ಪಟ್ನಾ: ಎರಡು ತಿಂಗಳ ಹಿಂದೆಯೇ ಮೃತಪಟ್ಟ ಮಹಿಳೆ ಹೆಸರಿನಲ್ಲಿ ಕೋವಿಡ್ ಲಸಿಕೆಯ ಎರಡನೇ ಡೋಸ್ ಪಡೆದಿರುವ ಸಂದೇಶ ಬಂದಿರುವುದು ಅಚ್ಚರಿ ಮೂಡಿಸಿದೆ. ಮೃತ ಮಹಿಳೆಯ ಪತಿ ಬಳಿ ಇದ್ದ ಮೊಬೈಲ್‍ಗೆ ಈ ಸಂದೇಶ ಬಂದಿದೆ.
ಲಾಲೊ ದೇವಿ ಅವರ ಪತಿ ರಾಮ್ ಉದ್ಗಾರ್ ಥಾಕೂರ್ ಈ ಕುರಿತು ಪ್ರತಿಕ್ರಿಯಿಸಿ, ನನ್ನ ಪತ್ನಿ ಜ್ವರ, ಅಸ್ವಸ್ಥತೆ ಕಾರಣದಿಂದಾಗಿ ಸೆಪ್ಟೆಂಬರ್ 19ರಂದು ನಿಧನರಾದರು. ಬಿಹಾರ್‍ನ ಯೋಜನೆ ಮತ್ತು ಅಭಿವೃದ್ಧಿ ಇಲಾಖೆಯಿಂದ ನೀಡಲಾಗಿರುವ ಮರಣ ಪ್ರಮಾಣ ಪತ್ರವೂ ನಮ್ಮ ಬಳಿ ಇದೆ. ನನ್ನ ಪತ್ನಿ ಮೃತಪಟ್ಟು 2 ತಿಂಗಳಾಗಿದೆ. ಆದರೆ ಆರೋಗ್ಯ ಇಲಾಖೆಯಿಂದ ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಥಾಕೂರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗೂಗಲ್ ನಂತರ ಇದೀಗ ಇಂಟೆಲ್- ಲಸಿಕೆ ಹಾಕಿಸಿಕೊಳ್ಳದ ಉದ್ಯೋಗಿಗಳಿಗೆ ವೇತನ ಇಲ್ಲ
ವೀರಪುರದ ಕಿಸಾನ್ ಭವನದಲ್ಲಿ ನವೆಂಬರ್ 25 ರಂದು ಪ್ರಾಥಮಿಕ ಆರೋಗ್ಯ ಕೇಂದ್ರವು ಕೋವಿಡ್ ಲಸಿಕಾ ಅಭಿಯಾನ ಶಿಬಿರ ನಡೆಸಿತ್ತು. ಶಿಬಿರ ನಂತರ ಲಾಲೊ ದೇವಿ ಹೆಸರಿನಲ್ಲೂ ಕೋವಿಡ್ ಲಸಿಕೆ ಪ್ರಮಾಣ ಪತ್ರ ನೀಡಲಾಗಿದೆ.
ಮೃತ ಮಹಿಳೆ ಹೆಸರಿನಲ್ಲಿ ಕೋವಿಡ್ ಲಸಿಕೆ ಪ್ರಮಾಣ ಪತ್ರ ನೀಡಿರುವುದಕ್ಕೆ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ. ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ದತ್ತಾಂಶ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸರ್ಕಾರಗಳು ತಂತ್ರಗಾರಿಕೆ ನಡೆಸುತ್ತಿವೆ ಎಂಬ ಗಂಭೀರ ಆರೋಪಗಳು ವ್ಯಕ್ತವಾಗಿವೆ. ಇದನ್ನೂ ಓದಿ: ವ್ಯಾಕ್ಸಿನ್ ಪ್ರಮಾಣ ಪತ್ರದಲ್ಲಿ ಮೋದಿ ಫೋಟೊ ತೆರವು ಕೋರಿ ಸಲ್ಲಿಸಿದ್ದ ಅರ್ಜಿ ವಜಾ