ಬೆಂಗಳೂರು: ನಗರದ (Bengaluru) ಪ್ರತಿಷ್ಠಿತ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದ ಮೃತದೇಹದ ಭಾಗಗಳನ್ನು ಇಲಿಗಳು ಕಚ್ಚಿ ತಿಂದಿರುವ ಘಟನೆ ನಡೆದಿದೆ.
ಕುಟುಂಬದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂಬ ನೋವಿನ ಜೊತೆಗೆ ಈಗ ಮುಖವನ್ನು ಇಲಿಗಳು ತಿಂದು ವಿರೂಪವಾಗಿ ನೋಡುವ ನೋವು ಕುಟುಂಬದ ಸದಸ್ಯರಿಗೆ ಎದುರಾಗಿದೆ. ಸೋಮವಾರ ಸಂಜೆ ಸಾವನ್ನಪ್ಪಿದ್ದ ವ್ಯಕ್ಯಿಯ ಮೃತದೇಹವನ್ನ ನಗರದ ಕೆಜಿ ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜಿನ (Ambedkar Hospital) ಶವಾಗಾರದಲ್ಲಿ ಇಡಲಾಗಿತ್ತು. ಕೋಲ್ಡ್ ಸ್ಟೋರೆಜ್‍ನಲ್ಲಿ ಇಟ್ಟಿದ್ರೂ ಮೂಗು, ಕಣ್ಣಿನ ರೆಪ್ಪೆಯನ್ನು ಇಲಿಗಳು ತಿಂದಿವೆ.
ನಗರದ ರಂಗಸ್ವಾಮಿ (37) ಹರ್ನಿಯಾ ಸಮಸ್ಯೆಯಿಂದ ಶೇಷಾದ್ರಿಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಗಾಗಿತ್ತು. ಆಪರೇಷನ್ ಸಂದರ್ಭದಲ್ಲಿ ಸಮಸ್ಯೆ ಆದ ಕಾರಣ ಕೆಜಿ ಹಳ್ಳಿಯ ಅಂಬೇಡ್ಕರ್ ಮೆಡಿಕಲ್ ಕಾಲೇಜಿಗೆ ಕಳುಹಿಸಲಾಗಿತ್ತು. ಅಲ್ಲಿಗೆ ಬರುವ ಹೊತ್ತಿಗೆ ಅವರ ಪ್ರಾಣ ಹೋದಂತೆ ಆಗಿತ್ತು. ಖಾಸಗಿ ಆಸ್ಪತ್ರೆಯಲ್ಲೇ ಏನೋ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಮೃತ ರಂಗಸ್ವಾಮಿಯ ಅಣ್ಣ ಆರೋಪಿಸಿದ್ದಾರೆ.
ಬಳಿಕ ಅಂಬೆಡ್ಕರ್ ಮೆಡಿಕಲ್ ಕಾಲೇಜಿಗೆ ಅವರನ್ನು ದಾಖಲಿಸಲಾಗಿತ್ತು. ಕೆಲ ಹೊತ್ತಲೇ ಅವರು ಸಾವನ್ನಪ್ಪಿದ್ದಾರೆ. ಸಣ್ಣ ಶಸ್ತ್ರಚಿಕಿತ್ಸೆಯಲ್ಲೂ ನಿರ್ಲಕ್ಷ್ಯ ಮಾಡಿದ ವೈದ್ಯರ ವಿರುದ್ಧ ದೂರು ಕೊಡಲು ಶವಾಗಾರದಲ್ಲೇ ದೇಹ ಇರಿಸಲು ಕುಟುಂಬ ತೀರ್ಮಾನಿಸಿತ್ತು. ದೂರು ಕೊಟ್ಟು ಬರುವ ಹೊತ್ತಿಗೆ ಮುಖ ವಿಕಾರವಾಗಿತ್ತು. ಇಲಿಗಳು ಕಣ್ಣಿನ ರೆಪ್ಪೆ ಹಾಗೂ ಮೂಗನ್ನು ತಿಂದು ಹಾಕಿದ್ದವು. ಇದನ್ನು ಆಸ್ಪತ್ರೆಯವರು ಒಪ್ಪಿಕೊಂಡಿದ್ದಾರೆ. ಇವರ ವಿರುದ್ಧ ಕ್ರಮ ಆಗಬೇಕು, ನಮಗೆ ನ್ಯಾಯ ಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.