ಕೆಲವು ದಿನಗಳಲ್ಲಿ 2018 ಮುಗಿಯುತ್ತದೆ. ಈ ವರ್ಷದಲ್ಲಿ ಆದ ಕೆಲವು ಘಟನೆಗಳನ್ನು ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. 2018ರಂದು ಭಾರತಕ್ಕೆ ಸಾಕಷ್ಟು ಡೆಡ್ಲಿ ಗೇಮ್ ಚಾಲೆಂಜ್ ಕಾಲಿಟ್ಟಿತ್ತು. ಕೆಲವು ಚಾಲೆಂಜ್‍ನಿಂದಾಗಿ ಸಾಕಷ್ಟು ಜನರು ತಮ್ಮ ಪ್ರಾಣಗಳನ್ನು ಕಳೆದುಕೊಂಡರೆ, ಕೆಲವರು ತಮ್ಮ ಪ್ರಾಣವನ್ನೇ ರಿಸ್ಕ್ ತೆಗೆದುಕೊಂಡು ಈ ಚಾಲೆಂಜ್ ಸ್ವೀಕರಿಸಿದ್ದಾರೆ. ಡೆಡ್ಲಿ ಚಾಲೆಂಜ್‍ಗಳ ಜೊತೆ ಫಿಟ್‍ನೆಸ್ ಚಾಲೆಂಜ್ ಮತ್ತು ಬಿಂದಿ ಚಾಲೆಂಜ್ ಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿತ್ತು.
ಬ್ಲೂ ವೇಲ್ ಚಾಲೆಂಜ್: ರಷ್ಯಾ ಮೂಲದ ಭಯಾನಕ ಆನ್‍ಲೈನ್ ಆಟದಲ್ಲಿ ಸಂಗೀತಾ ಕೇಳುವುದು, ಬೆಳಗ್ಗೆ ಬೇಗ ಏಳುವುದು ಸೇರಿದಂತೆ 50 ಟಾಸ್ಕ್ ಗಳಿರುತ್ತಿತ್ತು. ಇದರಲ್ಲಿ ಕೊನೆಯ ಆಟ ಎತ್ತರದ ಕಟ್ಟಡದಿಂದ ಕೆಳಗೆ ಜಿಗಿಯಬೇಕಿತ್ತು. ಈ ಚಾಲೆಂಜ್ ನಲ್ಲಿ ಪಾಲ್ಗೊಳ್ಳುವ ಮುನ್ನ ವ್ಯಕ್ತಿ ಸಾಕ್ಷಿಗೆ ಫೋಟೋಗಳನ್ನು ಕಳುಹಿಸಬೇಕಾಗಿತ್ತು. ನಂತರ ಕಟ್ಟಡದಿಂದ ಹಾರಬೇಕಿತ್ತು. ಇಂತಹ ಟಾಸ್ಕ್ ಗಳು ಹೆಚ್ಚಾಗಿ ಹಾರರ್ ಸಿನಿಮಾಗಳಲ್ಲಿ ಇರುತ್ತವೆ. ಸದ್ಯ ಈ ಆಟಕ್ಕೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಬಲಿಯಾಗಿದ್ದರು.
Advertisement
Advertisement
ಫಿಟ್ನೆಸ್ ಚಾಲೆಂಜ್: ಕೇಂದ್ರ ಯುವಜನ ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರು ಮೇ 22ರಂದು, “ನಾನು ಫಿಟ್ ಆದ್ರೆ ದೇಶ ಫಿಟ್ (#HumFitTohIndiaFit) ನೀವು ನಿಮ್ಮ ಫಿಟ್ನೆಸ್ ಗೆ ಸಂಬಂಧಿಸಿದ ಫೋಟೋ ಮತ್ತು ವಿಡಿಯೋವನ್ನು ಶೇರ್ ಮಾಡಿ” ಎಂದು ಕೊಹ್ಲಿ, ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ನಟ ಹೃತಿಕ್ ರೋಷನ್ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕಿ ಟ್ವೀಟ್ ಮಾಡಿ ಈ ಚಾಲೆಂಜ್ ಶುರು ಮಾಡಿದ್ದರು.
Advertisement
ವಿರಾಟ್ ಕೊಹ್ಲಿ ಸವಾಲು ಸ್ವೀಕರಿಸಿದ ನಂತರ ಅದನ್ನು ಪ್ರಧಾನಿ ಮೋದಿಯವರಿಗೆ ಸವಾಲು ಹಾಕಿದ್ದರು. ನಂತರ ಕೊಹ್ಲಿಯವರ ಸವಾಲನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ಫಿಟ್ನೆಸ್ ವಿಡಿಯೋವನ್ನು ಅಪ್ಲೋಡ್ ಮಾಡಿದ್ದರು. ಹೀಗೆ ದೇಶ್ಯಾದ್ಯಂತ ಹಲವು ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿದ್ದರು.
Advertisement
ಮೋಮೋ ಚಾಲೆಂಜ್: ಸಾಮಾಜಿಕ ಜಾಲತಾಣಗಳಲ್ಲಿ ಮೋಮೋ ಚಾಲೆಂಜ್ ವೈರಲ್ ಆಗಿತ್ತು. ಈ ಮೋಮೋ ಚಾಲೆಂಜ್ ಆಟವನ್ನು ಫೇಸ್‍ಬುಕ್ ಮತ್ತು ವಾಟ್ಸಪ್ ಮೂಲಕ ಆಡಲಾಗುತ್ತದೆ. ಇದು ಜನರನ್ನು ದೈಹಿಕವಾಗಿ ಹಾನಿ ಮಾಡುವುದು ಮತ್ತು ತಮ್ಮನ್ನು ತಾವೇ ಕೊಲೆ ಮಾಡಿಕೊಳ್ಳುವಂತೆ ಪ್ರಚೋದನೆಯನ್ನು ನೀಡುತ್ತಿತ್ತು. ಮೋಮೋ ಚಾಲೆಂಜ್ ನಲ್ಲಿ ಸಿಲುಕಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ ಕೆಲವರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಕಿಕಿ ಚಾಲೆಂಜ್: ಟ್ರಾಫಿಕ್ ಮಧ್ಯೆ ಚಲಿಸುವ ಕಾರಿನಿಂದ ಜಿಗಿದು ನೃತ್ಯ ಮಾಡುವ ಚಾಲೆಂಜ್ ಸಾಕಷ್ಟು ವೈರಲ್ ಆಗಿತ್ತು. ವಿಶ್ವದ ಹಲವು ಸೆಲೆಬ್ರಿಟಿಗಳು ಈ ಚಾಲೆಂಜ್ ಸ್ವೀಕರಿಸಿ ತಮ್ಮ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಕನ್ನಡದಲ್ಲಿ ಬಿಗ್ ಬಾಸ್ ನಿವೇದಿತಾ ಗೌಡ ಮೊದಲ ಬಾರಿಗೆ ಕಿಕಿ ಚಾಲೆಂಜ್ ಸ್ವೀಕರಿಸಿದ್ದರು. ಕಾರ್, ಬೈಕ್, ಎತ್ತಿನಗಾಡಿ ನಂತರ ವಿಮಾನದಿಂದ ಇಳಿದು ಪೈಲೆಟ್ ಕಿಕಿ ಚಾಲೆಂಜ್‍ಗೆ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಫಾಲಿಂಗ್ ಸ್ಟಾರ್ ಚಾಲೆಂಜ್: ಫಾಲಿಂಗ್ ಸ್ಟಾರ್ ಎಂಬ ಚಾಲೆಂಜ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಟ್ರೆಂಡ್ ಆಗಿತ್ತು. ಈ ಚಾಲೆಂಜ್ ಸ್ವೀಕರಿಸಿದವರು ನಡೆಯುತ್ತಲೇ ಕೆಳಗೆ ಬಿದ್ದು, ತಮ್ಮ ಅಕ್ಕಪಕ್ಕದಲ್ಲಿ ಬೆಲೆಬಾಳುವ ವಸ್ತುಗಳೊಂದಿಗೆ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅದನ್ನು ಇನ್ ಸ್ಟಾಗ್ರಾಮ್‍ನಲ್ಲಿ ಅಪ್ಲೋಡ್ ಮಾಡಬೇಕಿತ್ತು.
ಬಿಗ್ ಬಿಂದಿ ಚಾಲೆಂಜ್: ದಸರಾ ನವದುರ್ಗೆಯರ ಆರಾಧನೆ ಜೊತೆಗೆ ನಮ್ಮ ಸಂಪ್ರದಾಯದ ಬಗ್ಗೆ ತಿಳಿ ಹೇಳಲು ಬಿಗ್ ಬಿಂದಿ ಚಾಲೆಂಜ್ ಶುರುವಾಗಿತ್ತು. ಇದು ಸಿಂಪಲ್ ಚಾಲೆಂಜ್ ಆಗಿದ್ದು, ಹಣೆಗೆ ದೊಡ್ಡ ಬಿಂದಿ ಅಥವಾ ಕುಂಕುಮವನ್ನು ಇಟ್ಟು ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಬೇಕಿತ್ತು. ಈ ಚಾಲೆಂಜ್ ಶುರು ಆದ ಎರಡೇ ದಿನದಲ್ಲಿ ಸಾವಿರಾರು ಜನ ಚಾಲೆಂಜ್ ಸ್ವೀಕರಿಸಿ ತಮ್ಮ ಫೇಸ್‍ಬುಕ್ ಅಕೌಂಟ್ ನಲ್ಲಿ ಸೆಲ್ಫಿ ಹಾಕಿಕೊಂಡಿದ್ದರು. ಬಿಗ್ ಬಿಂದಿ ಚಾಲೆಂಜ್ ಸ್ವೀಕರಿಸಿ ಸಾಕಷ್ಟು ಹೆಣ್ಮಕ್ಕಳು ಈಗಲೂ ನಾವು ನಮ್ಮ ಸಂಪ್ರದಾಯವನ್ನು ಬಿಟ್ಟಿಲ್ಲ ಅಂತ ತೋರಿಸಿದ್ದರು.
PUBG ಗೇಮ್: ಪಬ್ ಜಿ ಎನ್ನುವುದು ಒಂದು ಬ್ಯಾಟಲ್ ಫೀಲ್ಡ್ ಗೇಮ್ (ಯುದ್ಧ ಭೂಮಿ ಆಟ). ಈ ಆಟದ ಸಂಪೂರ್ಣ ಭೂಪಟವನ್ನು ಆಟಗಾರಿಗೆ ಮೊದಲು ತೋರಿಸಲಾಗುತ್ತದೆ. ಬಳಿಕ ಆಟಗಾರರು ತಮಗೆ ಬೇಕಾದ ಪ್ರದೇಶವನ್ನು ಆಯ್ದುಕೊಂದು ಆ ಪ್ರದೇಶಕ್ಕೆ ವಿಮಾನದಿಂದ ಕೆಳಗೆ ಹಾರಿ ಮನೆಗಳತ್ತ ಓಡ್ತಾರೆ. ಆಟಗಾರರಿದ್ದ ಪ್ರದೇಶದಲ್ಲಿ ಸಿಕ್ಕ ಶಸ್ತ್ರಾಸ್ತ್ರಗಳನ್ನು, ಮೆಡಿಕಲ್ ಕಿಟ್‍ಗಳನ್ನು, ಯುದ್ಧಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಆಯ್ದುಕೊಂಡು ಮುಂದೆ ಸಾಗುತ್ತಾರೆ. ಆಟಗಾರರು ಇಳಿದ ಪ್ರದೇಶದ ಸುತ್ತ ವೃತ್ತವೊಂದು ಸಣ್ಣದಾಗುತ್ತೆ. ಆಗ ಅಲ್ಲಿದ್ದ ನೂರಾರು ಜನರ ಜೊತೆ ಹೋರಾಡಿ ಉಳಿದರೇ ಗೆದ್ದಂತೆ, ಮೃತಪಟ್ಟರೆ ಸೋತಂತೆ. ಈ ಆಟದ ವಿಶೇಷ ಏನೆಂದರೆ ಸ್ನೇಹಿತರ ಜೊತೆ ಸೇರಿ ಆಡಬಹುದು. ದೆಹಲಿಯಲ್ಲಿ 19 ವರ್ಷದ ಯುವಕನೊಬ್ಬ ಈ ಗೇಮ್ ಚಟಕ್ಕೆ ಬಿದ್ದು ತನ್ನ ಪೋಷಕರು ಮತ್ತು ಸೋದರಿಯನ್ನು ಕೊಲೆ ಮಾಡಿದ್ದನು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv