 29 ಯೋಧರು!
ನವದೆಹಲಿ: 2016ರ ಜುಲೈ 22ರಂದು ಬಂಗಾಳಕೊಲ್ಲಿಯಲ್ಲಿ ಕಾರ್ಯಾಚರಣೆ ವೇಳೆ ನಾಪತ್ತೆಯಾಗಿದ್ದ ಭಾರತೀಯ ವಾಯುಪಡೆಯ An-32 ವಿಮಾನದ (IAFs AN-32 Aircraft) ಅವಶೇಷಗಳು 8 ವರ್ಷಗಳ ನಂತರ ಪತ್ತೆಯಾಗಿವೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ಶುಕ್ರವಾರ ತಿಳಿಸಿದೆ. ಇದೇ ವಿಮಾನದಲ್ಲಿ ಮಂಗಳೂರಿನ ಗುರುವಾಯನಕೆರೆಯ ಯೋಧ ಏಕನಾಥ ಶೆಟ್ಟಿ (Eknath Shetty) ಕೂಡ ಇದ್ದರು.
Advertisement
ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಷನ್ ಟೆಕ್ನಾಲಜಿಯು ವಿಮಾನವನ್ನು ಪತ್ತೆಹಚ್ಚಲು ಸ್ವಾಯತ್ತ ನೀರೊಳಗಿನ ವಾಹನವನ್ನು (AUV) ಬಳಸಿದೆ. ಅಪಘಾತಕ್ಕೀಡಾಗಿದ್ದ ವಿಮಾನದ ಅವಶೇಷಗಳು ಚೆನ್ನೈ ಕರಾವಳಿಯಿಂದ ಸರಿಸುಮಾರು 140 ನಾಟಿಕಲ್ ಮೈಲುಗಳಷ್ಟು (ಅಂದಾಜು 310 ಕಿಮೀ) ಸಮುದ್ರದ ಆಳದಲ್ಲಿ ಪತ್ತೆಯಾಗಿದೆ. ಶೋಧದ ಚಿತ್ರಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗಿದೆ. An-32 ವಿಮಾನ ಎನ್ನುವುದಕ್ಕೆ ಸಾಕಷ್ಟು ಪುರಾವೆ ಸಿಕ್ಕಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮೋದಿಯಿಂದ ದೇಶದ ಅತಿ ಉದ್ದದ ಸಮುದ್ರ ಸೇತುವೆ ಲೋಕಾರ್ಪಣೆ – 2 ಗಂಟೆ ಪ್ರಯಾಣ 20 ನಿಮಿಷಕ್ಕೆ ಇಳಿಕೆ
Advertisement
Advertisement
ಬಹು-ಬೀಮ್ ಸೋನಾರ್, ಸಿಂಥೆಟಿಕ್ ಅಪರ್ಚರ್ ಸೋನಾರ್ ಮತ್ತು ಹೈ-ರೆಸಲ್ಯೂಶನ್ ಛಾಯಾಗ್ರಹಣ ಸೇರಿದಂತೆ ಬಹು ಪೇಲೋಡ್‌ಗಳನ್ನು ಬಳಸಿಕೊಂಡು 3,400 ಮೀ ಆಳದಲ್ಲಿ ಹುಡುಕಾಟ ನಡೆಸಲಾಗಿತ್ತು ಎಂದು ರಕ್ಷಣಾ ಸಚಿವಾಲಯ ಹೇಳಿದೆ.
Advertisement
ಘಟನೆ ಏನು?
2016 ರ ಜು.22 ರಂದು ಚೆನ್ನೈಯ ತಾಂಬರಂ ಏರ್‌ಬೇಸ್‌ನಿಂದ ಅಂಡಮಾನ್‌ನ ಪೋರ್ಟ್‌ಬ್ಲೇರ್ ನೆಲೆಗೆ ತೆರಳುತ್ತಿದ್ದ ಭಾರತೀಯ ವಾಯುಸೇನೆಯ ಎಎನ್-32 ಯುದ್ಧ ವಿಮಾನ ನಿಗೂಢವಾಗಿ ಕಣ್ಮರೆಯಾಗಿತ್ತು. ಚೆನ್ನೈನ ತಾಂಬರಂನಿಂದ ಬೆಳಿಗ್ಗೆ 8:30 ಕ್ಕೆ ಟೇಕ್ ಆಫ್ ಆಗಿತ್ತು. ಆದರೆ ಕೊಲ ಹೊತ್ತಿನಲ್ಲೇ ಸಂಪರ್ಕ ಕಳೆದುಕೊಂಡಿತ್ತು. ಕೊನೆಯ ಬಾರಿಗೆ 16 ನಿಮಿಷಗಳ ನಂತರ ಸಂಪರ್ಕಿಸಲಾಗಿತ್ತು ಎಂದು ರಕ್ಷಣಾ ಮೂಲಗಳು ತಿಳಿಸಿತ್ತು. ಇದನ್ನೂ ಓದಿ: ಫೆ.1ಕ್ಕೆ ಕೇಂದ್ರ ಹಣಕಾಸು ಬಜೆಟ್ – ಅಂದೇ ಬಜೆಟ್ ಮಂಡನೆ ಯಾಕೆ?
29 ಮಂದಿ ಯೋಧರು ಕಣ್ಮರೆ
ಈ ಯುದ್ಧ ವಿಮಾನದಲ್ಲಿ 29 ಮಂದಿ ಯೋಧರಿದ್ದರು. ಈ ಯೋಧರ ಪೈಕಿ ಕರ್ನಾಟಕದ ಏಕೈಕ ಯೋಧ ಏಕನಾಥ ಶೆಟ್ಟಿ ಕೂಡ ಕಣ್ಮರೆಯಾಗಿದ್ದರು. ಐಎಎಫ್‌ನ ನಾಪತ್ತೆಯಾದ ವಿಮಾನದಲ್ಲಿದ್ದವರು ಸತ್ತಿರಬಹುದು ಎಂದು ವಿಚಾರಣೆ ವೇಳೆ ನ್ಯಾಯಾಲಯ ತೀರ್ಮಾನಿಸಿತ್ತು. ವಿಮಾನವು ನೀರೊಳಗಿನ ಲೊಕೇಟರ್ ವ್ಯವಸ್ಥೆಯನ್ನು ಹೊಂದಿರಲಿಲ್ಲ. ಇದು ಹುಡುಕಾಟವನ್ನು ಕಷ್ಟಕರವಾಗಿಸಿತ್ತು.
ವಿಮಾನ ಪತ್ತೆಗಾಗಿ ಕೇಂದ್ರ ಸರ್ಕಾರ ಮತ್ತು ಮಿಲಿಟರಿ ತಜ್ಞರು 3 ತಿಂಗಳು ಕಾರ್ಯಾಚರಣೆ ನಡೆಸಿದ್ದರು. ಕಾರ್ಯಾಚರಣೆಗಾಗಿ ಪಿ-8ಎ, ಮೂರು ಡೋರ್ನಿಯರ್ ವಿಮಾನ, ಜಲಾಂತರ್ಗಾಮಿ, ನೌಕಾ ಸೇನೆಯ 12 ನೌಕೆಗಳನ್ನು ಬಳಸಲಾಗಿತ್ತು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಇದನ್ನೂ ಓದಿ: ದೆಹಲಿಯಲ್ಲೂ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಚರ್ಚೆ?
ಮಂಗಳೂರಿನ ಯೋಧ ಏಕನಾಥ್ ಶೆಟ್ಟಿಯೂ ಕಣ್ಮರೆ
2016 ರಲ್ಲಿ ನಿಗೂಢವಾಗಿ ಕಣ್ಮರೆಯಾದ ವಿಮಾನದಲ್ಲಿ ಸುಬೇದಾರ್ ಏಕನಾಥ ಶೆಟ್ಟಿ ಕೂಡ ಇದ್ದರು. ಏಕನಾಥ ಶೆಟ್ಟಿ ಮಂಗಳೂರಿನ ಗುರುವಾಯನಕೆರೆ ಮೂಲದವರು. 1985ರಲ್ಲಿ ಭಾರತೀಯ ಭೂ ಸೇನೆಗೆ ಸೇರ್ಪಡೆಯಾದ ಏಕನಾಥ ಶೆಟ್ಟಿ, ಎಮ್ಆರ್‌ಸಿಗೆ ಸೇರಿಕೊಂಡಿದ್ದರು. ಸೇನೆಯಲ್ಲಿ ಸುಬೇದಾರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. 1986ರಲ್ಲಿ ಶ್ರೀಲಂಕಾದಲ್ಲಿ ಭಾರತೀಯ ಶಾಂತಿಪಾಲನಾ ಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಅಲ್ಲದೇ ಜಮ್ಮು-ಕಾಶ್ಮೀರ, ಪಂಜಾಬ್, ಅರುಣಾಚಲ ಪ್ರದೇಶ ಮೊದಲಾದ ರಾಜ್ಯಗಳಲ್ಲೂ ಸೇವೆ ಸಲ್ಲಿಸಿದ್ದರು.
2009ರಲ್ಲಿ ಸೇವೆಯಿಂದ ನಿವೃತ್ತರಾಗಿದ್ದರು. ಆದರೆ ದೇಶ ಸೇವೆಗಾಗಿ ನಿವೃತ್ತಿ ಬಳಿಕವೂ ವಾಯುಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 2016 ರಲ್ಲಿ ನಡೆದ ದುರಂತದಲ್ಲಿ ಏಕನಾಥ ಶೆಟ್ಟಿ ಕೂಡ ಕಣ್ಮರೆಯಾದರು. ನಾಪತ್ತೆಯಾದ ಸೇನಾ ವಿಮಾನದ ಪತ್ತೆಗಾಗಿ ನಾಸಾ ಸೇರಿದಂತೆ ಭಾರತೀಯ ಮೂರೂ ಸೇನಾ ವಿಭಾಗಗಳು ಸತತವಾಗಿ ಹುಡುಕಾಟ ಮಾಡಿದ್ದವು. ಆದರೆ ಈ ಕ್ಷಣದವರೆಗೆಯೂ ಸಮುದ್ರದಲ್ಲಿ ಯೋಧರ ಮೃತ ದೇಹಗಳಾಗಲೀ, ವಿಮಾನದ ಕುರುಹುಗಳಾಗಲೀ ಕಂಡು ಬಂದಿರಲಿಲ್ಲ. ಹೀಗಾಗಿ ಭಾರತ ಸರ್ಕಾರ 29 ಯೋಧರೂ ಮೃತಪಟ್ಟಿದ್ದಾರೆ ಎಂದು ಹಿಂದೆ ಘೋಷಿಸಿತ್ತು. ಈಗ ವಿಮಾನಕ್ಕೆ ಸಂಬಂಧಿಸಿದ ಕುರುಹುಗಳು ಪತ್ತೆಯಾಗಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮೌನವಾಗಿರಲು ಸಾಧ್ಯವಿಲ್ಲ, ರೂಪಾ ಕ್ಷಮೆ ಕೇಳಬೇಕು- ಸುಪ್ರೀಂಕೋರ್ಟ್ ವಿಚಾರಣೆಯಲ್ಲಿ ಸಿಂಧೂರಿ ಬಿಗಿಪಟ್ಟು