ಹಾಸನ: ಸ್ವಾವಲಂಬಿ ಆಗಿ ಬದುಕಲು ಜೋಡಿಯೊಂದು ತಮ್ಮಂತೆಯೇ ಸಮಸ್ಯೆ ಇರುವ ಸಂಗಾತಿಯನ್ನು ಹುಡುಕಿ ನಿಶ್ಚಿತಾರ್ಥ ಮಾಡಿಕೊಂಡಿದೆ.
ಪ್ರಜ್ವಲ್ ಹಾಗೂ ಸುಪ್ರಿಯಾ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ. ಪ್ರಜ್ವಲ್ ಬಿ.ಟೆಕ್ ಮಾಡಿ ಕಂಪನಿಯೊಂದರಲ್ಲಿ ಉದ್ಯೋಗಿ ಆಗಿದ್ದು, ಸುಪ್ರಿಯಾ ಬಿಕಾಂ ಪದವಿಧರೆ. ಇಬ್ಬರಿಗೂ ಮದುವೆ ಮೇಲೆ ಮನಸ್ಸು ಇರಲಿಲ್ಲ. ಏಕೆಂದರೆ ಇಬ್ಬರಿಗೂ ಹುಟ್ಟಿನಿಂದಲೂ ಮಾತು ಬರುತ್ತಿಲ್ಲ ಹಾಗೂ ಕೇಳಿಸುತ್ತಿರಲಿಲ್ಲ.
ಇಬ್ಬರು ನೋಡಲು ಸುಂದರವಾಗಿದ್ದಾರೆ. ತಮ್ಮಲ್ಲಿರುವ ಸಮಸ್ಯೆಯನ್ನು ಬೇರೆಯವರ ಮೇಲೆ ಹೇರದ ಇವರಿಬ್ಬರು ಕೂಡ ಸ್ವಾವಲಂಬಿಯಾಗಿ ಬದುಕಲು ಆರಂಭಿಸಿದ್ದರು. ಈ ನಡುವೆ ಇಬ್ಬರ ಮನೆಯಲ್ಲಿ ಮದುವೆ ಆಗುವಂತೆ ಒತ್ತಾಯಿಸಿದರೂ ಅವರು ಒಪ್ಪಲಿಲ್ಲ.
ಮದುವೆ ಆಗುವುದೇ ಆದರೆ ನನ್ನಂತಹ ಸಮಸ್ಯೆ ಇರುವವರ ಜೊತೆ ಮಾತ್ರ ಎಂದು ಇಬ್ಬರು ನಿರ್ಧರಿಸಿದ್ದರು. ಅದರಂತೆ ಮ್ಯಾಟ್ರಿಮೋನಿಯಲ್ಲಿ ಹುಡುಕುತ್ತಿದ್ದಾಗ ಇಬ್ಬರಿಗೂ ಪರಿಚಯವಾಗಿದೆ.
ವಧು ಸುಪ್ರಿಯಾ ಹೊಳೇನರಸೀಪುರದ ಕೆರಗೋಡು ಗ್ರಾಮದ ಕೃಷ್ಣೇಗೌಡರ ಮಗಳಾಗಿದ್ದು, ವರ ಪ್ರಜ್ವಲ್ ಚಾಮರಾಜನಗರದ ರಾಮನಾಥಪುರ ಗ್ರಾಮದ ನಿವಾಸಿ. ಇಬ್ಬರ ಪೋಷಕರು ಈಗ ತಮ್ಮ ಮಕ್ಕಳಿಗೆ ಅವರಿಷ್ಟದ ಸಂಗಾತಿ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಇಂದು ಪಟ್ಟಣದ ಪಿಆರ್ ಕಲ್ಯಾಣ ಮಂಟಪದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಶೀಘ್ರದಲ್ಲೇ ಇಬ್ಬರ ಮದುವೆ ನಡೆಯಲಿದೆ.