– ಬಿಎಸ್‍ವೈ ಭೇಟಿ ಮಾಡುತ್ತಿರುವ ಸಚಿವಾಕಾಂಕ್ಷಿಗಳು
ಬೆಂಗಳೂರು: ಮೂರು ದಿನಗಳ ರೆಸ್ಟ್ ಬಳಿಕ ಮತ್ತೆ ಧವಳಗಿರಿ ಚಟುವಟಿಕೆಯ ಕೇಂದ್ರವಾಗಿದೆ. ಸಿಎಂ ಯಡಿಯೂರಪ್ಪ ನಿವಾಸ ಧವಳಗಿರಿ ನಿವಾಸಕ್ಕೆ ಮತ್ತೆ ಸಚಿವ ಸ್ಥಾನದ ಆಕಾಂಕ್ಷಿಗಳು ಧಾಂಗುಡಿ ಇಡುತ್ತಿದ್ದಾರೆ. ನಿನ್ನೆ ಬಿಜೆಪಿ ಸಂಘಟನಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಮಹತ್ವದ ಚರ್ಚೆ ನಡೆಸಿದರು. ಸಂಭಾವ್ಯ ಸಚಿವರ ಪಟ್ಟಿಯನ್ನು ಸಿದ್ಧಪಡಿಸಿ ದೆಹಲಿಗೆ ತರುವಂತೆ ಸಂತೋಷ್ ಸಿಎಂಗೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ ಚುರುಕಾದ ಸಚಿವಾಕಾಂಕ್ಷಿ ಶಾಸಕರು ತಮ್ಮ ತಮ್ಮ ಕ್ಷೇತ್ರಗಳಿಂದ ಮರಳಿ ಬೆಂಗಳೂರಿಗೆ ಬಂದು ಸಿಎಂ ಭೇಟಿ ಮಾಡುತ್ತಿದ್ದಾರೆ.
Advertisement
ಇವತ್ತು ಬೆಳಗ್ಗೆಯಿಂದಲೂ ಸಿಎಂ ಅವರ ಧವಳಗಿರಿ ನಿವಾಸ ಚಟುವಟಿಕೆಯ ಕೇಂದ್ರಬಿಂದುವಾಗಿದೆ. ಬೆಳಗ್ಗೆ ಹಲವು ಸಚಿವಾಕಾಂಕ್ಷಿ ಶಾಸಕರು ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಬೇಡಿಕೆಯಿಟ್ಟಿದ್ದಾರೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ ಇವತ್ತು ಬೆಳಗ್ಗೆಯೇ ಸಿಎಂ ಭೇಟಿ ಮಾಡಿದ್ರು. ಡಿಸಿಎಂ ಸ್ಥಾನ, ಸೋತವರಿಗೆ ಸಚಿವ ಸ್ಥಾನ, ಸಂಪುಟ ವಿಸ್ತರಣೆ ವಿಳಂಬ ಕುರಿತು ಸಿಎಂ ಜೊತೆ ರಮೇಶ್ ಜಾರಕಿಹೊಳಿ ಮಹತ್ವದ ಚರ್ಚೆ ನಡೆಸಿದರು. ಡಿಸಿಎಂ ಹುದ್ದೆಗಾಗಿ ಶ್ರೀರಾಮುಲು ಪಟ್ಟು ಹಿಡಿದಿರುವ ವಿಚಾರ ಕೂಡಾ ಚರ್ಚಿಸಿದ್ದು, ಆ ಸ್ಥಾನ ತಮಗೇ ಕೊಡಬೇಕೆಂದೂ ರಮೇಶ್ ಜಾರಕಿಹೊಳಿ ಸಿಎಂ ಜೊತೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ತಮಗೆ ಜಲಸಂಪನ್ಮೂಲ ಖಾತೆ ಕೊಡಿ ಎಂದೂ ಸಿಎಂಗೆ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ. ರಮೇಶ್ ಜಾರಕಿಹೊಳಿ ತೆರಳಿದ ಬೆನ್ನಲ್ಲೇ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಸಿಎಂ ಭೇಟಿ ಮಾಡಿ ಜಲಸಂಪನ್ಮೂಲ ಖಾತೆಗೆ ಬೇಡಿಕೆ ಇಟ್ಟರು ಎನ್ನಲಾಗಿದೆ. ಜಲಸಂಪನ್ಮೂಲ ಖಾತೆಗೆ ರಮೇಶ್ ಜಾರಕಿಹೊಳಿ ಮತ್ತು ಬಸವರಾಜ ಬೊಮ್ಮಾಯಿ ಇಬ್ಬರೂ ಪಟ್ಟು ಹಿಡಿದಿರುವುದು ಸಿಎಂಗೆ ಮತ್ತೊಂದು ತಲೆನೋವಾಗಿದೆ.
Advertisement
Advertisement
ಇನ್ನು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಕೂಡಾ ಸಿಎಂ ಭೇಟಿ ಮಾಡಿದ್ದು, ಸಚಿವ ಶ್ರೀರಾಮುಲುಗೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಒತ್ತಾಯಿಸಿದರು ಎನ್ನಲಾಗಿದೆ. ಚುನಾವಣಾ ಪೂರ್ವದಲ್ಲಿ ರಾಮುಲು ಅವರಿಗೆ ಭರವಸೆ ಕೊಟ್ಟಂತೆ ಉಪಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಸೋಮಶೇಖರ್ ರೆಡ್ಡಿ ಆಗ್ರಹಿಸಿದ್ರು ಎನ್ನಲಾಗಿದೆ.
Advertisement
ಇನ್ನು ಹಿರಿಯ ಶಾಸಕ ಉಮೇಶ್ ಕತ್ತಿ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ, ರೆಡ್ಡಿ ಲಿಂಗಾಯತ ಸಮುದಾಯದ ಎ.ಎಸ್.ಪಾಟೀಲ್ ನಡಹಳ್ಳಿ, ವೆಂಕಟರೆಡ್ಡಿ ಮುದ್ನಾಳ್, ದೊಡ್ಡನಗೌಡ ಪಾಟೀಲ್ ಸೇರಿ ಹಲವರು ಸಹ ಸಿಎಂ ಭೇಟಿ ಮಾಡಿ ಸಚಿವ ಸ್ಥಾನಕ್ಕೆ ಒತ್ತಾಯಿಸಿದ್ರು. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ತಮ್ಮ ಹೆಸರು ಸೇರಿಸುವಂತೆ ಸಚಿವಾಕಾಂಕ್ಷಿಗಳು ಸಿಎಂ ಯಡಿಯೂರಪ್ಪಗೆ ಒತ್ರಾಯಿಸಿದ್ರು. ಈ ಮಧ್ಯೆ ಮರಾಠಾ ಕ್ಷತ್ರೀಯ ಸಮಯದಾಯದ ಮುಖಂಡರು ಸಹ ಸಿಎಂ ಭೇಟಿ ಮಾಡಿ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಗೆ ಸಚಿವ ಸ್ಥಾನಕ್ಕೆ ಒತ್ತಾಯಿಸಿದರು.
ಇದೆಲ್ಲದರ ನಡುವೆ ಡಿಸಿಎಂ ಸ್ಥಾನ ಉಳಿಸಿಕೊಳ್ಳಲು ಲಕ್ಷ್ಮಣ ಸವದಿ ಹೋರಾಟ ಮುಂದುವರಿಸಿದ್ದಾರೆ. ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಡಿಸಿಎಂ ಸ್ಥಾನ, ತಮ್ಮ ಭವಿಷ್ಯ ಕುರಿತು ಚರ್ಚಿಸಿ ಬಂದಿದ್ರು ಲಕ್ಷ್ಮಣ್ ಸವದಿ. ದೆಹಲಿಯಿಂದ ವಾಪಸಾದ ಬಳಿಕ ಇವತ್ತು ಡಿಸಿಎಂ ಲಕ್ಷ್ಮಣ್ ಸವದಿ ಸಿಎಂ ಭೇಟಿ ಮಾಡಿ ಚರ್ಚಿಸಿದರು. ಹೈಕಮಾಂಡ್ ನಾಯಕರ ಜೊತೆಗಿನ ಮಾತುಕತೆಯನ್ನೂ ಸವದಿ ಸಿಎಂ ಜೊತೆ ಹಂಚಿಕೊಂಡ್ರು ಎನ್ನಲಾಗಿದೆ.
ಕಳೆದ ವಾರಾಂತ್ಯದ ಎರಡು ದಿನ ಸಿಎಂ ಅವರ ಧವಳಗಿರಿ ನಿವಾಸದಲ್ಲಿ ಶಾಂತಿ ನೆಲೆಸಿತ್ತು. ಸಂಪುಟ ವಿಸ್ತರಣೆ ವಿಳಂಬ ಹಿನ್ನೆಲೆಯಲ್ಲಿ ಸಚಿವಾಕಾಂಕ್ಷಿಗಳು ಕ್ಷೇತ್ರಗಳಿಗೆ ಮರಳಿದ್ರು. ಆದ್ರೆ ನಿನ್ನೆ ಬಿ ಎಲ್ ಸಂತೋಷ್ ಭೇಟಿ ಮತ್ತೆ ಆಕಾಂಕ್ಷಿಗಳಲ್ಲಿ ನಿರೀಕ್ಷೆ ಕೆದಕುವಂತೆ ಮಾಡಿದೆ.