ಬೆಂಗಳೂರು: ಯಾರೋ ಬಾಲಕಿ ಮೂಲಕ ಪತ್ರ ಓದಿಸಿ ವಿಡಿಯೋ ಚಿತ್ರೀಕರಿಸಿದ್ದಾರೆ. ಅಲ್ಲಿ ಯಾವುದೇ ರೀತಿಯ ಪ್ರವಾಹ ಉಂಟಾಗಿಲ್ಲ. ರಸ್ತೆಯಲ್ಲಿ ನೀರು ನಿಂತಿದೆಯಷ್ಟೇ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಸ್ಪಷ್ಟಪಡಿಸಿದ್ದಾರೆ.
ಸಂತ್ರಸ್ತ ಬಾಲಕಿ ಪತ್ರ ಓದುವ ಮೂಲಕ ಪರಿಹಾರಕ್ಕೆ ಮನವಿ ಮಾಡಿದ ಕುರಿತು ಪ್ರತಿಕ್ರಿಯಿಸಿದ ಅವರು, ಮುಧೋಳ ತಾಲೂಕಿನ ರನ್ನ ಬೆಳಗಲಿ ಪ್ರವಾಹಕ್ಕೆ ಒಳಗಾಗಿಲ್ಲ, ಅದು ಕೋಡಿಹಾಳ ರಸ್ತೆ ರೈತರ ಹೊಲಗಳಿಗೆ ಹಾಗೂ ಸಣ್ಣ ಜನ ವಸತಿ ಇರುವ ಜಾಗಕ್ಕೆ ಹೋಗುವ ರಸ್ತೆ. ಅಲ್ಲಿ ಕೇವಲ ಮಳೆ ನೀರು ನಿಂತಿದೆ, ಪ್ರವಾಹ ಉಂಟಾಗಿಲ್ಲ. ಯಾರೋ ಒಬ್ಬರು ಈ ಪತ್ರವನ್ನು ಮಗುವಿನ ಕಡೆಯಿಂದ ಓದಿಸಿದ್ದಾರೆ. ಅಲ್ಲದೆ ಅದು ಪಿಡಬ್ಲ್ಯೂಡಿ ರಸ್ತೆಯಲ್ಲ ಪಟ್ಟಣ ಪಂಚಾಯಿತಿಗೆ ಸೇರಿದ ರಸ್ತೆ. ನಾನು ನಾಳೆ ಕ್ಷೇತ್ರಕ್ಕೆ ಹೊರಟಿದ್ದೇನೆ. ನೀವು ಬರುವುದಾದರೆ ಬೆಳಗಲಿಗೇ ಬನ್ನಿ. ನೀವೇ ಬಂದು ಬೆಳಗಲಿಯಲ್ಲಿ ನೋಡಿ, ಅಲ್ಲಿ ಸಮಸ್ಯೆ ಆಗಿಲ್ಲ ಎಂದರು.
ಈ ರಸ್ತೆಯನ್ನು ರಿಪೇರಿ ಮಾಡಲು ಸಹ ಸೂಚಿಸುತ್ತೇನೆ. ಈಗ ಮಳೆ ಇರುವುದರಿಂದ ಸಾಧ್ಯವಾಗಿಲ್ಲ. ಮಳೆ ನಿಂತ ನಂತರ ರಸ್ತೆ ರಿಪೇರಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು.
ಇಡೀ ರಾಜ್ಯದಲ್ಲಿ ಪ್ರವಾಹ ಹಾಗೂ ಮಳೆಯಿಂದ ಹಾನಿಯಾಗಿರುವ ಸಂತ್ರಸ್ತರಿಗೆ ಸರ್ಕಾರ ಸ್ಪಂದಿಸುತ್ತಿದೆ. ಉತ್ತರ ಕರ್ನಾಟಕದಲ್ಲಿ ಮಣ್ಣಿನ ಮನೆಗಳು ಹೆಚ್ಚಿವೆ. ಹೀಗಾಗಿ ಮನೆಗಳು ಬೀಳುತ್ತಿವೆ. ಮಳೆ ನಿಂತ ಮೇಲೆ ಸರ್ವೇ ನಡೆಸಿ, ಮನೆ ಕಟ್ಟಿಕೊಡಲು ಸರ್ಕಾರ ಬದ್ಧವಾಗಿದೆ. ಹಿಂದೆಂದೂ ಕಂಡರಿಯದ ಪ್ರವಾಹ ಸಂಭವಿಸಿದೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು, ಸಂಕಷ್ಟದಲ್ಲಿರುವವರ ಜನರ ಪರಿಹಾರಕ್ಕೆ ನೆರವಾಗಬೇಕು. ಈ ವಿಚಾರ ರಾಜಕೀಯಕ್ಕೆ ಬಳಕೆ ಮಾಡೋದು ಬೇಡ. ಇಡೀ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಯಾಗಿದೆ, ಸರ್ಕಾರ ರಚನೆಯಾದಾಗಿನಿಂದ ನಾವೂ ಅದೇ ಕೆಲಸದಲ್ಲಿದ್ದೇವೆ ಎಂದರು.
ಬಾಗಲಕೋಟೆಯಲ್ಲಿ 195 ಹಳ್ಳಿಗಳಿಗೆ ಪರಿಹಾರ ಕೊಟ್ಟಿದ್ದೇವೆ. ಹಲವು ಸಲ ಕ್ಷೇತ್ರಕ್ಕೆ ಹೋಗಿ ಬಂದಿದ್ದೇನೆ. ಯಾರೋ ರಾಜಕೀಯ ಮಾಡುವವರು ಶಾಸಕರು ಎಲ್ಲಿ ಎಂದು ಕೇಳುತ್ತಿದ್ದಾರೆ. ನಾನು ಕ್ಷೇತ್ರದಲ್ಲೇ ಇದ್ದೇನೆ, ಜನರ ಸಂಕಷ್ಟಕ್ಕೆ ಸ್ಪಂದಿಸುತ್ತಿದ್ದೇನೆ ಎಂದು ತಿಳಿಸಿದರು.