ಬೆಳಗಾವಿ: ನೆರೆ ಪರಿಹಾರ ಕೇಳಲು ಹೋದ ರೈತರಿಗೆ ನನ್ನದು ನೂರು ಎಕರೆ ಜಮೀನು ಇದೆ, ಅಷ್ಟಕ್ಕೂ ಪರಿಹಾರ ನೀಡಿದರೆ ಒಂದು ಕೋಟಿ ಆಗುತ್ತೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಉಡಾಫೆ ಉತ್ತರ ನೀಡಿದ್ದಾರೆ.
ಕಳೆದ ರಾತ್ರಿ ಪ್ರವಾಹ ಪರಿಹಾರ ವಿತರಣೆ ಪರಿಶೀಲನೆ ಸಭೆಗೆ ಬಂದಿದ್ದ ರೈತರು ಪರಿಹಾರವನ್ನು ಎಕರೆಗೆ ಐವತ್ತು ಸಾವಿರದಿಂದ ಒಂದು ಲಕ್ಷ ಹೆಚ್ಚಿಸುವಂತೆ ಸಿಎಂ ಯಡಿಯೂರಪ್ಪ ಅವರನ್ನು ಒತ್ತಾಯ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ಸಿಎಂ ರಾಜ್ಯದಲ್ಲಿ ಹಣವಿಲ್ಲ, ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ ಪ್ರಕಾರ ಪರಿಹಾರ ನೀಡುವುದಾಗಿ ಹೇಳಿದ್ದಾರೆ.
ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ನಾವೇನೂ ಮಾಡಲು ಆಗಲ್ಲ ಕೇಂದ್ರ ಸರ್ಕಾರದಿಂದ ಪರಿಹಾರ ಬರುವವರೆಗೂ ಕಾಯಿರಿ ಎಂದು ಸಿಎಂ ರೈತರಿಗೆ ಸಮಜಾಯಿಷಿ ನೀಡಿದ್ದಾರೆ. ಸಿಎಂ ಅವರ ಉತ್ತರಕ್ಕೆ ಆಕ್ರೋಶಗೊಂಡ ರೈತ ಮುಖಂಡರು ವಿರೋಧ ಮಾಡಿದಾಗ ಅಡ್ಡ ಬಂದ ಡಿಸಿಎಂ ಲಕ್ಷ್ಮಣ ಸವದಿ, ನನ್ನದು ನೂರು ಎಕರೆ ಜಮೀನು ಇದೆ. ಅಷ್ಟಕ್ಕೂ ಪರಿಹಾರ ನೀಡಿದರೆ ಒಂದು ಕೋಟಿ ಆಗುತ್ತೆ ಎಂದು ಉಡಾಪೆ ಉತ್ತರ ನೀಡಿದ್ದಾರೆ.
ಸಿಎಂ ಹಾಗೂ ಡಿಸಿಎಂ ಹೇಳಿಕೆಗೆ ರೈತ ಮುಖಂಡರ ಕೆಂಡಾಮಂಡಲವಾಗಿದ್ದು, ಇಂದು ಸಿಎಂ ಭೇಟಿ ನೀಡುವ ಕಡೆಗಳೆಲ್ಲಾ ಘೇರಾವ್ ಹಾಕಿಲಿದ್ದೇವೆ. ಸರ್ಕಾರದ ಕಣ್ಣು ತೆರೆಸಲು ಘೇರಾವ್ ಹಾಕಲು ಚಿಂತನೆ ಮಾಡಿದ್ದೇವೆ ಎಂದು ರೈತ ಮುಖಂಡರು ಹೇಳಿದ್ದಾರೆ.