ಯಾದಗಿರಿ: ವಾಲ್ಮೀಕಿ ಸಮಾಜಕ್ಕೆ ಡಿಸಿಎಂ ಸ್ಥಾನ ಬೇಕಿಲ್ಲ ಡಿಸಿಎಂ ಸ್ಥಾನದ ಅವಶ್ಯಕತೆಯೂ ಇಲ್ಲ ಎಂದು ಸುರಪುರ ಬಿಜೆಪಿ ಶಾಸಕ ರಾಜು ಗೌಡ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ವಾಲ್ಮೀಕಿ ಸಮಾಜದಲ್ಲಿ ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಚರ್ಚೆ ನಡೆಯುತ್ತಿರುವಾಗಲೇ ರಾಜು ಗೌಡ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಈ ಬಗ್ಗೆ ಯಾದಗಿರಿಯಲ್ಲಿ ಮಾತನಾಡಿದ ಅವರು, ನಮ್ಮ ಸಮಾಜಕ್ಕೆ ಡಿಸಿಎಂ ಸ್ಥಾನಕ್ಕಿಂತ ಶೇ.7.5ರಷ್ಟು ಮೀಸಲಾತಿ ಬೇಕು, ಮಾಧ್ಯಮಗಳಲ್ಲಿ ರಮೇಶ್ ಜಾರಕಿಹೊಳಿ ಮತ್ತು ಶ್ರೀರಾಮುಲು ಅವರಿಗೆ ಡಿಸಿಎಂ ಸ್ಥಾನ ಎಂದು ತೋರಿಸುತ್ತಿದ್ದಾರೆ. ಅವರಿಬ್ಬರೂ ನನಗೆ ಆತ್ಮೀಯರು ಅವರಿಬ್ಬರಿಗೂ ನಾನು ಕೇಳಿಕೊಳ್ಳುವುದು ಇಷ್ಟೇ ಡಿಸಿಎಂ ಸ್ಥಾನದ ಬದಲು ಮೀಸಲಾತಿಗೆ ಆಗ್ರಹಿಸಿ, ಮೀಸಲಾತಿ ಸಿಕ್ಕರೆ ನಮ್ಮ ಸಮಾಜಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಂತೆ ಎಂದರು.
Advertisement
Advertisement
ಮೀಸಲಾತಿ ನೀಡದಿದ್ದರೆ ನಮ್ಮ ಜನಾಂಗದ 15 ಶಾಸಕರು ರಾಜೀನಾಮೆ ಸಿದ್ಧ ಎಂಬ ವಾಲ್ಮೀಕಿ ಶ್ರೀಗಳ ಹೇಳಿಕೆಗೆ ಧ್ವನಿಗೂಡಿಸಿದ ರಾಜು ಗೌಡ, ಮೀಸಲಾತಿ ವಿಚಾರದಲ್ಲಿ ಶ್ರೀಗಳ ಆದೇಶಕ್ಕೆ ನಾನು ಬದ್ಧ. ಬಿಎಸ್‍ವೈ ನಮ್ಮನ್ನು ರಾಜೀನಾಮೆ ಕೊಡುವ ಮಟ್ಟಕ್ಕೆ ತೆಗೆದುಕೊಂಡು ಹೋಗುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದರು.
Advertisement
ವಾಲ್ಮೀಕಿ ಶ್ರೀಗಳು ಸಚಿವ ಸ್ಥಾನಕ್ಕೆ ತಮ್ಮ ಹೆಸರು ಸೂಚಿಸಿದ ಕುರಿತು ಮಾತನಾಡಿದ ಅವರು, ನಾನು ಶ್ರೀಗಳ ಮಾತಿಗೆ ಚಿರಋಣಿ ಶ್ರೀಗಳು ನನ್ನ ಮೇಲೆ ಪ್ರೀತಿ, ವಿಶ್ವಾಸ ಇಟ್ಟು ನನ್ನ ಹೆಸರು ಸೂಚಿಸಿದ್ದಾರೆ. ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ 12 ಜನ ಶಾಸಕರಿಗೆ ಕೊಟ್ಟು ಉಳಿದ ನಂತರ ನನಗೂ ಸಚಿವ ಸ್ಥಾನ ನೀಡಿ, ಬಹುತೇಕ ಶಾಸಕರು ಮತ್ತು ಸಂಸದರು ಸಚಿವ ಸ್ಥಾನಕ್ಕೆ ನನ್ನ ಹೆಸರು ಸೂಚಿಸುತ್ತಿದ್ದಾರೆ. ಹೀಗಾಗಿ ನನಗೆ ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
Advertisement
ಎನ್‍ಆರ್ ಸಿ ಪ್ರತಿಭಟನೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ಸಿನವರಿಗೆ ತಾಕತ್ತಿದ್ದರೆ ನಮ್ಮ ಎದೆಗೆ ಗುಂಡು ಹೊಡೆಯಲಿ, ಇನ್ನೊಬ್ಬರ ಹೆಗಲ ಮೇಲೆ ಗನ್ ಇಟ್ಟು ಯಾಕೆ ಹೊಡೆಯುತ್ತೀರಿ. ಅಮಾಯಕರನ್ನು ಯಾಕೆ ಬಲಿ ಕೊಡತ್ತೀರಿ. ರಾಜಕಾರಣಿಗಳು ತಮ್ಮ ಲಾಭಕ್ಕಾಗಿ ಪೌರತ್ವ ತಿದ್ದುಪಡಿ ಕಾಯ್ದೆ ಹೋರಾಟ ಬಳಸಿಕೊಳ್ಳುವುದನ್ನು ಬಿಡಬೇಕು. ಉರಿಯೋ ಬೆಂಕಿಗೆ ತುಪ್ಪ ಹಾಕಿ ಆ ಬೆಂಕಿಯಲ್ಲಿ ಮೈ ಕಾಯಿಸಿಕೊಳ್ಳುವ ಕೆಲಸ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ. ಕೆಲವು ಸಂಘಟನೆಗಳು ಕರ್ನಾಟಕದಲ್ಲಿ ಗಲಾಟೆ ಎಬ್ಬಿಸುವ ಉದ್ದೇಶದಿಂದ ಕೇರಳದಿಂದ ಬಂದಿವೆ, ಮೋದಿಯವರ ಬೆಳವಣಿಗೆ ಸಹಿಸಲಾರದೆ ಈ ರೀತಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದ ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ ಕುರಿತು ಮಾತನಾಡಿದ ಅವರು, ದುಡಿಯುವ ವರ್ಗಕ್ಕೆ ಯಾವತ್ತೂ ಅವಹೇಳನವಾಗಿ ಮಾತನಾಡಬಾರದು. ಯಾರು ಯಾವ ಉದ್ಯೋಗ ಮಾಡುತ್ತಾರೋ ಅದು ಅವರಿಗೆ ಶ್ರೇಷ್ಠ, ತೇಜಸ್ವಿ ಸೂರ್ಯ ನನಗೆ ತಮ್ಮ ಇದ್ದ ಹಾಗೆ ನಾನು ಅವರಿಗೆ ಬುದ್ಧಿ ಹೇಳುತ್ತೇನೆ ಎಂದರು.