ಬಾಗಲಕೋಟೆ: ರಾಜ್ಯದಲ್ಲಿ ಪೌರತ್ವ ಕಾಯ್ದೆ ಪರ-ವಿರೋಧ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಕಾಂಗ್ರೆಸ್ ಹಾಗೂ ಕೆಲ ಸಂಘಟನೆಗಳ ವಿರುದ್ಧ ಗರಂ ಆಗಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪೌರತ್ವ ಕಾಯ್ದೆಯಲ್ಲಿ ಕಾಂಗ್ರೆಸ್ ಮತ್ತು ಕೆಲವು ಸಂಘಟನೆಗಳು ದೇಶದ ಕೆಲ ಸಮುದಾಯ ಹಾಗೂ ಧರ್ಮಿಯರಿಗೆ ಗೊಂದಲ ಸೃಷ್ಟಿಮಾಡುತ್ತಿವೆ ಎಂದು ದೂರಿದರು. ಕಾಂಗ್ರೆಸ್ ಹಾಗೂ ಕೆಲವು ಸಂಘಟನೆಗಳು ಭಾವನಾತ್ಮಕವಾಗಿ ವಿಷಯಗಳನ್ನ ಕೆದಕುವ ಪ್ರಯತ್ನ ಮಾಡಿ, ದೇಶದ್ರೋಹಿ ಕೆಲಸ ಮಾಡ್ತಿದ್ದಾರೆಂದು ಆರೋಪಿಸಿದರು.
ಪೌರತ್ವ ಕಾಯ್ದೆಯನ್ನ ಕೇವಲ ಭಾರತ ದೇಶದಲ್ಲಿ ಅಷ್ಟೇ ತಂದಿಲ್ಲ, ಇಡೀ ಪ್ರಪಂಚದ ಎಲ್ಲಾ ದೇಶಗಳಲ್ಲಿ ಆಯಾ ದೇಶಗಳ ಸುರಕ್ಷತೆ ಹಾಗೂ ಭದ್ರತೆಗಾಗಿ ಇರುವ ಕಾನೂನು ಅದು. ಇಡೀ ಸಂಸತ್ ಕಾನೂನಿಗೆ ತಿದ್ದುಪಡಿಕೊಟ್ಟು, ಒಪ್ಪಿಗೆ ಕೊಟ್ಟಿದೆ. ಆದರೆ ಮುಸಲ್ಮಾನರಿಗೆ ಅನ್ಯಾಯವಾಗ್ತಿದೆ ಎಂದು ಕಾಂಗ್ರೆಸ್ಸಿನವರು ದೇಶದ ಉದ್ದಗಲಕ್ಕೂ ಬೊಬ್ಬೆ ಹಾಕ್ತಿದ್ದಾರೆ ಎಂದು ಕಿಡಿಕಾರಿದರು.
ಈ ದೇಶದಲ್ಲಿರುವ ಯಾವುದೇ ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಹಾಗೂ ಪಾರ್ಸಿ ಧರ್ಮಿಯರಿಗೆ ಅನ್ಯಾಯವಾಗಲ್ಲ. ಯಾರು ನಮ್ಮ ವೈರಿ ದೇಶದಿಂದ ಬಂದು ಅಕ್ರಮವಾಗಿ ವಲಸಿದ್ದಾರೋ, ಅವರನ್ನ ಪತ್ತೆ ಹಚ್ಚಿ, ಅವರನ್ನ ಇಲ್ಲಿ ಇಡಬೇಕೋ, ಇಡಬಾರದೋ ಅನ್ನುವುದರ ಬಗ್ಗೆ ತೀರ್ಮಾನ ಮಾಡಲಾಗುವುದು. ಅಂತವರನ್ನ ಪತ್ತೆ ಹಚ್ತೀವಿ ಅಂದರೆ ಕಾಂಗ್ರೆಸ್ಸಿನವರು ಯಾಕೆ ಅಡ್ಡಿ ಮಾಡುತ್ತಿದ್ದಾರೆಂದು ಖಾರವಾಗಿ ಪ್ರಶ್ನಿಸಿದರು.
ಅಕ್ರಮ ವಲಸಿಗರಿಂದ ಆರ್ಥಿಕ ವ್ಯವಸ್ಥೆ ಹಾಳು ಮಾಡುವ ಕೆಲಸ ಆಗುತ್ತಿದೆ. ದೇಶದಲ್ಲಿ ಭಯೋತ್ಪಾದನೆ ಚಟುವಟಿಕಗಳು ಆಗುತ್ತಿವೆ. ಇದನ್ನ ನಿಯಂತ್ರಣ ಮಾಡಬಾರದು ಅಂದರೆ ಯಾವ ನ್ಯಾಯ ಎಂದು ಪ್ರಶ್ನಿಸಿದರು. ಜೊತೆಗೆ ಕಾಂಗ್ರೆಸ್ಸಿಗೆ ಒಂದೇ ಚಿಂತೆ, ಅದು ಓಟ್ ಬ್ಯಾಂಕ್ ಚಿಂತೆ ಎಂದು ಡಿಸಿಎಂ ಟಾಂಗ್ ಕೊಟ್ಟರು. ಮುಸಲ್ಮಾನರು ಹಾಗೂ ಹರಿಜನ, ಗಿರಿಜನರನ್ನ ಓಟ್ ಬ್ಯಾಂಕ್ ಮಾಡಿದ್ದಾರೆ ಹೊರತು ಮತ್ತೇನು ಮಾಡಿಲ್ಲ ಎಂದು ಕೈ ವಿರುದ್ಧ ಕಿಡಿಕಾರಿದರು.