ಬೆಂಗಳೂರು: ಉಪಮುಖ್ಯಮಂತ್ರಿ ಪರಮೇಶ್ವರ್ ಹಾಗೂ ಬಿಬಿಎಂಪಿ ಮೇಯರ್ ಗಂಗಾಬಿಕೆ ಅವರು ಕೆ.ಆರ್.ಮಾರುಕಟ್ಟೆ ಗೆ ದಿಢೀರ್ ಭೇಟಿ ನೀಡಿ, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡಿದ್ದಾರೆ.
ನಗರಾಭಿವೃದ್ಧಿ ಸಚಿವರಾದ ಬಳಿಕ ಇದೇ ಮೊದಲ ಬಾರಿ ಪರಮೇಶ್ವರ್ ಅವರು ಕೆ.ಆರ್.ಮಾರುಕಟ್ಟೆಗೆ ಭೇಟಿ ನೀಡಿದ್ದಾರೆ. ಅಲ್ಲಿನ ಅವ್ಯವಸ್ಥೆ ನೋಡಿದ ಅವರು, ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಾರುಕಟ್ಟೆಯ ಸ್ಥಿತಿ ಕೆಟ್ಟದಾಗಿದೆ. ಹೊಸದಾಗಿ ನಿರ್ಮಾಣವಾದ ಮಾರುಕಟ್ಟೆಯಲ್ಲಿ ಅವ್ಯವಸ್ಥೆ ಹೆಚ್ಚಾಗಿದೆ. ಇಲ್ಲಿ ಯಾರೊಬ್ಬರೂ ಬಾಡಿಗೆ ಪಡೆದು, ಪ್ರತಿ ತಿಂಗಳು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಹಣವನ್ನು ಪಾವತಿ ಮಾಡುತ್ತಿಲ್ಲ. ಇದನ್ನು ಸರಿಪಡಿಸಲು ನಿರ್ಧಾರ ಕೈಗೊಳ್ಳಲಿದ್ದೇವೆ. ಮೇಯರ್ ಗಂಗಾಬಿಕೆ, ಅಧಿಕಾರಿಗಳ ಜೊತೆಗೆ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಯಾವುದೇ ಅಂಗಡಿ ಮುಂಗಟ್ಟುಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಗೊತ್ತಿಲ್ಲ. ಹೀಗಾಗಿ ಮಾರುಕಟ್ಟೆ ಉಪ ಆಯುಕ್ತೆ ಮುನಿಲಕ್ಷ್ಮಿ ಅವರನ್ನು ಅಮಾನತುಗೊಳಿಸಿ ವರ್ಗಾವಣೆಗೆ ಆದೇಶ ನೀಡಿರುವೆ. ಸದ್ಯದಲ್ಲಿಯೇ ಹೊಸ ಉಪ ಆಯುಕ್ತರ ನೇಮಕ ಮಾಡಲಾಗುತ್ತದೆ. ಬೇರೆ ಕಡೆಯಲ್ಲಿ ಇಂತಹದ್ದೇ ಮಾರುಕಟ್ಟೆ ತರೆಯಲು ಚಿಂತನೆ ನಡೆಸಿದ್ದೇವೆ. ಮಾರುಕಟ್ಟೆಯಲ್ಲಿ ಅವ್ಯವ್ಯವಸ್ಥೆ ಹೆಚ್ಚಾಗಿದೆ. ಸ್ವಚ್ಛತೆ ಕೊರತೆಯಿದ್ದು, ಇಂತಹ ಆಹಾರ ಪದಾರ್ಥ ತಿಂದರೆ ಜನರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಹೀಗಾಗಿ 15 ದಿನದ ಒಳಗಡೆ ಎಲ್ಲಾ ವ್ಯವಸ್ಥೆ ಬದಲಾಗಬೇಕು ಅಂತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾರುಕಟ್ಟೆಯಲ್ಲಿ ತಿರುಗಾಡಿ, ಅವ್ಯವಸ್ಥೆಯನ್ನು ಪರಮೇಶ್ವರ್ ಅವರು ಕಣ್ಣಾರೆ ಕಂಡರು. ಬಳಿಕ ಅಧಿಕಾರಿಗಳ ಜೊತೆಗೆ ಮಾಹಿತಿ ಪಡೆದರು. ಈ ವೇಳೆ ಡಿಸಿಎಂ ಪರಮೇಶ್ವರ್ ಅವರ ಜೊತೆಗೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹಾಗೂ ಪಾಲಿಕೆ ಅಧಿಕಾರಿಗಳು ಇದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv