ಬೆಳಗಾವಿ: ಐರ್ಲೆಂಡ್ ನಲ್ಲಿ ಬೆಳಗಾವಿ ಮೂಲದ ಸವಿತಾ ಹಾಲಪ್ಪನವರ್ ಅವರು ಗರ್ಭಪಾತಕ್ಕೆ ಬಲಿಯಾಗಿ ಇದೀಗ 5 ವರ್ಷಗಳೇ ಕಳೆದಿವೆ. ಅನೇಕ ವರ್ಷಗಳ ಕಾನೂನು ಹೋರಾಟದ ಬಳಿಕ ಈಗ ಐರ್ಲೆಂಡ್ ಸರ್ಕಾರ ಗರ್ಭಪಾತ ಬೆಕೋ, ಬೆಡವೋ ಎನ್ನುವುದರ ಬಗ್ಗೆ ಜನಾದೇಶ ಸಂಗ್ರಹಕ್ಕೆ ಮುಂದಾಗಿದೆ.
ಈ ಬಗ್ಗೆ ಐರ್ಲೆಂಡ್ ದೇಶದಲ್ಲಿ ಜನಾದೇಶ ನಡೆಯಲಿದ್ದು, ಶನಿವಾರ ಗರ್ಭಪಾತ ನಿಷೇಧ ಕಾನೂನು ತಿದ್ದುಪಡಿ ಕುರಿತು ನಿರ್ಧಾರ ಹೊರ ಬೀಳಲಿದೆ. ಈ ಕುರಿತು ವಿಶ್ವವೇ ಐರ್ಲೆಂಡ್ ದೇಶದ ಜನಾದೇಶದತ್ತ ಎದುರು ನೋಡುತ್ತಿದೆ.
ಏನಿದು ಪ್ರಕರಣ?:
ಬೆಳಗಾವಿಯ ಶ್ರೀನಗರದ ನಿವಾಸಿಯಾಗಿದ್ದ ಸವಿತಾರನ್ನು ವೈದ್ಯ ಪ್ರವೀಣ್ ಜತೆಗೆ ಮದುವೆ ಮಾಡಿಕೊಡಲಾಗಿತ್ತು. ವೃತ್ತಿಯಲ್ಲಿ ಇಬ್ಬರು ವೈದ್ಯರಾಗಿದ್ದರಿಂದ ಉದ್ಯೋಗ ಅರಸಿ ದೂರದ ಐರ್ಲೆಂಡ್ ದೇಶಕ್ಕೆ ತೆರಳಿದ್ದರು. ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸವಿತಾಗೆ ಹೊಟ್ಟೆಯಲ್ಲಿ ನಂಜಾಗಿತ್ತು. ಗರ್ಭಪಾತ ಮಾಡಿದರೆ ಸವಿತಾ ಬದುಕುತ್ತಿದ್ದರು. ಆದರೆ ಈ ಚಿಕಿತ್ಸೆಗೆ ಅಲ್ಲಿನ ಗರ್ಭಪಾತ ನಿಷೇಧ ಕಾನೂನು ಅಡ್ಡಿಯಾಗಿತ್ತು.
ಐರ್ಲೆಂಡ್ ಕ್ಯಾತೊಲಿಕ್ ದೇಶವಾಗಿದ್ದರಿಂದ ಗರ್ಭಪಾತಕ್ಕೆ ಅವಕಾಶ ನಿರಾಕರಿಸಿದ್ದರು. ಇದರಿಂದ ದಂತವೈದ್ಯೆ ಸವಿತಾ ಹಾಲಪ್ಪನವರ್ ಅಕ್ಟೋಬರ್ 28, 2013 ಮೃತಪಟ್ಟಿದ್ದರು. ಸವಿತಾ ಹಾಲಪ್ಪನವರ್ ಅವರ ಸಾವು ಪ್ರಕರಣ ಇಡೀ ವಿಶ್ವದಲ್ಲಿಯೇ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಐರ್ಲೆಂಡ್ ದೇಶದ ಕಾನೂನಿನ ವಿರುದ್ಧ ಆಕ್ರೋಶ ವ್ಯಕ್ತವಾಗುವಂತೆ ಮಾಡಿತ್ತು. ಐರ್ಲೆಂಡ್ ದೇಶದ ಮಾನವೀಯತೆ ಮತ್ತು ಸಂಪ್ರದಾಯದ ಬಗ್ಗೆ ವ್ಯಾಪಕ ಟೀಕೆ ಟಿಪ್ಪಣಿಗಳು ಕೇಳಿ ಬಂದಿದ್ದವು.
ಮೃತ ಸವಿತಾ ಕುಟುಂಬಸ್ಥರು ಸಹ ಮಗಳ ಸಾವಿನ ನ್ಯಾಯಕ್ಕಾಗಿ ಕಾನೂನು ಹೋರಾಟ ನಡೆಸಿದ್ದರು. ಇದೀಗ ಐರ್ಲೆಂಡ್ ಸರ್ಕಾರ ಗರ್ಭಪಾತ ಮೇಲಿರುವ ನಿಷೇಧ ಕಾನೂನು ತಿದ್ದುಪಡಿ ಮಾಡಲು ಜನಾದೇಶ ಸಂಗ್ರಹಿಸಲು ಮುಂದಾಗಿದೆ. ಇಂದು ಐರ್ಲೆಂಡ್ ದೇಶದಲ್ಲಿ ಜನಮತ ಸಂಗ್ರಹ ನಡೆಯಲಿದೆ. ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಮೃತ ಸವಿತಾ ಹಾಲಪ್ಪನವರ ತಂದೆ ಅಂದಾನಪ್ಪ ಯಾಳಗಿ, ಅಲ್ಲಿನ ಜನ ಗರ್ಭಪಾತ ನಿಷೇಧ ಕಾನೂನಿನ ವಿರುದ್ಧವಾಗಿ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ. ನನ್ನ ಮಗಳಿಗೆ ಆಗಿರುವ ಅನ್ಯಾಯ ಮತ್ಯಾವ ಕುಟುಂಬಕ್ಕೆ ಆಗದಂತೆ ತಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಇಂದು ಸಂಗ್ರಹವಾದ ಜನಮತ ಇದೇ ಶನಿವಾರ(ನಾಳೆ) ಪ್ರಕಟವಾಗಲಿದೆ. ಈ ಜನಮತದ ಬಗ್ಗೆ ಇಡೀ ಜಗತ್ತು ಕುತೂಹಲ ಹೊಂದಿದ್ದು, ಐರ್ಲೆಂಡ್ ಸರ್ಕಾರ ಭಾರತದ ಮಹಿಳೆಯೊಬ್ಬರ ಸಾವಿನಿಂದ ಎಚ್ಚೆತ್ತುಕೊಂಡು ಗರ್ಭಪಾತ ನಿಷೇಧ ಕಾಯ್ದೆ ರದ್ದುಗೊಳಿಸುತ್ತಾ ಎನ್ನುವುದು ಕುತೂಹಲ ಮೂಡಿಸಿದೆ.