ಬೆಂಗಳೂರು: ಮಹಿಳಾ ಕೈದಿಗಳು ಡಿಸಿಎಂ ಪರಮೇಶ್ವರ್ ಅವರಿಗೆ ಘೇರಾವ್ ಹಾಕಿರುವ ಘಟನೆ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ನಡೆದಿದೆ.
ಸನ್ನಡತೆಯ ಆಧಾರದಲ್ಲಿ ಕೆಲ ಕೈದಿಗಳ ಅವಧಿ ಪೂರ್ವ ಬಿಡುಗಡೆ ಕಾರ್ಯಕ್ರಮ ಇಂದು ಏರ್ಪಡಿಸಲಾಗಿತ್ತು. ಈ ವೇಳೆ ಪರಮೇಶ್ವರ್ ಅವರ ವಿರುದ್ಧ ಮಹಿಳಾ ಕೈದಿಗಳು ಆಕ್ರೋಶ ಹೊರ ಹಾಕಿದ್ದಾರೆ. ಈ ಬಾರಿ ಬಿಡುಗಡೆ ಮಾಡಲಾಗುತ್ತಿರುವ ಕೈದಿಗಳ ಪಟ್ಟಿಯಲ್ಲಿ ಯಾವುದೇ ಮಹಿಳೆಯರು ಇಲ್ಲದೇ ಇರುವುದು ಕೈದಿಗಳು ಘೇರಾವ್ ಹಾಕಲು ಕಾರಣ ಎನ್ನಲಾಗಿದೆ. ಮಹಿಳಾ ಕೈದಿಗಳು ಘೇರಾವ್ ಹಾಕುತ್ತಿದಂತೆ ಎಚ್ಚೆತ್ತ ಜೈಲಿನ ಸಿಬ್ಬಂದಿ ಮಾಧ್ಯಮಗಳನ್ನು ಹೊರಕ್ಕೆ ಕಳುಹಿಸಿದ್ದಾರೆ.
ಇಂದು ನಡೆದ ಕಾರ್ಯಕ್ರಮದಲ್ಲಿ ಪರಮೇಶ್ವರ್ ಅವರು 79 ಮಂದಿ ಕೈದಿಗಳಿಗೆ ಬಿಡುಗಡೆ ಪತ್ರ ನೀಡಿದರು. ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಮಹಿಳಾ ಕೈದಿಗಳು ಘೇರಾವ್ ಹಾಕಿದಂತಹ ಯಾವುದೇ ಘಟನೆ ನಡೆದಿಲ್ಲ. ಜೈಲಿನ ಭದ್ರತೆ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು. ಇನ್ನು ಕಾರ್ಯಕ್ರಮದಲ್ಲಿ ಕಾರಾಗೃಹ ಎಡಿಜಿಪಿ ಮೇಘರಿಕ್ ಡಿಸಿಎಂಗೆ ಸಾಥ್ ನೀಡಿದರು.
ಈ ವೇಳೆ ಮಾತನಾಡಿದ ಎಡಿಜಿಪಿ, ಇಂದು 79 ಮಂದಿಗೆ ಬಿಡುಗಡೆ ಮಾಡಲಾಗಿದೆ. 14 ವರ್ಷ ಶಿಕ್ಷೆ ಅನುಭವಿಸಿದ ಕೈದಿ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಇದೇ ವೇಳೆ ಮಹಿಳಾ ಕೈದಿಗಳ ಪಟ್ಟಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸಂವಿಧಾನದ 161 ವಿಧಿ ಅನ್ವಯ ರಾಜ್ಯಪಾಲರು ಹಾಗೂ 171 ವಿಧಿ ಅನ್ವಯ ರಾಷ್ಟ್ರಪತಿಗಳು ಅನುಮತಿ ನೀಡಿದರೆ ಮಾತ್ರ ಬಿಡುಗಡೆ ಮಾಡಲು ಅವಕಾಶವಿದೆ. ಆದರೆ ಈ ಪಟ್ಟಿಯಲ್ಲಿ ಸರ್ಕಾರ ಮಟ್ಟದಲ್ಲಿ ಹಾಗೂ ಪೊಲೀಸ್ ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆಸಿ ಅರ್ಹರನ್ನು ಆಯ್ಕೆ ಮಾಡಲಾಗುತ್ತದೆ. ಅದ್ದರಿಂದ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗಿದ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv