ರಾಯಚೂರು: ಕೃಷ್ಣ ಮೇಲ್ದಂಡೆ ನೀರಾವರಿ ಯೋಜನೆ ಹೆಸರಲ್ಲಿ ಸುಳ್ಳು ಹೇಳಿ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ್ರು, ಪ್ರತಿ ವರ್ಷ 10,000 ಕೋಟಿ ಹಣ ಕೊಡುತ್ತೀವಿ ಎಂದು ಆಣೆ ಮಾಡಿ ನಯಾಪೈಸೆ ಕೊಡಲಿಲ್ಲ ಎಂದು ಡಿಸಿಎಂ ಗೋವಿಂದ ಕಾರಜೋಳ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ರಾಯಚೂರಿನ ಸಿಂಧನೂರಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ ಸಿದ್ದರಾಮಯ್ಯ ವಿರುದ್ಧ ವಾಕ್ಪ್ರಹಾರ ನಡೆಸಿದರು. ಹೊಸಪೇಟೆಯಿಂದ ಕೂಡಲ ಸಂಗಮದವರೆಗೂ ಪಾದಯಾತ್ರೆ ಮಾಡಿದರು. ಕೂಡಲ ಸಂಗಮನ ಮೇಲೆ ಸಿದ್ದರಾಮಯ್ಯ ಆಣೆ ಮಾಡಿ ನಯಾಪೈಸೆ ಕೊಡಲಿಲ್ಲ. ಹೀಗಾಗಿ ಕೃಷ್ಣ ಮೇಲ್ದಂಡೆ ಯೋಜನೆ ವಿಳಂಬವಾಗಿದೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ರಾಜ್ಯಕ್ಕೆ ಹಂಚಿಕೆಯಾದ ಕೃಷ್ಣ ನದಿಯ ಹನಿ ನೀರು ಸಹ ಬಳಸಿಕೊಳ್ಳಲು ಆಗಿಲ್ಲ. ರಾಜ್ಯಕ್ಕೆ 173 ಟಿಎಂಸಿ ನೀರು ಬಳಸಿಕೊಳ್ಳಲು ಆಗಿಲ್ಲ. ಇದೀಗ ಈ ಎಲ್ಲಾ ಕಾಮಗಾರಿಗೆ 51,000 ಕೋಟಿ ಹಣದ ಅಗತ್ಯವಿದೆ. ಬಿಎಸ್‍ವೈ ನೇತೃತ್ವದ ಸರ್ಕಾರ ಕೃಷ್ಣ ನದಿ ನೀರು ಬಳಕೆಗೆ ಯೊಜನೆ ರೂಪಿಸುತ್ತಿದೆ. ತೆಲಂಗಾಣ ನದಿ ನೀರು ಹಂಚಿಕೆ ವಿಚಾರವಾಗಿ ಟ್ರಿಬುನಲ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸುಪ್ರಿಂಕೋರ್ಟ್‍ನಲ್ಲಿ ಹೋರಾಟ ನಡೆಸಲಿದೆ. ಕೃಷ್ಣ ನ್ಯಾಯಾಧಿಕರಣದಲ್ಲಿ ಹಂಚಿಕೆಯಾದ ನೀರು ಬಳಕೆಗೆ ಸರ್ಕಾರ ಸರ್ವ ಪ್ರಯತ್ನ ನಡೆಸಲಿದೆ ಎಂದರು.
Advertisement
Advertisement
ಸಿಎಎ ವಿರುದ್ಧದ ಹೋರಾಟದ ಹೆಸರಲ್ಲಿ ದೇಶದ್ರೋಹದ ಘೋಷಣೆ ಕೂಗುವುದನ್ನು ಸಹಿಸಲ್ಲ. ಯಾರೇ ಇದ್ರು ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತೆ. ಯಾರು ಕೂಡ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಯುವ ಜನಾಂಗ ದಾರಿ ತಪ್ಪಬಾರದು. ಪ್ರತಿ ಪಕ್ಷದವರು ಸಹ ಜನರಿಗೆ ತಪ್ಪು ಸಂದೇಶ ಕೊಡುವ ಕೆಲಸ ಮಾಡಬಾರದು ಎಂದು ಗೋವಿಂದ ಕಾರಜೋಳ ಹೇಳಿದರು.