Bengaluru CityKarnatakaLatest

ಡಿಸಿಎಂ ಪ್ರಶ್ನೆಗೆ ನಾನು ಚಿಕ್ಕವನು ಅಂದ್ರು ಆರ್.ಅಶೋಕ್

ಬೆಂಗಳೂರು: ಬಿಜೆಪಿ ಸರ್ಕಾರದಲ್ಲಿ ಈಗ ಡಿಸಿಎಂ ಜಟಾಪಟಿ ಜೋರಾಗಿದೆ. ಮೂರು ನಾಲ್ಕಾಗುತ್ತೋ? ಎರಡಾಗುತ್ತೋ? ಎಲ್ಲ ಖಾಲಿ ಆಗಿ ಬಿಡುತ್ತೋ ಅನ್ನೋ ಲೆಕ್ಕಚಾರ ಭರ್ಜರಿಯಾಗಿಯೇ ನಡೀತಾ ಇದೆ. ಈ ಡಿಸಿಎಂ ಮೇಲಾಟದಲ್ಲಿ ಕಂದಾಯ ಸಚಿವ ಅಶೋಕ್ ಅವರದ್ದು ಮಾತ್ರ ರಕ್ಷಣಾತ್ಮಕ ಆಟ. ಡಿಸಿಎಂ ವಿವಾದ ಬಗ್ಗೆ ಏನೇ ಪ್ರಶ್ನೆ ಕೇಳಿದರೂ ನೋ ಕಮೆಂಟ್ ಅನ್ನೋದಕ್ಕೆ ಶುರು ಮಾಡಿದ್ದಾರೆ.

ಅಂದಹಾಗೆ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಆರ್.ಅಶೋಕ್ ಪವರ್ ಫುಲ್ ಆಗಿದ್ರು. ಜಗದೀಶ್ ಶೆಟ್ಟರ್ ಸಿಎಂ ಆಗಿದ್ದಾಗ ಅಶೋಕ್, ಈಶ್ವರಪ್ಪ ಡಿಸಿಎಂ ಆಗಿದ್ದರು. ಈಗ ಇಬ್ಬರು ಕ್ಯಾಬಿನೆಟ್ ದರ್ಜೆ ಸಚಿವರು. ಡಿಸಿಎಂಗಾಗಿ ಲಾಸ್ಟ್ ಮಿನಿಟ್ ಫೈಟ್ ಮಾಡಿ ಸುಮ್ಮನಾಗಿದ್ದರು. ಅದಕ್ಕೆ ಕಾರಣ ಹೈಕಮಾಂಡ್ ಕಂಟ್ರೋಲ್. ಈಶ್ವರಪ್ಪ, ಅಶೋಕ್ ಬಿಟ್ಟು ಅಚ್ಚರಿಯಾಗಿ ಗೋವಿಂದ ಕಾರಜೋಳ, ಅಶ್ವಥ್ ನಾರಾಯಣ್, ಲಕ್ಷ್ಮಣ ಸವದಿ ಅವರನ್ನು ಹೈಕಮಾಂಡ್ ಡಿಸಿಎಂ ಮಾಡಿತ್ತು. ಇದು ಸಹಜವಾಗಿಯೇ ಅಶೋಕ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೂ ಹೈಕಮಾಂಡ್ ಭಯಕ್ಕೆ ಹೊರಾಂಗಣ ರಾಜಕಾರಣದಲ್ಲಿ ವಿರೋಧಿಸುವ ಕೆಲಸ ಮಾಡಲಿಲ್ಲ.

ಶ್ರೀರಾಮುಲು, ರಮೇಶ್ ಜಾರಕಿಹೊಳಿಯಿಂದಾಗಿ ಮತ್ತೆ ಡಿಸಿಎಂ ಬೇಕಾ ಅಥವಾ ಬೇಡ್ವಾ? ಎಂಬ ಚರ್ಚೆ ಮುನ್ನೆಲೆಗೆ ಬಂದಿದೆ. ಈ ಲೆಕ್ಕಚಾರಕ್ಕೆ ರೇಣುಕಾಚಾರ್ಯ ಅವರು ಪ್ರಬಲ ನಾಯಕರು ನಮಗೆ ಇರುವಾಗ ಆ ಸ್ಥಾನಗಳೇ ಬೇಡ ಎಂದು ಬಿಜೆಪಿ ಅಂಗಳದಲ್ಲಿ ಸಂಚಲನ ಮೂಡಿಸಿದ್ದರು. ಇಷ್ಟೆಲ್ಲ ಆದರೂ ಇನ್ನೊಮ್ಮೆ ಡಿಸಿಎಂ ಆಗಬೇಕು ಎಂದು ಕನಸು ಕಂಡಿದ್ದ ಅಶೋಕ್ ಮಾತ್ರ ಹೊರಾಂಗಣ ರಾಜಕಾರಣದಲ್ಲಿ ಸೈಲೆಂಟ್ ಆಗಿದ್ದಾರೆ. ರಕ್ಷಣಾತ್ಮಕ ಆಟಕ್ಕಿಳಿದಿದ್ದು ಮಾಧ್ಯಮದವರು ಕೇಳುವ ಪ್ರಶ್ನೆಗೆ ನಗುನಗುತ್ತಲೇ ಜಾರಿಕೊಳ್ಳುತ್ತಿದ್ದಾರೆ. ಇವತ್ತು ಕೂಡ ವಿಧಾನಸೌಧದಲ್ಲಿ ಅಶೋಕ್ ಮಾತನಾಡುವಾಗ ಡಿಸಿಎಂ ಪ್ರಶ್ನೆ ಎದುರಾಯ್ತು. ಆಗ ನಾನು ಚಿಕ್ಕವನು, ಡಿಸಿಎಂ ವಿಚಾರದ ಬಗ್ಗೆ ನೋ ಕಮೆಂಟ್ ಎಂದು ಸ್ಮೈಲ್ ಮಾಡಿ ಹೊರಟರು.

Leave a Reply

Your email address will not be published. Required fields are marked *

Back to top button