ರಾಯಚೂರು: ಬರಗಾಲದ ಬೇಸಿಗೆ ಹಿನ್ನೆಲೆ ನೀರು ಅರಿಸಿ ಗ್ರಾಮಕ್ಕೆ ಬಂದ ವಾನರ ಸೈನ್ಯ ನೀರು ಇಲ್ಲದೆ, ತಪ್ಪಿಸಿಕೊಳ್ಳಲು ದಾರಿಯಿಲ್ಲದೆ ಪ್ರಾಣವನ್ನೇ ಬಿಟ್ಟಿರುವ ಹೃದಯ ವಿದ್ರಾವಕ ಘಟನೆ ರಾಯಚೂರಿನ ಗಧಾರ್ ಗ್ರಾಮದಲ್ಲಿ ನಡೆದಿದೆ.
Advertisement
ಮಂಗನಿಂದ ಮಾನವ ಅಂತಾರೆ, ಮಂಗಗಳನ್ನ ದೇವರಿಗೂ ಹೋಲಿಸ್ತಾರೆ ಆದ್ರೆ, ಮಾನವನ ಯಡವಟ್ಟಿನಿಂದ ಮಂಗಗಳ ಮಾರಣಹೋಮವೇ ನಡೆದಂತಾಗಿದೆ. ಒಂದಲ್ಲ ಎರಡಲ್ಲಾ 14 ಮಂಗಗಳು ಜಿಲ್ಲಾ ಪಂಚಾಯ್ತಿ ಯಡವಟ್ಟಿನಿಂದ ಚಿತ್ರಹಿಂಸೆ ಅನುಭವಿಸಿ ಸಾವನ್ನಪ್ಪಿವೆ.
Advertisement
Advertisement
ಆಹಾರವಿಲ್ಲದೇ ಮೃತಪಟ್ಟ ವಾನರ ಸೈನ್ಯ: ಸುಮಾರು 15 ದಿನಗಳ ಹಿಂದೆ ಗ್ರಾಮಕ್ಕೆ ಬಂದಿದ್ದ ಮಂಗಗಳು ನೀರನ್ನ ಹರಿಸಿ ನೂತನವಾಗಿ ನಿರ್ಮಾಣಗೊಂಡ ಸಾರ್ವಜನಿಕ ನೀರಿನ ಟ್ಯಾಂಕ್ ಹತ್ತಿವೆ. ಟ್ಯಾಂಕ್ ನಿರ್ಮಾಣಗೊಂಡು ವರ್ಷವಾದ್ರೂ ಸಾರ್ವಜನಿಕರಿಗೆ ನೀರು ಹರಿಸದೆ ಜಿಲ್ಲಾಪಂಚಾಯ್ತಿ ಕನಿಷ್ಠ ಟ್ಯಾಂಕ್‍ನ ಮ್ಯಾನ್ ಹೋಲ್‍ನ್ನೂ ಮುಚ್ಚಿರಲಿಲ್ಲ. ಹೀಗಾಗಿ ಅಲ್ಪಸ್ವಲ್ಪ ನಿಂತಿದ್ದ ನೀರನ್ನ ಕುಡಿಯಲು ಮಂಗಗಳು ಒಂದಾದ ಮೇಲೊಂದರಂತೆ ಟ್ಯಾಂಕಿನೊಳಗೆ ಜಿಗಿದಿವೆ. ಆದ್ರೆ ಮೇಲೆರಲು ಏಣಿ ಸೇರಿದಂತೆ ಯಾವುದೇ ವ್ಯವಸ್ಥೆಯಿಲ್ಲದ ಹಿನ್ನೆಲೆ ನೀರು, ಆಹಾರವಿಲ್ಲದೆ ಮಂಗಗಳು ಟ್ಯಾಂಕ್‍ನಲ್ಲೇ ಸಾವನ್ನಪ್ಪಿವೆ.
Advertisement
ಮಂಗಗಳ ಸಾವಿನ ಪಶ್ಚಾತಾಪಕ್ಕೆ ಗ್ರಾಮದ ಜನ ಮೃತ ಮಂಗಗಳಿಗೆ ಮಾನವರಂತೆ ವಾದ್ಯಗಳೊಂದಿಗೆ ಮೆರವಣಿಗೆ ಮಾಡಿ ಅಂತ್ಯ ಸಂಸ್ಕಾರ ಮಾಡಿದ್ದಾರೆ. ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಮಂಗಳು ಸಾವನ್ನಪ್ಪುವುದು ಗ್ರಾಮಕ್ಕೆ ಕೆಡುಕನ್ನ ತರುತ್ತದೆ ಅಂತ ಇದೀಗ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ.
ಇದನ್ನೂ ಓದಿ: ಅಪಘಾತದಲ್ಲಿ ಸಾವಿಗೀಡಾದ ಕೋತಿಗೆ 11 ದಿನದ ಬಳಿಕ ತಿಥಿ!
ಏಪ್ರಿಲ್ 29 ರಂದು ಬಸವ ಜಯಂತಿಯ ದಿನ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗುತ್ತಿತ್ತು, ಆಗ ಶಬ್ದಕ್ಕೆ ಹೆದರಿ ಟ್ಯಾಂಕನೊಳಗೆ ಮಂಗಗಳು ಜಿಗಿದಿರಬಹುದು ಅಂತಲೂ ಗ್ರಾಮಸ್ಥರು ಹೇಳುತ್ತಿದ್ದಾರೆ. ಆದ್ರೆ ದಿನದಿಂದ ದಿನಕ್ಕೆ ಕೊಳೆತ ಕೆಟ್ಟ ವಾಸನೆ ಗ್ರಾಮದಲ್ಲಿ ಹರಡುತ್ತಿದ್ದಂತೆ ವಾಸನೆಯ ಮೂಲ ಹುಡುಕಿದಾಗ ಮಂಗಗಳು ಸಾವನ್ನಪ್ಪಿರುವುದು ಬಯಲಾಗಿದೆ. ಮಂಗಗಳು ಕಾಣೆಯಾಗಿದ್ದರಿಂದ ಕಾಟ ತಪ್ಪಿತು ಅಂದುಕೊಂಡಿದ್ದ ಗ್ರಾಮಸ್ಥರಿಗೆ ಮಂಗಗಳ ಸಾವು ನಿಜಕ್ಕೂ ಶಾಕ್ ನೀಡಿದೆ. ಮಂಗಗಳ ಅಂತ್ಯ ಸಂಸ್ಕಾರ ವೇಳೆ ಬದುಕುಳಿದ ವಾನರಗಳು ಇಣುಕುತ್ತಿದ್ದದ್ದು ಎಂತವರಿಗೂ ಮನಕಲುಕುವಂತಿತ್ತು.
ಒಟ್ನಲ್ಲಿ, ಟ್ಯಾಂಕ್ ನಿರ್ಮಿಸಿದ ಗುತ್ತಿಗೆದಾರ ಹಾಗೂ ಜಿಲ್ಲಾ ಪಂಚಾಯ್ತಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮೂಕ ಪ್ರಾಣಿಗಳು ಬಲಿಯಾಗಿವೆ. ಜಿಲ್ಲೆಯಲ್ಲಿ ಬರಗಾಲ ತಾಂಡವವಾಡುತ್ತಿದ್ದರು ಸರಿಯಾಗಿ ನೀರು ಸರಬರಾಜು ಮಾಡಲಾಗದ ಜಿಲ್ಲಾಪಂಚಾಯ್ತಿ ಈಗ ಮಂಗಗಳ ಮಾರಣಹೋಮಕ್ಕೂ ಕಾರಣವಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.