ಬೆಂಗಳೂರು: ಕರ್ನಾಟಕದ ‘ಸಿಂಗಂ’ ಎಂದೇ ಖ್ಯಾತಿ ಪಡೆದಿರುವ ಖಡಕ್ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿ, ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಬೆಂಗಳೂರು ದಕ್ಷಿಣ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿರುವ ಅಣ್ಣಾಮಲೈ ಅವರು ರಾಜೀನಾಮೆ ನೀಡುವುದು ಖಚಿತ ಎನ್ನಲಾಗಿದ್ದು, ಜೂನ್ 4 ರಂದು ರಾಜೀನಾಮೆ ಸಲ್ಲಿಸಲಿದ್ದಾರೆ. ಈ ಸಂಬಂಧ ಮೇ 28ರ ಮಂಗಳವಾರ ಸಿಎಂ ಅವರನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
Advertisement
Advertisement
ಖಡಕ್ ಅಧಿಕಾರಿಯಾಗಿ ಯುವ ಜನಾಂಗಕ್ಕೆ ಪ್ರೇರಣೆ ಆಗಿರುವ ಅಣ್ಣಾಮಲೈ ನಿರ್ಧಾರ ಸಾಕಷ್ಟು ಅಚ್ಚರಿಗೆ ಕಾರಣವಾಗಿದ್ದು, ಪೊಲೀಸ್ ಅಧಿಕಾರಿ ಆಗಿರುವುದಕ್ಕಿಂತ ರಾಜಕೀಯ ಪ್ರವೇಶ ಮಾಡಿ ನೇರ ಜನರ ಸೇವೆ ಮಾಡುವ ಉದ್ದೇಶ ಹೊಂದಿದ್ದಾರೆ. ಪೊಲೀಸ್ ಅಧಿಕಾರಿಯಾಗಿ ಜನ ಸೇವೆ ಮಾಡುವುದು ಕಷ್ಟಸಾಧ್ಯವಾಗಿದ್ದು, ಪರಿಣಾಮ ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ.
Advertisement
ಅಣ್ಣಾಮಲೈ ದಿಢೀರ್ ರಾಜೀನಾಮೆ ನಿರ್ಧಾರ ಸಾಕಷ್ಟು ಕುತೂಹಲ ಮೂಡಿಸಿದೆ. ಅಲ್ಲದೆ ರಾಜಕೀಯದಲ್ಲಿ ಯಾವ ಪಕ್ಷ ಸೇರಲಿದ್ದಾರೆ ಎಂಬುವುದು ಕೂಡ ಬಹುದೊಡ್ಡ ಪ್ರಶ್ನೆ ಆಗಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಅನ್ವಯ ಅಣ್ಣಾಮಲೈ ಅವರು ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ಸಾಕಷ್ಟು ತಿಂಗಳಿನಿಂದ ತಯಾರಿ ನಡೆಸಿದ್ದಾರೆ ಎಂಬ ಮಾಹಿತಿ ಲಭಿಸಿದೆ.
Advertisement
ತಮಿಳುನಾಡಿನ ಕೊಯಮತ್ತೂರು ಅಣ್ಣಾಮಲೈ ಅವರ ತವರು ಜಿಲ್ಲೆಯಾಗಿದ್ದು, ಕುಪ್ಪೇಸ್ವಾಮಿ ಅಣ್ಣಾಮಲೈ 2011ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿದ್ದರು. 2013ರಲ್ಲಿ ಕಾರ್ಕಳ ಎಎಸ್‍ಪಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ಅವರು, ಬಳಿಕ 2015ರಲ್ಲಿ ಉಡುಪಿ ಜಿಲ್ಲಾ ಎಸ್‍ಪಿ, ಚಿಕ್ಕಮಗಳೂರು ಎಸ್‍ಪಿಯಾಗಿ ದಕ್ಷ ಸೇವೆ ಮಾಡಿದ್ದಾರೆ. ಸದ್ಯ ಬೆಂಗಳೂರು ದಕ್ಷಿಣ ಡಿಸಿಪಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅಣ್ಣಾಮಲೈ ಮೆಕ್ಯಾನಿಕಲ್ ಎಂಜಿನಿಯರ್ ಹಾಗೂ ಪ್ರತಿಷ್ಠಿತ ಲಖನೌ ಎಂಬಿಎ ಪದವೀಧರರಾಗಿದ್ದಾರೆ. ಐಪಿಎಸ್ ಅಧಿಕಾರಿ ಆಗುವ ಮೊದಲು ವಿದ್ಯಾರ್ಥಿಯಾಗಿ ಪಾಲಿಟಿಕ್ಸ್ ನಲ್ಲಿದ್ದರು. ಸದ್ಯ ಅಣ್ಣಾಮಲೈ ಅವರು ತಮಿಳುನಾಡಿನ ಡಿಎಂಕೆ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ ಎಂಬ ಮಾಹಿತಿ ಲಭಿಸಿದ್ದು, ಡಿಎಂಕೆ ಅಧಿನಾಯಕ ಸ್ಟಾಲಿನ್, ಅಣ್ಣಾಮಲೈ ಅವರಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 2021ಕ್ಕೆ ತಮಿಳುನಾಡು ವಿಧಾನಸಭೆಯಲ್ಲಿ ಅಣ್ಣಾಮಲೈ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ಕೊಯಮತ್ತೂರು ಕ್ಷೇತ್ರದಿಂದ ಡಿಎಂಕೆ ಅಭ್ಯರ್ಥಿಯಾಗಿ ಸ್ಪರ್ಧೆಗೆ ಸಿದ್ಧತೆ ನಡೆಸಿದ್ದಾರೆ.