– ಕುಮಟಳ್ಳಿ, ನನ್ನ ಮಧ್ಯೆ ಭಿನ್ನಾಭಿಪ್ರಾಯಕ್ಕೆ ಯತ್ನ
ಚಿಕ್ಕೋಡಿ (ಬೆಳಗಾವಿ): ವೈರಲ್ ಆಗಿರುವ ವಿಡಿಯೋದಲ್ಲಿ ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಬಗ್ಗೆ ಮಾತನಾಡಿಲ್ಲ. ಅದು ಬೇರೆ ಕುಮಟಳ್ಳಿ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಡಿಸಿಎಂ ಲಕ್ಷ್ಮಣ ಸವದಿ, ಮಹಾ ಮಳೆಗೆ ಕೃಷ್ಣಾ ನದಿ ಪ್ರವಾಹ ಮಟ್ಟ ಮೀರಿ ಹರಿಯುತ್ತಿತ್ತು. ಈ ವೇಳೆ ಅಥಣಿ ಕ್ಷೇತ್ರದ ನೆರೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದಾಗ ಕೆಲ ಮಾಧ್ಯಮಗಳು ನಾನು ಫೋನ್‍ನಲ್ಲಿ ಮಾತನಾಡಿದ ದೃಶ್ಯವನ್ನು ಸೆರೆ ಹಿಡಿದಿದ್ದವು. ಆ ವಿಡಿಯೋವನ್ನು ಈಗ ಪ್ರಸಾರ ಮಾಡಿ ಮಹೇಶ್ ಕುಮಟಳ್ಳಿ ಅವರ ಬಗ್ಗೆ ಮಾತನಾಡಿದ್ದೇನೆ ಎಂಬಂತೆ ಬಿಂಬಿಸಲಾಗುತ್ತಿದೆ. ನಾನು ಅನರ್ಹ ಶಾಸಕರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ: ಮಹೇಶ್ ಕುಮಟಳ್ಳಿ ಬಗ್ಗೆ ಡಿಸಿಎಂ ಮಾತನಾಡಿದ್ದು ದುರ್ದೈವ: ರಮೇಶ್ ಜಾರಕಿಹೊಳಿ
Advertisement
Advertisement
ನಾನು ಮಾತಾಡಿರುವ ವಿಡಿಯೋ ಬೇರೆ ಕುಮಟಳ್ಳಿ ಅವರಿಗೆ ಸಂಬಂಧಿಸಿದ್ದು. ಅವರು ನಮ್ಮ ಸ್ನೇಹಿತರು. ಯಾವುದೋ ವಿಚಾರಕ್ಕೆ ಫೋನ್ ಮಾಡಿದ್ದರು. ಆಗ ನಾನು ಕುಮಟಳ್ಳಿ ಬಗ್ಗೆ ಯಾಕ ತಲೆ ಕೆಡಿಸಿಕೊಳ್ಳುತ್ತಿಯಾ, ಓಡಿ ಹೋಗತಾನೆ ಬಿಡು ಎಂದು ಹೇಳಿದ್ದೆ. ಆದರೆ ಈಗ ನಾನು ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಅವರ ಬಗ್ಗೆ ಮಾತನಾಡಿದ್ದೇನೆ ಎಂಬಂತೆ ತೋರಿಸಲಾಗುತ್ತಿದೆ ಎಂದು ಮಾಧ್ಯಮಗಳ ವಿರುದ್ಧವೇ ಆರೋಪ ಮಾಡಿದ್ದಾರೆ.
Advertisement
ಮಹೇಶ್ ಕುಮಟಳ್ಳಿ ಹಾಗೂ ನನ್ನ ಮಧ್ಯೆ ಭಿನ್ನಾಭಿಪ್ರಾಯ ತಂದಿಡಲು ಯಾರೋ ಸ್ಥಳೀಯ ನಾಯಕರು ಹೀಗೆ ಮಾಡಿದ್ದಾರೆ. ಉಪ ಚುನಾವಣೆಯ ಲಾಭ ಪಡೆಯಲು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಅನರ್ಹ ಶಾಸಕ ಹಾಗೂ ನನ್ನ ಮಧ್ಯೆ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ. ನಾವು ಸ್ನೇಹಿತರಾಗಿಯೇ ಇರುತ್ತೇವೆ. ಹೀಗಾಗಿ ವಿಡಿಯೋ ಬಗ್ಗೆ ಅಪಾರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.
Advertisement
ಸವದಿ ಹೇಳಿದ್ದೇನು?
ಕೃಷ್ಣಾ ನದಿ ಪ್ರವಾಹ ಪೀಡಿತ ಗ್ರಾಮಕ್ಕೆ ಲಕ್ಷ್ಮಣ ಸವದಿ ಭೇಟಿ ನೀಡಿದ್ದರು. ಈ ವೇಳೆ ಅಥಣಿ ಮತ ಕ್ಷೇತ್ರದ ಅನರ್ಹ ಶಾಸಕ ಮಹೇಶ್ ಕುಮಟಳ್ಳಿ ಕುರಿತು ಅಪನಿಂದನೆ ಮಾಡಿದ್ದಾರೆ. ಸವದಿ ತಮ್ಮ ಬೆಂಬಲಿಗನ ಜೊತೆ ಮೊಬೈಲ್ ಮಾತನಾಡುತ್ತಾ ಕುಮುಟಳ್ಳಿ ವಿರುದ್ಧ ಆಕ್ಷೇಪಾರ್ಹ ಮಾತಾಡಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪ್ರವಾಹ ಪೀಡಿತ ಗ್ರಾಮಗಳಿಗೆ ಸಂತ್ರಸ್ತರ ಅಳಲು ಕೇಳಲು ಹೋಗುತ್ತಿದ್ದಾಗ ಮೊಬೈಲ್‍ನಲ್ಲಿ ಮಾತನಾಡುತ್ತಾ ಮುಂಜಾನೆ ಕುಮಟಳ್ಳಿ ಅಂತಹ ದರಿದ್ರ ಮಕ್ಕಳ ಹೆಸರು ನೆನಪಿಸಬೆಡಿ. ಅವನ ಸುದ್ದಿ ತಗೊಂಡ್ ನಾನೇನು ಮಾಡಲಿ. ನನ್ನ ಮೂಡ್ ಹಾಳು ಮಾಡಬೇಡಿ ಎಂದಿದ್ದರು.
ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾಗಿ ಬಿಜೆಪಿ ಸರ್ಕಾರದ ಆಸ್ತಿತ್ವಕ್ಕೆ ಮಹೇಶ್ ಕುಮುಟಳ್ಳಿ ಬಲ ತುಂಬಿದ್ದರು. ಆದರೆ ಇದೀಗ ಅವರ ವಿರುದ್ಧವೇ ಡಿಸಿಎಂ ಗರಂ ಆಗಿರುವುದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.